ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ವರ್ಷಕ್ಕೆ ಎರಡು ಬಾರಿ ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಕಾಶ ನೀಡಲು ಭಾರತೀಯ ವಿಶ್ವವಿದ್ಯಾನಿಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆ ಗಳಿಗೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ(ಯುಜಿಸಿ) ಅನುಮತಿ ನೀಡಿದೆ. ಯುಜಿಸಿಯ ಈ ನಿರ್ಧಾರ ಸ್ವಾಗತಾರ್ಹವಾದರೂ ಜಾರಿಗೂ ಮುನ್ನ ಇದರ ಸಾಧಕ-ಬಾಧಕಗಳ ಕುರಿತಂತೆ ಇನ್ನಷ್ಟು ವಿಸ್ತೃತ ಅಧ್ಯಯನ ನಡೆಸುವ ಅಗತ್ಯವಿದೆ. ಶೈಕ್ಷಣಿಕ ಸಾಲಿನಲ್ಲಿ ಎರಡು ಬಾರಿ ಅಂದರೆ ಜುಲೈ-ಆಗಸ್ಟ್ ಮತ್ತು ಜನವರಿ-ಫೆಬ್ರವರಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ವಿ.ವಿ.ಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ನಿಗದಿತ ಅವಧಿಯಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಯುಜಿಸಿಯ ಈ ನಿರ್ಧಾರದಿಂದ ಬಹಳಷ್ಟು ಅನುಕೂಲವಾಗಲಿದೆ. ಇದರ ಜತೆಯಲ್ಲಿ ಶೈಕ್ಷಣಿಕ ಸಂಸ್ಥೆಗಳು ಮತ್ತು ವಿ.ವಿ.ಗಳು ತಮ್ಮಲ್ಲಿ ಲಭ್ಯವಿರುವ ಬೋಧಕ ವರ್ಗ, ಪ್ರಯೋಗಾಲಯ, ಕೊಠಡಿ ಮತ್ತಿತರ ಸೌಲಭ್ಯ ಯಾ ವ್ಯವಸ್ಥೆಗಳನ್ನು ಅತ್ಯಂತ ಯೋಜನಾಬದ್ಧವಾಗಿ ಬಳಸಿಕೊಳ್ಳಲು ಸಹಕಾರಿಯಾಗಲಿದೆ. ಈ ಹೊಸ ವ್ಯವಸ್ಥೆಯ ಜಾರಿಯಿಂದ ಉದ್ಯಮಗಳು ಮತ್ತು ಕಂಪೆನಿಗಳು ವರ್ಷಕ್ಕೆ ಎರಡು ಬಾರಿ ಕ್ಯಾಂಪಸ್ ಸಂದರ್ಶನ ನಡೆಸಿ ಅರ್ಹರನ್ನು ನೇಮಕಾತಿ ಮಾಡಿಕೊಳ್ಳಲು ಅವಕಾಶ ಲಭಿಸಲಿದೆ. ಇದರಿಂದ ಸಹಜವಾಗಿಯೇ ಪದವೀಧರ ವಿದ್ಯಾರ್ಥಿಗಳಿಗೆ ಔದ್ಯೋಗಿಕ ಅವಕಾಶಗಳು ಇನ್ನಷ್ಟು ಹೆಚ್ಚಲಿವೆ. ವಿದೇಶಗಳಲ್ಲಿ ಇಂತಹ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿರುವುದರಿಂದ ಶೈಕ್ಷಣಿಕ ಸಹಯೋಗ, ವಿದ್ಯಾರ್ಥಿಗಳ ವಿನಿಮಯ ಮತ್ತಿತರ ಶೈಕ್ಷಣಿಕ ಸಂಬಂಧ ವೃದ್ಧಿಗೆ ಈ ವಿನೂತನ ಕ್ರಮ ಪೂರಕವಾಗಲಿದೆ. ಇದೇ ವೇಳೆ ವರ್ಷಕ್ಕೆ ಎರಡು ಬಾರಿ ಪ್ರವೇಶಾತಿ ಎಲ್ಲ ವಿ.ವಿ.ಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕಡ್ಡಾಯವಲ್ಲ ಎಂದು ಯುಜಿಸಿ ಸ್ಪಷ್ಟಪಡಿಸಿದೆ.
ಕಳೆದ ಶೈಕ್ಷಣಿಕ ಸಾಲಿನಲ್ಲಿ ಯುಜಿಸಿ ಮುಕ್ತ ಮತ್ತು ದೂರ ಶಿಕ್ಷಣ ವ್ಯವಸ್ಥೆಯಲ್ಲಿ ಇಂತಹುದೇ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ಇದಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ, ದಾಖಲಾತಿಯಲ್ಲಿ ಭಾರೀ ಹೆಚ್ಚಳ ಕಂಡುಬಂದ ಹಿನ್ನೆಲೆಯಲ್ಲಿ ಈಗ ಈ ವ್ಯವಸ್ಥೆಯನ್ನು ವಿ.ವಿ.ಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ವಿಸ್ತರಿಸಲು ಯುಜಿಸಿ ತೀರ್ಮಾನಿಸಿದೆ.
ವಿದ್ಯಾರ್ಥಿಗಳ ಭವಿಷ್ಯ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಬೇಕೆಂಬ ದೂರದೃಷ್ಟಿಯಿಂದ ಯುಜಿಸಿಯ ಈ ನಿರ್ಧಾರ ಕೈಗೊಂಡಿದೆ. ಆದರೆ ಈ ವ್ಯವಸ್ಥೆ ಜಾರಿ ವೇಳೆ ಯಾವುದೇ ಆತುರ ಸಲ್ಲದು. ಪ್ರತೀ ಹಂತದಲ್ಲೂ ಯುಜಿಸಿ ಎಚ್ಚರಿಕೆ ಹೆಜ್ಜೆ ಇರಿಸಬೇಕು. ದೇಶದಲ್ಲಿನ ಹಲವಾರು ವಿವಿಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಗಲೂ ಮೂಲ ಸೌಕರ್ಯ ಸಹಿತ ಇತರ ಸೌಲಭ್ಯಗಳ ಕೊರತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ವರ್ಷಕ್ಕೆ ಎರಡೆರಡು ಬಾರಿ ಪ್ರವೇಶಾತಿಗೆ ಅವಕಾಶ ಮಾಡಿಕೊಡುವ ಮೂಲಕ ವಿದ್ಯಾರ್ಥಿಗಳು ಮತ್ತವರ ಹೆತ್ತವರಿಂದ ಶುಲ್ಕದ ಹೆಸರಿನಲ್ಲಿ ಹಣ ಸುಲಿಗೆ ಮಾಡುವ ದಂಧೆಗೆ ಉನ್ನತ ಶಿಕ್ಷಣ ಸಂಸ್ಥೆಗಳು ಇಳಿಯದಂತೆ ಯುಜಿಸಿ ಕಣ್ಗಾವಲಿರಿಸಬೇಕು.
ಮುಕ್ತ ಮತ್ತು ದೂರಶಿಕ್ಷಣ ವ್ಯವಸ್ಥೆಗೂ, ತರಗತಿ ಕಲಿಕೆಗೂ ಅಜಗಜಾಂತರವಿರುವುದರಿಂದ ಅಲ್ಲಿ ಈ ಪ್ರಯೋಗ ಯಶಸ್ವಿಯಾಗಿದೆ ಎಂದು ವಿ.ವಿ., ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಅದನ್ನು ಅಳವಡಿಸುವುದು ಅಷ್ಟೇನೂ ಸುಲಭಸಾಧ್ಯವಲ್ಲ. ಬೋಧಕ ವರ್ಗದ ಮೇಲೂ ಹೆಚ್ಚುವರಿ ಒತ್ತಡ ಬೀಳುವುದರ ಜತೆಯಲ್ಲಿ ಅದು ಬೋಧನೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿ ಇವೆಲ್ಲದರ ಕುರಿತಂತೆ ಯುಜಿಸಿ ಇನ್ನಷ್ಟು ಗಂಭೀರ ಅಧ್ಯಯನ ನಡೆಸಿ, ಹೊಸ ವ್ಯವಸ್ಥೆಯ ಸಮರ್ಪಕ ಜಾರಿಗೆ ಸ್ಪಷ್ಟ ಕಾರ್ಯಯೋಜನೆಯನ್ನು ಸಿದ್ಧಪಡಿಸಬೇಕು. ಇದಾದ ಬಳಿಕವಷ್ಟೆ ಈ ನಿರ್ಧಾರವನ್ನು ಜಾರಿಗೆ ತಂದಲ್ಲಿ ಯುಜಿಸಿಯ ಉದ್ದೇಶಿತ ಗುರಿ ಈಡೇರಲು ಸಾಧ್ಯ.