ಹೊಸದಿಲ್ಲಿ: ಮುಂದಿನ ವರ್ಷದ ಹಾಕಿ ಪ್ರೊ ಲೀಗ್ ಪಂದ್ಯಾವಳಿಯಲ್ಲಿ ಭಾರತದ ತವರಿನ ಪಂದ್ಯಗಳ ಆತಿಥ್ಯ ಭುವನೇಶ್ವರ ಪಾಲಾಗಿದೆ. ಇಂಟರ್‌ನ್ಯಾಶನಲ್ ಹಾಕಿ ಫೆಡರೇಶನ್ (ಎಫ್ಐಎಚ್) ಸೋಮವಾರ ಇದನ್ನು ಪ್ರಕಟಿಸಿತು.
2020ರ ಜನವರಿ 11ರಿಂದ ಜೂನ್ 28ರ ವರೆಗೆ ವಿಶ್ವದ ಅನೇಕ ಕೇಂದ್ರಗಳಲ್ಲಿ ದ್ವಿತೀಯ ಹಾಕಿ ಪ್ರೊ ಲೀಗ್ ಕೂಟದ 144 ಪಂದ್ಯಗಳನ್ನು ಆಡಲಾಗುವುದು.
ಆರ್ಜೆಂಟೀನಾ, ಆಸ್ಟ್ರೇಲಿಯ, ಬೆಲ್ಜಿಯಂ, ಚೀನ, ಜರ್ಮನಿ, ಗ್ರೇಟ್ ಬ್ರಿಟನ್, ನೆದರ್ಲೆಂಡ್ಸ್, ನ್ಯೂಜಿಲ್ಯಾಂಡ್, ಸ್ಪೇನ್ ಮತ್ತು ಅಮೆರಿಕದ 19 ಮೈದಾ ನಗಳಲ್ಲಿ ಈ ಕೂಟ ಸಾಗಲಿದೆ. ಜ. 11ರ ಉದ್ಘಾಟನಾ ಪಂದ್ಯದಲ್ಲಿ ಎದುರಾಗುವ ತಂಡಗಳೆಂದರೆ ನೆದರ್ಲೆಂಡ್ಸ್ ಮತ್ತು ಚೀನ. ಈ ಪಂದ್ಯ ಚಾಂಗ್‌ಜೂನಲ್ಲಿ ನಡೆಯಲಿದೆ.
ಆಸ್ಟ್ರೇಲಿಯದ ಪಂದ್ಯಗಳು ಪರ್ತ್ ಮತ್ತು ಸಿಡ್ನಿ ಪಾಲಾಗಿವೆ. ನ್ಯೂಜಿಲ್ಯಾಂಡಿನ ಕ್ರೈಸ್ಟ್‌ಚರ್ಚ್, ಆಕ್ಲೆಂಡ್; ಸ್ಪೇನಿನ ವೆಲೆನ್ಸಿಯಾ; ಅಮೆರಿಕದ ನಾರ್ತ್ ಕ್ಯಾರೋಲಿನಾ ಮೊದಲಾದ ತಾಣಗಳೆಲ್ಲ ಈ ಪಂದ್ಯಗಳ ಆತಿಥ್ಯ ವಹಿಸಲಿವೆ.
ಭುವನೇಶ್ವರ ಪ್ರಮುಖ ಕೇಂದ್ರ
ಭಾರತದ ಹಾಕಿಯಲ್ಲಿ ಒಡಿಶಾದ ಭುವನೇಶ್ವರ ಈಗ ಪ್ರಮುಖ ಕೇಂದ್ರವಾಗಿ ತಲೆಯೆತ್ತಿದೆ. ಇತ್ತೀಚಿನ ಒಲಿಂಪಿಕ್ ಅರ್ಹತಾ ಪಂದ್ಯಾವಳಿ ಸೇರಿದಂತೆ ಬಹುತೇಕ ಕೂಟಗಳು ಇಲ್ಲಿ ನಡೆದಿವೆ. ಈಗ ಹಾಕಿ ಪ್ರೊ ಲೀಗ್ ಸರದಿ.