Advertisement

ಬೀದರ್: ಒಂದೇ ದಿನ ಕೋವಿಡ್ ಗೆ 8 ಬಲಿ : 102 ಹೊಸ ಪ್ರಕರಣ

08:05 PM Aug 18, 2020 | Mithun PG |

ಬೀದರ್: ಗಡಿ ನಾಡು ಬೀದರ್ ಗೆ ಬೆಂಬಿಡದೇ ಕಾಡುತ್ತಿರುವ ಕೋವಿಡ್  ಸೋಂಕು ಮಂಗಳವಾರ ಒಂದೇ ದಿನ 8 ಜನರನ್ನು ಬಲಿ ಪಡೆದಿದ್ದು, 102 ಜನ ಹೊಸಬರಿಗೆ ವೈರಸ್ ಒಕ್ಕರಿಸಿದೆ.

Advertisement

ಕಳೆದೆರಡು ದಿನಗಳಿಂದ ಸಾವಿನ ರಣಕೇಕೆ ಕೊಂಚ ನಿಲ್ಲಿಸಿದ್ದ ಕೋವಿಡ್ ಮತ್ತೆ ತನ್ನ ಆರ್ಭಟ ಶುರು ಮಾಡಿದ್ದು, 8 ಜನ ಸಾವಿನ ಕದ ತಟ್ಟಿದ್ದಾರೆ. ಇವರಲ್ಲಿ ಇಬ್ಬರು ಯುವಕರು ಸೇರಿರುವುದು ಆತಂಕವನ್ನು ಹೆಚ್ಚಿಸಿದೆ. ಮಾತ್ರವಲ್ಲದೆ ಮೃತ ಎಂಟೂ ಜನರಿಗೆ ಪ್ರಯಾಣದ ಹಿಸ್ಟರಿಯೂ ಇಲ್ಲ ಮತ್ತು ಯಾರ ಸಂಪರ್ಕಕ್ಕೆ ಬಂದಿದ್ದಾರೆ ಎಂಬುದೂ ತಿಳಿದಿಲ್ಲವಾಗಿದೆ.

ಬೀದರನ ಪನ್ಸಾಲ್ ತಾಲಿಂ ಬಡಾವಣೆಯ 34 ವರ್ಷದ ಮಹಿಳೆ, ಈಡಗೇರಿಯ 65  ವರ್ಷದ ಮಹಿಳೆ, ಏಡೆನ್ ಕಾಲೊನಿಯ 62 ವರ್ಷದ ವೃದ್ಧ, ಹುಮನಾಬಾದ ಪಟ್ಟಣದ ಟೀಚರ್ಸ್ ಕಾಲೋನಿಯ 55 ವರ್ಷದ ಮಹಿಳೆ, ಬಸವ ಕಲ್ಯಾಣ ತಾಲೂಕಿನ ಸೆರೋರಿಯ 30 ವರ್ಷದ ವ್ಯಕ್ತಿ, ಹುಮನಾಬಾದ ತಾಲೂಕಿನ ಮಾಣಿಕನಗರದ 65 ವರ್ಷದ ವೃದ್ಧ, ಔರಾದ ತಾಲೂಕಿನ ಸಂತಪುರದ 32 ವರ್ಷದ ವ್ಯಕ್ತಿ ಹಾಗೂ ಭಾಲ್ಕಿ ತಾಲೂಕಿನ ಮದಕಟ್ಟಿ ಗ್ರಾಮದ 24 ವರ್ಷದ ಯುವಕ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ವೈರಾಣುವಿನಿಂದ ಮೃತಪಟ್ಟವರ ಸಂಖ್ಯೆ 116ಕ್ಕೆ ಏರಿಕೆಯಾಗಿದೆ

ಇಂದು ಹೊಸದಾಗಿ ಪತ್ತೆಯಾಗಿರುವ 102 ಪ್ರಕರಣಗಳಲ್ಲಿ ಬೀದರ ನಗರ- ತಾಲೂಕಿನ 45, ಬಸವಕಲ್ಯಾಣ- ಹುಲಸೂರು ತಾಲೂಕಿನ 31, ಹುಮನಾಬಾದ- ಚಿಟಗುಪ್ಪ ತಾಲೂಕಿನ 10, ಭಾಲ್ಕಿ ತಾಲೂಕಿನ 9, ಔರಾದ-ಕಮಲನಗರ ತಾಲೂಕಿನ 6 ಹಾಗೂ ಅನ್ಯ ರಾಜ್ಯ- ಜಿಲ್ಲೆಯ ಒಬ್ಬರು ಸೇರಿ 102 ಕೇಸ್ ಪತ್ತೆಯಾಗಿವೆ

ಜಿಲ್ಲೆಯಲ್ಲಿ ಈಗ ಒಟ್ಟು ಸೋಂಕಿತರ ಸಂಖ್ಯೆ 3748ಗೆ ಏರಿಕೆಯಾಗಿದೆ. ಇಂದು ಒಂದೇ ದಿನ 75 ಜನ ಸೇರಿ ಈವರೆಗೆ 2592 ಸೋಂಕಿತರು ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇನ್ನೂ 1036 ಸಕ್ರೀಯ ಪ್ರಕರಣಗಳಿವೆ. ಇದುವರೆಗೆ ಜಿಲ್ಲೆಯ 52,978 ಜನರ ಗಂಟಲ ಮಾದರಿಯ ತಪಾಸಣೆ ನಡೆಸಲಾಗಿದ್ದು, ಈ ಪೈಕಿ 53,746 ಮಂದಿಯ ವರದಿ ನೆಗೆಟಿವ್ ಬಂದಿದ್ದು, ಇನ್ನೂ 484 ಜನರ ವರದಿ ಬರವುದು ಬಾಕಿ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next