Advertisement
ಮತದಾರರ ಕೆಲಸ ಕಾರ್ಯಗಳಿರುವುದು ಜಿಲ್ಲಾ ಕೇಂದ್ರ ಕಲಬುರಗಿಯಲ್ಲಿ. ಆದರೆ ಲೋಕಸಭೆ ಚುನಾವಣೆ ಅಭ್ಯರ್ಥಿಯ ಆಯ್ಕೆ ಮಾಡಬೇಕಾಗಿರುವುದು ಬೀದರ್ ಕ್ಷೇತ್ರಕ್ಕೆ. ಹೀಗಾಗಿ ಮೊದಲಿನಿಂದಲೂ ಮತದಾರರು ಚುನಾವಣೆ ಬಂದಾಗಲೊಮ್ಮೆ ಅಷ್ಟೇನು ಪೈಪೋಟಿ ಮಾಡಲಾರರು. ಆದರೂ ಬಿಜೆಪಿಗೆ ಪ್ರತಿಬಾರಿಯೂ ಲೀಡ್ ಕೊಡುತ್ತಲೇ ಬಂದಿರುವ ಈ ಕ್ಷೇತ್ರದಲ್ಲಿ, ಈ ಬಾರಿ ಬದಲಾವಣೆ ಆಗುವುದೇ ಎನ್ನುವ ಚರ್ಚೆ ಆರಂಭವಾಗಿದೆ.
Related Articles
Advertisement
ಮೂರು ದಶಕಗಳಲ್ಲಿ ಬೀದರ ಕ್ಷೇತ್ರದಿಂದ ಸುಮಾರು ಎರಡು ಬಾರಿ ಕಾಂಗ್ರೆಸ್ ಗೆಲುವು ಬಿಟ್ಟರೆ ಉಳಿದೆಲ್ಲ ಬಿಜೆಪಿ ಪಾಲಾಗುತ್ತಲೇ ಬಂದಿದೆ. ಈ ಬಾರಿ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಹಾಗೂ ಕಾಂಗ್ರೆಸ್‌ನ ಮಾಜಿ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನಡುವೆ ಕ್ಷೇತ್ರದಲ್ಲಿ ನೇರ ಸ್ಪರ್ಧೆ ಏರ್ಪಟ್ಟಿದೆ.
1991-1996,1998, 1999, 2004ರಲ್ಲಿ ಹ್ಯಾಟ್ರಿಕ್ ಹೀರೋ ದಿ| ರಾಮಚಂದ್ರ ವಿರಪ್ಪ ಸರಣಿ ಗೆಲವು ಸಾಧಿ ಸಿದ್ದು, ಈ ಗೆಲುವಿಗೆ ಆಳಂದ ಕ್ಷೇತ್ರದ ಮತದಾರರೇ ಲೀಡ್ ಕೊಡುತ್ತ ಬಂದಿದ್ದರು.
ಆದರೀಗ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಸೋಲು ಅನುಭವಿಸಿದ ಮಾಜಿ ಶಾಸಕ ಬಿ.ಆರ್. ಪಾಟೀಲ ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಮತಗಳನ್ನು ಕೊಡುವ ಮೂಲಕ ಸೇಡು ತೀರಿಸಿಕೊಳ್ಳಲೇ ಬೇಕು ಎಂದು ಘೋಷಿಸಿದ್ದಾರೆ. ಮತ್ತೊಂದೆಡೆ ಬಿಜೆಪಿಯ ಹಾಲಿ ಶಾಸಕ ಸುಭಾಷ ಗುತ್ತೇದಾರ ಅವರು, ತಮ್ಮ ವರ್ಚಸ್ಸು ಕಾಯ್ದುಕೊಳ್ಳಲು ಮತಗಳು ಹರಿದುಹೋಗಲು ಅಷ್ಟೇನು ಸರಳವಾಗಿ ಬಿಡುವುದಿಲ್ಲ ಎಂದಿದ್ದಾರೆ. ಆಳಂದ ಮತಕ್ಷೇತ್ರದಿಂದ ಕಳೆದ ಲೋಕಸಭೆ ಚುನಾವಣೆಯಲ್ಲಿ 36 ಸಾವಿರ ಮತಗಳನ್ನು ಬಿಜೆಪಿಗೆ ಲೀಡ್ ಕೊಟ್ಟಿತ್ತು. ಈ ಬಾರಿ ಅಷ್ಟೊಂದು ಮತಗಳ ಅನುಮಾನವೂ ಗುತ್ತೇದಾರ ಅವರಿಗೆ ಇದ್ದು, ಅಗ್ನಿ ಪರೀಕ್ಷೆಯು ಎದುರಾಗಿದೆ.
ಇಬ್ಬರೂ ಲಿಂಗಾಯತರಾಗಿದ್ದರಿಂದ ಲಿಂಗಾಯಿತರ ಮತಗಳು ವಿಭಜನೆ ಆಗುವುದು ಮೇಲ್ನೋಟಕ್ಕೆ ಕಂಡುಬರತೊಡಗಿದೆ. ಈಶ್ವರ ಖಂಡ್ರೆ ಪ್ರಬಲ ಅಭ್ಯರ್ಥಿಯಾಗಿದ್ದರಿಂದ ಬಿಜೆಪಿಗೆ ಅಷ್ಟೇನು ಹಾದಿ ಸರಳವಾಗಿಲ್ಲ. ಬೀದರ ಲೋಕಸಭೆ ಕ್ಷೇತ್ರದಲ್ಲಿ ಬಾಲ್ಕಿ, ಹುಮನಾಬಾದ, ಬಸವಕಲ್ಯಾಣ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆ ಕಾಂಗ್ರೆಸ್ಸಿನ ಶಾಸಕರೇ ಗೆದ್ದಿದ್ದಾರೆ. ಬೀದರ ಉತ್ತರ ಕ್ಷೇತ್ರಕ್ಕೆ ಜೆಡಿಎಸ್. ಇದೇ ಔರಾದ ಹಾಗೂ ಆಳಂದ ಮಾತ್ರ ಬಿಜೆಪಿ ಶಾಸಕರಿದ್ದಾರೆ.
ಮೂರು ಸಚಿವ ಸ್ಥಾನ ಕಾಂಗ್ರೆಸ್‌ಗೆ ಬಲಬೀದರ ಜಿಲ್ಲೆಗೆ ಸಮ್ಮಿಶ್ರ ಸರ್ಕಾರದಿಂದ ಈ ಬಾರಿ ಕೊಡುಗೆಯಾಗಿ ಮೂರು ಸಚಿವ ಸ್ಥಾನ ನೀಡಲಾಗಿದೆ. ಹುಮನಾಬಾದ ಕ್ಷೇತ್ರದಿಂದ ಆಯ್ಕೆಯಾದ ಶಾಸಕ ರಾಜಶೇಖರ ಪಾಟೀಲ, ಬೀದರ ಕ್ಷೇತ್ರದಿಂದ ರಹಿಂಖಾನ್, ದಕ್ಷಿಣ ಕ್ಷೇತ್ರದಿಂದ ಬಂಡೆಪ್ಪ ಕಾಶೆಂಪೂರ (ಜೆಡಿಎಸ್), ಬಸವ ಕಲ್ಯಾಣದ ಶಾಸಕ ಬಿ.ನಾರಾಯಣರಾವ್ ನಿಗಮ ಮಂಡಳಿ ಅಧ್ಯಕ್ಷರಾಗಿದ್ದಾರೆ. ಅಲ್ಲದೆ, ಸ್ವತಃ ಅಭ್ಯರ್ಥಿ ಈಶ್ವರ ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆಯಲ್ಲಿದ್ದಾರೆ. ಹೀಗಾಗಿ ಬೀದರ ಕ್ಷೇತ್ರಕ್ಕೆ ಕಾಂಗ್ರೆಸ್ಸಿನ ಬಲ ತೋರಿದರೆ. ಮತ್ತೊಂದೆಡೆ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರ ಮೇಲೆ ಮತದಾರರ ನಿರಾಸಕ್ತಿ ಕಾರಣವೇ ಕಾಂಗ್ರೆಸ್‌ಗೆ ಬಲ ತಂದಿದೆ. ಈಗಾಗಲೇ ಇಬ್ಬರು ಅಭ್ಯರ್ಥಿಗಳು ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ಕೈಗೊಂಡು ಪ್ರಚಾರ ನಡೆಸಿದ್ದಾರೆ. ಇವೆಲ್ಲದರ ನಡುವೆ ಇಬ್ಬರ ಭವಿಷ್ಯ ನೋಡಲು ಏ.23ರ ವರೆಗೆ ಕಾಯಲೇ ಬೇಕಾಗಿದೆ. ಮಹಾದೇವ ವಡಗಾಂವ