ಮುಂಬಯಿ: ನನ್ನ ಪೌರೋಹಿತ್ಯದಲ್ಲಿ ಜನ ಸಾಮಾನ್ಯರ ಸೇವಕನಾಗಿ ದುಡಿದಿದ್ದೇನೆ ಎಂಬ ತೃಪ್ತಿ ನನಗಿದೆ. ಇತರರ ಸಾಧನೆ, ಸಂತೋಷ, ಸುಖ-ದುಃಖಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಜೀವನ ಪಾವನಗೊಳಿಸಬೇಕು ಎಂದು ಮೀರಾಗಾಂವ್ ಶ್ರೀ ಮಹಾಲಿಂಗೇಶ್ವರ ಮಂದಿರದ ಪ್ರಧಾನ ಅರ್ಚಕ ಸಾಣೂರು ಸಾಂತಿಂಜ ಜನಾದìನ ಭಟ್ ಅವರು ನುಡಿದರು.
ಮೀರಾರೋಡ್ ಪೂರ್ವದ ಎಸ್. ಕೆ. ಸ್ಟೋನ್ ಸೆಂಟ್ರಲ್ ಮೈದಾನದಲ್ಲಿ ನವತರುಣ್ ಮಿತ್ರ ಮಂಡಳಿ ಮತ್ತು ಭ್ರಾಮರಿ ಫ್ರೆಂಡ್ಸ್ ಇದರ ವತಿಯಿಂದ ಆಯೋಜಿಸಲಾಗಿದ್ದ ಸಮ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೊಂದಾಣಿಕೆಯಿಂದ ಜೀವನ ಸಾಗಿಸಬೇಕು. ಇಂದಿನ ಸಮ್ಮಾನ ಎಲ್ಲ ವರ್ಗಗಗಳ ಜನ ಸಾಮಾನ್ಯರ ಪ್ರೀತಿಯ ಸಂಪತ್ತಾಗಿದೆ. ಅದನ್ನು ಕೊನೆಯ ತನಕ ಶಾಶ್ವತವಾಗಿ ಭದ್ರತೆಯೊಂದಿಗೆ ಕಾಪಾಡುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಸಾಂತಿಂಜ ಜನಾರ್ದನ ಭಟ್ ದಂಪತಿ, ಸ್ಥಳೀಯ ಶಾಸಕ ನರೇಂದ್ರ ಮೆಹ್ತಾ, ರಾಜಕೀಯ ನೇತಾರ ಅವಿನಾಶ್ ಗುರಾವ್, ಲೇಖಕ ಶಿವ ಶೆಟ್ಟಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು.
ಬಂಟರ ಸಂಘ ಮುಂಬಯಿ ದಹಿಸರ್- ಜೋಗೇಶ್ವರಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಡಿ. ಶೆಟ್ಟಿ, ಸಮಾಜ ಸೇವಕ ವಿರಾರ್ ಶಂಕರ್ ಶೆಟ್ಟಿ ಅವರು ಮಾತನಾಡಿ ಶುಭಹಾರೈಸಿದರು. ವೇದಿಕೆಯ ಕಲಾಪೋಷಕರಾದ ಗಿರೀಶ್ ಶೆಟ್ಟಿ ತೆಳ್ಳಾರ್, ಅರುಣೋದಯ ರೈ, ಲೀಲಾ ಡಿ. ಪೂಜಾರಿ, ಅವರಿಂದ ಎ. ಶೆಟ್ಟಿ, ಮಹಾಬಲ ಸಾಮಾನಿ, ಕಾರ್ಯ ಕ್ರಮದ ರೂವಾರಿ ರವೀಂದ್ರ ಡಿ. ಶೆಟ್ಟಿ, ಉದಯ ಹೆಗ್ಡೆ, ಜಯಪ್ರಕಾಶ್ ಭಂಡಾರಿ, ಸಂತೋಷ್ ರೈ ಬೆಳ್ಳಿಪಾಡಿ, ವಿಶ್ವನಾಥ್ ಸಾಲ್ಯಾನ್ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ವೈವಿಧ್ಯಮಯ ನೃತ್ಯಗಳು ಹಾಗೂ ವಿಜಯ ಕಲಾವಿದರು ಕಿನ್ನಿಗೋಳಿ ತಂಡದಿಂದ ತೂಪಿನಾರ್ ಆಪಿನಾರ್ ತುಳು-ನಾಟಕ ಪ್ರದರ್ಶನಗೊಂಡಿತು. ಕಲಾವಿದ ಜಿ. ಕೆ. ಕೆಂಚನಕೆರೆ, ಅರುಣ್ ಕುಮಾರ್ ಶೆಟ್ಟಿ ಎರ್ಮಾಳ್ ಅವರು ಕಾರ್ಯಕ್ರಮ ನಿರ್ವಹಿಸಿದರು.
ಚಿತ್ರ-ವರದಿ : ರಮೇಶ್ ಅಮೀನ್