Advertisement

ಅಮಿತ್‌ ಶಾಗೂ ಮುನ್ನ ರಾಜ್ಯಕ್ಕೆ ಬರಲಿದ್ದಾರೆ ಭೂಪೇಂದ್ರ

06:00 AM Dec 20, 2017 | Team Udayavani |

ಬೆಂಗಳೂರು: ಗುಜರಾತ್‌, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫ‌ಲಿತಾಂಶದ ಬಳಿಕ “ಇನ್ನೇನಿದ್ದರೂ ನಮ್ಮ ಗುರಿ ಕರ್ನಾಟಕ’ ಎಂದು ಘೋಷಿ ಸಿದ್ದ ಅಮಿತ್‌ ಶಾ ಆ ಗುರಿ ತಲುಪಲು ತಮ್ಮ ಪರಮಾಪ್ತ ಭೂಪೇಂದ್ರ ಯಾದವ್‌ ಅವರನ್ನು ರಾಜ್ಯಕ್ಕೆ ಕಳುಹಿಸಲಿದ್ದಾರೆ.

Advertisement

ಅಮಿತ್‌ ಶಾ ಅವರು ರಾಜ್ಯಕ್ಕೆ ಆಗಮಿಸುವ ಮುನ್ನವೇ ಭೂಪೇಂದ್ರ ಯಾದವ್‌ ಕರ್ನಾಟಕಕ್ಕೆ ಬರಲಿದ್ದು, ಶಾ ಬರುವ ವೇಳೆಗೆ ಅವರು ಮಾಡಬೇಕಾದ ಕೆಲಸಗಳಿಗೆ ಪೂರಕ ಸರಕುಗಳನ್ನು ಸಿದ್ಧಪಡಿಸಲಿದ್ದಾರೆ. ಅಮಿತ್‌ ಶಾ ಅವರು ರಾಜ್ಯ ಬಿಜೆಪಿ ಬಗ್ಗೆ ಹೊಂದಿರುವ ಅಭಿಪ್ರಾಯಕ್ಕೆ ಮಾನದಂಡವೇ ಭೂಪೇಂದ್ರ ಯಾದವ್‌ ನೀಡುವ ವರದಿ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿ ಶಾ ಅವರಿಗಿಂತ ಯಾದವ್‌ ಆಗಮನವೇ ಹೆಚ್ಚು ಮಹತ್ವದ್ದಾಗಿದೆ.

ಗುಜರಾತ್‌, ಹಿಮಾಚಲ ಪ್ರದೇಶದಲ್ಲಿ ಗೆಲ್ಲುತ್ತಿದ್ದಂತೆ ಸಂಭ್ರಮಾಚರಣೆ ವೇಳೆ ಅಮಿತ್‌ ಶಾ ಅವರು, ಇನ್ನು ವಿರಮಿಸುವ ಮಾತೇ ಇಲ್ಲ. ನಮ್ಮ ಮುಂದಿನ ಗುರಿ ಕರ್ನಾಟಕ. ಅಲ್ಲಿಯೂ ಇದೇ ರೀತಿ ಗೆಲುವನ್ನು ಕಾಣೋಣ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಭೂಪೇಂದ್ರ ಯಾದವ್‌ ಅವರಿಗೆ ಸಿದ್ಧತೆಯ ಜವಾಬ್ದಾರಿ ವಹಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಭೂಪೇಂದ್ರ ಯಾದವ್‌ ಬಗ್ಗೆ ಏಕೆ ಆತಂಕ?: ಯುದ್ಧಭೂಮಿಯಲ್ಲಿ ಭಾಗವಹಿಸದೆ ಯುದ್ಧ ಗೆಲ್ಲಬಲ್ಲ ಸೇನಾನಿ ಎಂದು ಕರೆಸಿಕೊಳ್ಳುವ ಭೂಪೇಂದ್ರ ಯಾದವ್‌ ಅವರು ಅಮಿತ್‌ ಶಾ ಅವರು ಯಾವುದಾದರೂ ರಾಜ್ಯಕ್ಕೆ ಭೇಟಿ ನೀಡುವ ಮುನ್ನವೇ ಬಂದು ಸ್ಥಳೀಯ ಪರಿಸ್ಥಿತಿ ತಿಳಿದು ಕೊಂಡು ವರದಿ ನೀಡುತ್ತಾರೆ. ಇರುವ ಸಮಸ್ಯೆಗಳನ್ನು ಅರಿತು ಅದಕ್ಕೆ ಯಾವ ರೀತಿ ಮದ್ದರೆಯಬೇಕು ಎಂಬುದನ್ನೂ  ಹೇಳುತ್ತಾರೆ. ಅಷ್ಟೇ ಅಲ್ಲ, ಸ್ಥಳೀಯ ರಾಜಕೀಯ ಪರಿಸ್ಥಿತಿಗಳಿಗೆ ಅನು ಗುಣವಾಗಿ ಚುನಾವಣ ಕಾರ್ಯತಂತ್ರ ರೂಪಿಸುವುದರಲ್ಲೂ ಎತ್ತಿದ ಕೈ. ಹೀಗಾಗಿ ಅಮಿತ್‌ ಶಾ ಅವರು ನೀಡುವ ಒಂದೊಂದು ನಿರ್ದೇಶನದ ಹಿಂದೆಯೂ ಯಾದವ್‌ ಅವರ ಕೈವಾಡ ಇರುತ್ತದೆ. ಹೀಗಾಗಿ ಭೂಪೇಂದ್ರ ಯಾದವ್‌ ಸಮಾಧಾನಗೊಂಡರೆ ಮಾತ್ರ ಅಮಿತ್‌ ಶಾ ತಣ್ಣಗಿರುತ್ತಾರೆ. ಇದುವೇ ಅವರ ಬಗ್ಗೆ ರಾಜ್ಯ ಬಿಜೆಪಿಯವರಿಗೆ ಇರುವ ಆತಂಕ.

ಚಾಣಕ್ಯನ ಹಿಂದಿರುವ ಚಾಣಕ್ಯ: ಬಿಜೆಪಿಗೆ ರಾಷ್ಟ್ರೀಯ ಅಧ್ಯಕ್ಷ ಚಾಣಕ್ಯನಾಗಿದ್ದರೆ, ಆ ಚಾಣಕ್ಯನ ಹಿಂದಿರುವ ಮತ್ತೂಬ್ಬ ಚಾಣಕ್ಯ ಎಂದು ಪಕ್ಷದ ವಲಯದಲ್ಲಿ ಭೂಪೇಂದ್ರ ಯಾದವ್‌ ಅವರನ್ನು ಪರಿಗಣಿಸಲಾಗುತ್ತಿದೆ. ಈ ಹಿಂದೆ ಬಿಹಾರ ವಿಧಾನಸಭೆ ಚುನಾವಣೆ ವೇಳೆ ಆ ರಾಜ್ಯದಲ್ಲಿ ಪಕ್ಷದ ಉಸ್ತುವಾರಿಯಾಗಿ ಕೆಲಸ ಮಾಡಿ ಯಾದವ್‌ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃ ತ್ವದ ಮಹಾಕಟಿಬಂಧನ್‌ ವಿರುದ್ಧ ಬಿಜೆಪಿ ಹೋರಾಟ ನಡೆಸಲು ಕಾರಣಕರ್ತರಾಗಿದ್ದರು. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ವೇಳೆ ಅಲ್ಲಿಯೂ ಕೆಲಸ ಮಾಡಿದ್ದರು. ಅಲ್ಲಿ ಬಿಜೆಪಿ ಗೆಲ್ಲಲು ಪ್ರಮುಖ ಕಾರಣ ವಾದ ಇತರ ಹಿಂದುಳಿದ ವರ್ಗಗಳನ್ನು ಬಿಜೆಪಿಯತ್ತ ಸೆಳೆದು ಒಗ್ಗಟ್ಟು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Advertisement

ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯ ನಾಥ್‌ ಅವರನ್ನು ಆಯ್ಕೆ ಮಾಡುವುದ ರಲ್ಲೂ ಅವರ ಪಾತ್ರವಿತ್ತು.
ರಾಜಸ್ಥಾನ, ಜಾರ್ಖಂಡ್‌ ಚುನಾ ವಣೆಯಲ್ಲೂ ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿದ್ದ  ಯೋಗೇಂದ್ರ ಯಾದವ್‌,  ಗುಜರಾತ್‌ನಲ್ಲೂ ತಮ್ಮ ಕೈಚಳಕ ತೋರಿಸಿದ್ದರು. ಪಾಟೀವಾಲರ ಸವಾಲಿಗೆ ಪ್ರತಿಸವಾಲು ರೂಪಿಸಿ ಬುಡಕಟ್ಟು ಜನರನ್ನು ಬಿಜೆಪಿಯತ್ತ ಸೆಳೆಯುವ ತಂತ್ರ ರೂಪಿಸಿದ್ದರು. ಪ್ರಧಾನಿ ಮೋದಿ, ಅಮಿತ್‌ ಶಾ ಅವರ ತಂತ್ರಗಾರಿಕೆಗಳನ್ನು ಸಮರ್ಪಕವಾಗಿ ಕಾರ್ಯಾನುಷ್ಠಾನ ಮಾಡಿದ್ದರು.

ಹೀಗಾಗಿ ದೇಶದಲ್ಲಿ ಕಾಂಗ್ರೆಸ್‌ ಪಾಲಿಗೆ ಉಳಿದುಕೊಂಡಿರುವ ಏಕೈಕ ದೊಡ್ಡ ರಾಜ್ಯ ಕರ್ನಾಟಕಕ್ಕೂ ಯೋಗೇಂದ್ರ ಯಾದವ್‌ ಅವರನ್ನು ಚುನಾವಣಾ ತಂತ್ರಗಾರಿಕೆಯ ಮುಂಚೂಣಿಯಲ್ಲಿ ನಿಲ್ಲಿಸಲು ಅಮಿತ್‌ ಶಾ ಅವರು ನಿರ್ಧರಿಸಿದ್ದಾರೆ. ಸದ್ಯದಲ್ಲೇ ಯಾದವ್‌ ಅವರು ರಾಜ್ಯಕ್ಕೆ ಆಗಮಿಸಿ ಮುಂಬರುವ ಚುನಾವಣೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲಿದ್ದಾರೆ. ಇದಾದ ಬಳಿಕ ಅಮಿತ್‌ ಶಾ ಅವರು ರಾಜ್ಯಕ್ಕೆ ಬರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಯಾರೀ ಭೂಪೇಂದ್ರ ಯಾದವ್‌?
ಮೂಲತಃ ರಾಜಸ್ಥಾನದ ಅಜೆ¾àರ್‌ ನವರಾಗಿರುವ ಭೂಪೇಂದ್ರ ಯಾದವ್‌ ಅವರು ಪ್ರಸ್ತುತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಾಗಿ ಕೆಲಸ ಮಾಡುತ್ತಿದ್ದಾರೆ. 2012ರಿಂದ ರಾಜ್ಯಸಭೆಯಲ್ಲಿ ರಾಜಸ್ಥಾನವನ್ನು ಪ್ರತಿನಿಧಿಸುತ್ತಿದ್ದಾರೆ. ಅಮಿತ್‌ ಶಾ ಅವರಿಗೆ ಅತ್ಯಂತ ಆಪ್ತರಾಗಿರುವ ಭೂಪೇಂದ್ರ ಯಾದವ್‌, ಪಕ್ಷದಲ್ಲಿರುವ ಭಿನ್ನ ಮತಕ್ಕೆ ಮದ್ದೆರೆಯುವುದರಲ್ಲಿ ಎಷ್ಟು ಚಾಣಾಕ್ಷರೋ ಚುನಾವಣಾ ತಂತ್ರ ಗಾರಿಕೆ ರೂಪಿಸುವಲ್ಲೂ ಅಷ್ಟೇ ಸಾಮರ್ಥ್ಯ ಹೊಂದಿದ್ದಾರೆ. ಕಾನೂನು ಪದವೀಧರರಾಗಿ ಸುಪ್ರೀಂ ಕೋರ್ಟ್‌ ವಕೀಲರಾಗಿಯೂ ಕಾರ್ಯ ನಿರ್ವಹಿ ಸಿದ್ದರಿಂದ ಕಾನೂನುಬದ್ಧವಾಗಿ ಕೆಲಸ ನಿರ್ವಹಿಸುತ್ತಾರೆ.  ಆದರೆ, ಯಾವತ್ತೂ ಬಹಿರಂಗವಾಗಿ ಚುನಾವಣಾ ಭೂಮಿಕೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ಅಮಿತ್‌ ಶಾ ಅವರು ಯಾದವ್‌ ಅವರನ್ನು ತಮ್ಮ ಕೆಲಸಗಳಿಗೆ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ.

– ಪ್ರದೀಪ್‌ ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next