Advertisement

ಉದ್ಯೋಗ ಖಾತ್ರಿಗೆ ಭುವನ್‌ ಆ್ಯಪ್‌; ಇನ್ನು ವಂಚನೆ ಅಸಾಧ್ಯ

11:59 AM Nov 24, 2017 | |

ಬೆಳ್ತಂಗಡಿ: ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಗೋಲ್‌ಮಾಲ್‌ ತಡೆಗೆ ಸರಕಾರ ಇನ್ನೊಂದು ಹೆಜ್ಜೆ ಇಟ್ಟಿದೆ. ನ.1ರಿಂದ ಭುವನ್‌ ಆ್ಯಪ್‌ ಮೂಲಕ ಕಾಮಗಾರಿ ಹಂತಗಳ ಫೋಟೋಗಳನ್ನು ಜಿಪಿಎಸ್‌ ಮೂಲಕ ಅಪ್‌ಲೋಡ್‌ ಮಾಡಲು ಸುತ್ತೋಲೆ ಹೊರಡಿಸಿದೆ. ಇದು ಪಂಚಾಯತ್‌ನವರಿಗೆ ಒಂದಷ್ಟು ಅಸಮಾಧಾನಕ್ಕೆ ಕಾರಣವಾದರೆ ಪಾರದರ್ಶಕ ವ್ಯವಸ್ಥೆ ಬಗ್ಗೆ ಜನರಿಗೆ ಸಂತಸ ತಂದಿದೆ. ಈ ಮಧ್ಯೆ ಕೂಲಿ ಹಣ ವಿಳಂಬವಾಗುತ್ತಿದೆ ಎಂಬ ದೂರೂ ಕೇಳಿಬಂದಿದ್ದು, ದ.ಕ. ಜಿಲ್ಲೆಯಲ್ಲಿ 3.59 ಕೋ.ರೂ. ಕೂಲಿ ಹಣ ಸರಕಾರದಿಂದ ಪಾವತಿಗೆ ಬಾಕಿಯಿದೆ.

Advertisement

ಭುವನ್‌ ಆ್ಯಪ್‌ ಫೇಸ್‌ 1
ಈ ಮೊದಲು ಕೂಡ ಉದ್ಯೋಗ ಖಾತ್ರಿಯ ಕಾಮಗಾರಿಗಳ ವಿವರವನ್ನು ಭುವನ್‌ ಆ್ಯಪ್‌ನ ಫೇಸ್‌ 1ರಲ್ಲಿ ಅಪ್‌ಲೋಡ್‌ ಮಾಡಲಾಗುತ್ತಿತ್ತು. ಆದರೆ ಅದಕ್ಕೆ ಸಮಯ ಪಾಲನೆ ಮಾಡುತ್ತಿರಲಿಲ್ಲ. ಯಾವಾಗಲೋ ಫೋಟೋ ಹಾಕಿ ಬಳಿಕ ಜಿಪಿಎಸ್‌ಗೆ ಟ್ಯಾಗ್‌ ಮಾಡಲಾಗುತ್ತಿತ್ತು. ಒಂದೇ ಹೆಸರಲ್ಲಿ ಎರಡು, ಮೂರು ಕಾಮಗಾರಿಗಳಾಗಿದ್ದುದೂ ಉಂಟು. ಇದೆಲ್ಲಕ್ಕೆ ಕಡಿವಾಣ ಹಾಕಲು ಈಗ ಭುವನ್‌ ಆ್ಯಪ್‌ ಫೇಸ್‌ 2 ಬಂದಿದೆ. 

ಭುವನ್‌ ಆ್ಯಪ್‌ ಫೇಸ್‌ 2 ಹೇಗಿದೆ? 
ನ.1ರ ಸುತ್ತೋಲೆ ಪ್ರಕಾರ ನರೇಗಾ ಕಾಮಗಾರಿ ಹಂತಗಳನ್ನು  ಭುವನ್‌ ಆ್ಯಪ್‌ ಫೇಸ್‌2ನಲ್ಲಿ ಅಪ್‌ಲೋಡ್‌ ಮಾಡಬೇಕು. ಸಂಬಂಧಪಟ್ಟ ಪಂಚಾ ಯತ್‌ಗಳು ಕಾಮಗಾರಿ ವಿವರ ಹಾಕಬೇಕು. ಇದು ತಾ.ಪಂ.ನಲ್ಲಿ ಅನುಮೋದನೆಯಾದ ಬಳಿಕ  ಕಾಮ ಗಾರಿಯ ವಿವರಗಳು ಆ್ಯಪ್‌ನಲ್ಲಿ ಕಾಣಿಸುತ್ತವೆ. ಆ ಸ್ಥಳದ ಫೋಟೋ, ಸಾಮಗ್ರಿಗಳ ಪಟ್ಟಿ, ಕೂಡ ಅಪ್‌ಲೋಡ್‌ ಮಾಡಬೇಕು. ಇವೆಲ್ಲ ತಾ.ಪಂನಲ್ಲಿ ಅನುಮೋದನೆ ಬಳಿಕವಷ್ಟೇ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯ. ಶೇ.30ರಿಂದ 60 ಕಾಮಗಾರಿ ಮುಗಿದ ಬಳಿಕ ಮತ್ತೆ ಫೋಟೋ ಹಾಕಬೇಕು. ಅದೂ ಅನುಮೋದನೆಯಾದ ಬಳಿಕ ಉದ್ಯೋಗ ಖಾತ್ರಿಯ ವೇತನ ಆಯಾ ಖಾತೆಗೆ ಜಮೆಯಾಗುತ್ತದೆ. ಕಾಮಗಾರಿ ಮುಕ್ತಾಯದ ಬಳಿಕವೂ ಫೋಟೋ ಹಾಕಬೇಕು. ಅನಂತರ ಬ್ಯಾಂಕ್‌ ಮೂಲಕ ಆಯಾ ಖಾತೆದಾರರಿಗೆ ನೇರ ವೇತನ ಪಾವತಿಯಾಗುತ್ತದೆ.   

ವಂಚನೆ ಅಸಾಧ್ಯ
ಈ ಮೊದಲು ಕಾಮಗಾರಿ ಪೂರ್ಣ ವಾದ ಬಳಿಕ ಫ‌ಲಾನುಭವಿ ನೀಡಿದ ಫೋಟೋವನ್ನೇ ಪಂಚಾಯತ್‌ನಲ್ಲಿ ವೆಬ್‌ಗ ಹಾಕಲಾಗುತ್ತಿತ್ತು. ಆತನಿಗೆ ಒಮ್ಮೆಲೆ ಅನುದಾನ ಲಭಿಸುತ್ತಿತ್ತು. ಈಗ ಹಾಗಾಗಲ್ಲ. ಕಾಮಗಾರಿ ನಡೆ ಯುವ  ಜಾಗದ ಮಾಹಿತಿ (ಜಿಪಿಎಸ್‌ ಆಧಾರಿತ) ಅಪ್‌ಲೋಡ್‌ ಆಗದೇ ಉದ್ಯೋಗ ಖಾತ್ರಿ ಹಾಜರಾತಿ ಹಾಕಲು ಸಾಧ್ಯವಾಗುವುದಿಲ್ಲ. ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿಯೇ ಇದನ್ನು ಮಾಡಬೇಕಾಗುತ್ತದೆ. ಎಲ್ಲ ಕೆಲಸ ಕಚೇರಿಯಿಂದ ಎಂಬವರಿಗೆ ಕಷ್ಟವಾ ಗಲಿದೆ. ಒಂದೇ ಕಾಮಗಾರಿಗೆ ಆಗಾಗ ಬಿಲ್‌ ಮಾಡುತ್ತಿದ್ದವರಿಗೆ ಸಂಕಷ್ಟ ವಾಗಿದೆ. ಶೇ.60 ಕಾಮಗಾರಿ ಆದ ಕೂಡಲೇ ಬಿಲ್‌ ಆಗಿಯೇ ಆಗುತ್ತದೆ. ಅದಾಗದೇ ಮುಂದುವರಿಯುವಂತಿಲ್ಲ. ಹಾಗಾಗಿ ಖಾತ್ರಿ ಕೂಲಿಗೂ ಸಮಸ್ಯೆಯಿಲ್ಲ.

ಜನ ಇಲ್ಲ
ಉದ್ಯೋಗ ಖಾತ್ರಿ ಮೂಲಕ ಕೇವಲ ಸರಕಾರದ ಕಾಮಗಾರಿಗಳಷ್ಟೇ ಅಲ್ಲ ಖಾಸಗಿ ಜಾಗದಲ್ಲಿ  ಕೃಷಿ, ತೋಟಗಾರಿಕೆಗೆ ನಡೆಸುವ ಕಾಮಗಾರಿಗಳಿಗೂ ಕೂಲಿ ನೀಡಲಾಗುತ್ತದೆ. ವ್ಯಕ್ತಿಯೊಬ್ಬನ ಕೃಷಿ ಜಾಗದಲ್ಲಿ ಮಾಡಿದ ಕೃಷಿಹೊಂಡದ ಫಲಾನುಭವಿ ಆತನೊಬ್ಬನೇ ಆದರೂ ಅದರ ವೇತನ ಉದ್ಯೋಗ ಖಾತ್ರಿ ಮೂಲಕ ಪಡೆಯಲು ಅನುಕೂಲ ಕಲ್ಪಿಸಲಾಗಿದೆ. ದಕ್ಷಿಣ ಕನ್ನಡದಂತಹ ಜಿಲ್ಲೆಗಳಲ್ಲಿ ಸರಕಾರದ ಕೂಲಿ ಸಾಕಾಗುವುದಿಲ್ಲ ಎಂದು ಖಾತ್ರಿ ಕೂಲಿಗೆ ಜನ ದೊರೆಯುತ್ತಿಲ್ಲ. ಕೂಲಿ ಕಾರ್ಮಿಕರ ಸಮಸ್ಯೆಯಿಂದ ಕೆಲವೆಡೆ ಯಂತ್ರಗಳಲ್ಲಿ ಮಾಡಲಾಗುತ್ತಿದೆ.

Advertisement

ಸರಕಾರದಿಂದ 3.59 ಕೋ.ರೂ. ಕೂಲಿ ಬಾಕಿ
ಈ  ವರ್ಷ ಎಪ್ರಿಲ್‌ನಿಂದ ದ.ಕ. ಜಿಲ್ಲೆಯಲ್ಲಿ 33.47 ಕೋ.ರೂ.ಗಳ ಕಾಮಗಾರಿ ಉದ್ಯೋಗಖಾತ್ರಿ ಯೋಜನೆ ಮೂಲಕ ನಡೆಸಲಾಗಿದೆ. ಬೆಳ್ತಂಗಡಿ ತಾಲೂಕು ಮುಂಚೂಣಿಯಲ್ಲಿದ್ದು ಇಲ್ಲಿ 9.74 ಕೋ.ರೂ., ಬಂಟ್ವಾಳದಲ್ಲಿ 6.13 ಕೋ.ರೂ., ಮಂಗಳೂರಿನಲ್ಲಿ 5.06 ಕೋ.ರೂ., ಪುತ್ತೂರಿನಲ್ಲಿ 7.73 ಕೋ.ರೂ., ಸುಳ್ಯದಲ್ಲಿ  4.80 ಕೋ.ರೂ.ಗಳ ಕಾಮಗಾರಿ ನಡೆದಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ವರ್ಷ 15 ಕೋ.ರೂ.ಗಳ ಕಾಮಗಾರಿಯನ್ನು ಉದ್ಯೋಗಖಾತ್ರಿ ಮೂಲಕ ನಡೆಸಲಾಗಿತ್ತು. ಆ.15ರವರೆಗೆ ಕೂಲಿಯ ವೇತನವನ್ನು ಆಯಾ ಖಾತೆದಾರರಿಗೆ ಹಾಕಲಾಗಿದೆ. ಅನಂತರ ದ.ಕ.ದಲ್ಲಿ ಸುಮಾರು 3.59 ಕೋ.ರೂ. ಕೂಲಿ ಬಾಕಿಯಿದೆ. ಸಾಮಗ್ರಿಗಳ 2.98 ಕೋ.ರೂ. ಹಣ ಬಾಕಿ ಇಡಲಾಗಿದೆ.

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next