Advertisement

ಕಬ್ಬನ್‌ ಪಾರ್ಕ್‌ಗೆ “ಭೀಮಾ ಬಿದಿರು’ಬಲ

06:47 AM May 01, 2019 | Lakshmi GovindaRaj |

ಬೆಂಗಳೂರು: ಹಸಿರು ಉದ್ಯಾನವನ ಕಬ್ಬನ್‌ ಪಾರ್ಕ್‌ ಇನ್ಮುಂದೆ ವಿವಿಧ ಜಾತಿಯ ದೇಶಿ ಬಿದಿರು, ಔಷಧಿಯ ಸಸಿಗಳು ಹಾಗೂ ಅಧಿಕ ಪ್ರಮಾಣದಲ್ಲಿ ಆಮ್ಲಜನಕ ಹೊರ ಸೂಸುವ ಗಿಡ ಮರಗಳಿಂದ ಕಂಗೊಳಿಸಲಿದೆ.

Advertisement

ಈ ಹಿಂದೆ ಕಬ್ಬನ್‌ಪಾರ್ಕ್‌ನಲ್ಲಿ ಬಿದಿರು ಅನೇಕ ಸಂಖ್ಯೆಯಲ್ಲಿತ್ತು. ಆದರೆ ಇತ್ತೀಚೆಗಷ್ಟೇ ಅವು ಹೂ ಬಿಟ್ಟು ನೆಲಕ್ಕುರುಳಿದ್ದವು. ಹೀಗಾಗಿ, ಆ ಪ್ರದೇಶ ಸೇರಿದಂತೆ ಪಾರ್ಕ್‌ ಸುತ್ತಮುತ್ತ ಭೀಮಾ ಬಿದಿರು, ಗ್ರೀನ್‌ ಬಿದಿರು, ಬುದ್ಧ ಬಿದಿರು ಸೇರಿದಂತೆ ಸುಮಾರು 12 ಜಾತಿಯ ಬಿದಿರಿನ ತಳಿಗಳನ್ನು ತೋಟಗಾರಿಕೆ ಇಲಾಖೆ ನಾಟಿ ಮಾಡಲು ಮುಂದಾಗಿದೆ.

ಹೂ ಬಿಟ್ಟು ನೆಲಕ್ಕುರುಳಿರುವ ಬಿದಿರನ್ನು ಬೇರು ಸಮೇತ ಕೀಳುವ ಕೆಲಸ ಈಗಾಗಲೇ ಕಬ್ಬನ್‌ಪಾರ್ಕ್‌ನಲ್ಲಿ ನಡೆದಿದೆ. ಈ ಕಾರ್ಯ ಪೂರ್ಣಗೊಂಡ ಕೂಡಲೇ ಹೊಸ ಬಿದಿರಿನ ನಾಟಿ ಪ್ರಕ್ರಿಯೆ ನಡೆಯಲಿದೆ. ಜತೆಗೆ, ವಿವಿಧ ಜಾತಿಯ ಗಿಡಗಳನ್ನು ನಾಟಿ ಮಾಡುವ ಯೋಜನೆಯನ್ನು ತೋಟಗಾರಿಕೆ ಇಲಾಖೆ ರೂಪಿಸಿದ್ದು, ಮಳೆ ಬಿದ್ದ ಕೂಡಲೇ ಸಸಿ ನೆಡುವ ಕಾರ್ಯ ಆರಂಭವಾಗಲಿದೆ. ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಆಕ್ಸಿಜನ್‌ ನೀಡುವ “ಭೀಮಾ ಬಿದಿರು’: ಕಬ್ಬನ್‌ ಉದ್ಯಾನವನದಲ್ಲಿ ಯಾವೆಲ್ಲಾ ಸಸಿಗಳನ್ನು ನಾಟಿ ಮಾಡಬೇಕು ಎಂಬ ಬಗ್ಗೆ ತೋಟಗಾರಿಕೆ ಇಲಾಖೆ ಈ ಹಿಂದೆ ಹಿರಿಯ ಪರಿಸರ ತಜ್ಞ ಡಾ.ಎ.ಎನ್‌.ಯಲ್ಪಪ್ಪ ರೆಡ್ಡಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಿತ್ತು. ಈ ತಂಡ ಈಗಾಗಲೇ ಕೇರಳ ಮತ್ತು ತಮಿಳುನಾಡಿಗೆ ಭೇಟಿ ನೀಡಿ ಆಮ್ಲಜನಕ ಹೆಚ್ಚಿನ ಪ್ರಮಾಣದಲ್ಲಿ ನೀಡುವ ಸಸಿಗಳ ಬಗ್ಗೆ ಮಾಹಿತಿ ಕಲೆಹಾಕಿದೆ.

ಅದರಂತೆ ಹೆಚ್ಚು ಪ್ರಮಾಣದಲ್ಲಿ ಆಮ್ಲಜನಕ ನೀಡುವ ಬಿದಿರಿನ ತಳಿಗಳು ಸೇರಿದಂತೆ ಇನ್ನಿತರ ಜಾತಿಯ ಸಸ್ಯಗಳನ್ನು ನಾಟಿ ಮಾಡಲಾಗುತ್ತಿದೆ. ತಮಿಳುನಾಡಿನಲ್ಲಿ ತರಹೇವಾರಿ “ಭೀಮಾ ಬಿದಿರು’ ತಳಿಯಿದ್ದು, ಇದು ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್‌ ಹೊರ ಸೂಸುತ್ತದೆ. ಆ ಹಿನ್ನೆಲೆಯಲ್ಲಿ ಸಮಿತಿ ಸುಮಾರು 400 ಭೀಮಾ ಬಿದಿರಿನ ಮೆಳೆ ಕಬ್ಬನ್‌ ಪಾರ್ಕ್‌ನಲ್ಲಿ ನಾಟಿ ಮಾಡುವ ತೀರ್ಮಾನ ಕೈಗೊಂಡಿದೆ.

Advertisement

ಆರವತ್ತೇಳು ಜಾತಿಯ ಗಿಡ: ತೋಟಗಾರಿಕೆ ಇಲಾಖೆ ಕಬ್ಬನ್‌ ಪಾರ್ಕ್‌ ತುಂಬೆಲ್ಲಾ ಸುಮಾರು 67 ವಿವಿಧ ಜಾತಿಯ ಗಿಡಗಳನ್ನು ನಾಟಿ ಮಾಡಲು ತೀರ್ಮಾನಿಸಿದೆ. ನೆರಳಿನಲ್ಲಿ ಯಾವ ಜಾತಿ ಗಿಡಗಳನ್ನು ಹಾಗೂ ಬಿಸಿನಲ್ಲಿ ಯಾವ ಜಾತಿಯ ತಳಿಗಳನ್ನು ನೆಡಬೇಕು ಎಂಬುದನ್ನು ಪರಿಸರ ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ಮಳೆಗಾಲದಲ್ಲಿ ಸಸಿಗಳನ್ನು ನಾಟಿ ಮಾಡಲಾಗವುದು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

“ಭೀಮಾ ಬಿದಿರಿನ ವೈಶಿಷ್ಟ್ಯ’: ಭೀಮಾ ಬಿದಿರು ಹೆಚ್ಚಿನ ವೈಶಿಷ್ಟ್ಯತೆಯಿಂದ ಕೂಡಿದೆ. ಈ ಬಿದಿರು ಇತರ ಜಾತಿಯ ಬಿದಿರಿನಂತೆ ಹೂ ಬಿಡುವುದಿಲ್ಲ. ಆದರೆ ವೇಗವಾಗಿ ಬೆಳೆಯುತ್ತದೆ. ಹೆಚ್ಚು ದಿನಗಳ ಕಾಲ ಬಾಳುತ್ತದೆ. ಇದರ ಒಂದು ಮೆಳೆ ಎಂಟು ಜನರಿಗೆ ಸಾಕಾಗುವಷ್ಟು ಆಕ್ಸಿಜನ್‌ ನೀಡುವ ಸಾಮರ್ಥಯವಿದೆ. ಈ ಎಲ್ಲಾ ಗುಣಗಳನ್ನು ಗಮನಿಸಿಯೇ ಕಬ್ಬನ್‌ ಉದ್ಯಾನವನದಲ್ಲಿ ಭೀಮಾ ಬಿದಿರು ನಾಟಿ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹಿರಿಯ ಪರಿಸರ ತಜ್ಞ ಡಾ.ಎ.ಎನ್‌.ಯಲ್ಲಪ್ಪ ರೆಡ್ಡಿ ತಿಳಿಸಿದ್ದಾರೆ.

“ಉದಯವಾಣಿ’ಗೆ ಯೊಂದಿಗೆ ಮಾತನಾಡಿದ ಅವರು, ಕಬ್ಬನ್‌ಪಾರ್ಕ್‌ ಹಲವು ಕಡೆಗಳಲ್ಲಿ ಔಷಧಿಯ ಸಸ್ಯಗಳನ್ನು ನಾಟಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ . ಕ್ಯಾನ್ಸರ್‌ ನಿವಾರಕ ಔಷಧಿ ಸಸಿಗಳನ್ನು ನಾಟಿ ಮಾಡುವ ಆಲೋಚನೆ ಇದೆ ಎಂದರು.

ಕಬ್ಬನ್‌ ಪಾರ್ಕ್‌ನಲ್ಲಿ ಆಕ್ಸಿಜನ್‌ ಹೆಚ್ಚು ನೀಡುವ ಬಿದಿರಿನ ಮೆಳೆಗಳನ್ನು ನಾಟಿ ಮಾಡಲಾಗುವುದು. ಜೊತೆಗೆ ಔಷಧಿ ಸಸ್ಯಗಳು ಸೇರಿದಂತೆ ಸುಮಾರು 67 ಜಾತಿಯ ಗಿಡಗಳನ್ನು ನಾಟಿ ಮಾಡುವ ಯೋಜನೆ ರೂಪಿಸಲಾಗಿದೆ.
-ಮಹಾಂತೇಶ ಮುರುಗೋಡು,ತೋಟಗಾರಿಕೆ ಇಲಾಖೆ (ಕಬ್ಬನ್‌ ಉದ್ಯಾನ) ಉಪನಿರ್ದೇಶಕ

* ದೇವೇಶ ಸೂರಗುಪ್ಪ 

Advertisement

Udayavani is now on Telegram. Click here to join our channel and stay updated with the latest news.

Next