Advertisement

ಬೀದರ : ಪ್ರಗತಿ ಹಂತದ ಕಾಮಗಾರಿ ಸಿಇಒ ಪರಿಶೀಲನೆ

04:30 PM Nov 04, 2019 | Naveen |

ಬೀದರ: ಹುಮನಾಬಾದ ತಾಲೂಕಿನ ವಿವಿಧೆಡೆ0 ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜ್ಞಾನೇಂದ್ರಕುಮಾರ ಗಂಗವಾರ ಭೇಟಿ ನೀಡಿ, ನಾನಾ ಇಲಾಖೆಗಳಿಂದ ಪ್ರಗತಿಯಲ್ಲಿದ್ದ ಹಲವಾರು ಕಾಮಗಾರಿಗಳನ್ನು ಪರಿವೀಕ್ಷಿಸಿದರು.

Advertisement

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 2017-18ನೇ ಸಾಲಿನ ಯೋಜನೆಯಡಿ ಶೆಡೋಳದಿಂದ ಚಂದನವಳ್ಳಿ ರಸ್ತೆ ಮೇಲಿನ ಸೇತುವೆ ಕಟ್ಟಡ ಕಾಮಗಾರಿ ವೀಕ್ಷಿಸಿದರು.

ಈ ಸೇತುವೆ ಕಾಮಗಾರಿ ಮುಗಿದಿದ್ದು, ರಸ್ತೆ ನಿರ್ಮಾಣಕ್ಕಾಗಿ ರಸ್ತೆಯನ್ನು 15 ದಿವಸಗಳ ವರೆಗೆ ಬಂದ್‌ ಮಾಡಿ, ಚಿನಕೇರಾ ಕ್ರಾಸ್‌ದಿಂದ ಚಂದನವಳ್ಳಿ ವಾಯಾ ದುಬಲಗುಂಡಿ ಮಾರ್ಗವಾಗಿ ಸಂಚಾರ ಬದಲಾಯಿಸಿದ ಮಾರ್ಗದ ಬಗ್ಗೆ ಜಿಲ್ಲಾಧಿಕಾರಿಗಳು ಆದೇಶಿಸಿದ ಮಾಹಿತಿಯನ್ನು ಜನತೆಗೆ ತಿಳಿಸಬೇಕು ಎಂದು, ಪ್ರಧಾನಮಂತ್ರಿ ಗ್ರಾಮೀಣ ಸಡಕ್‌ ಯೋಜನೆಯ ಅಭಿಯಂತರ ಸುನೀಲಕುಮಾರ ಪ್ರಭಾ ಅವರಿಗೆ ಸೂಚಿಸಿದರು.

ದಂಡ ವಿಧಿಸಲು ಸೂಚನೆ: ಗ್ರಾಮ ವಿಕಾಸ ಯೋಜನೆಯಡಿ ಹುಮನಾಬಾದ ತಾಲೂಕಿನ ವಡ್ಡನಾಕೇರಾದಲ್ಲಿ ರಸ್ತೆ ಕಾಮಗಾರಿ ಮಂದಗತಿಯಿಂದ ನಡೆಯುತ್ತಿರುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಿಇಒ ಅವರು, ಸಂಬಂಧಿಸಿದ ಗುತ್ತಿಗೆದಾರರಿಗೆ ದಂಡ ವಿಧಿಸಲು ಪಂಚಾಯತ್‌ ರಾಜ್ಯ ಎಂಜಿನಿಯರಿಂಗ್‌ ವಿಭಾಗದ ಅಭಿಯಂತರರಿಗೆ ನಿರ್ದೇಶನ ನೀಡಿದರು.

ವಡ್ಡನಕೇರಾದಲ್ಲಿ ಕಾಮಗಾರಿ ಪೂರ್ಣಗೊಂಡ ಅಂಗನವಾಡಿ ಕಟ್ಟಡವನ್ನು ಕೂಡ ಸಿಇಒ ಅವರು ವೀಕ್ಷಿಸಿದರು. ಹಸ್ತಾಂತರ ಪ್ರಕ್ರಿಯೆಯನ್ನು ಬಹುಬೇಗ ನಡೆಸಲು ಸೂಚಿಸಿದರು.

Advertisement

ಕಾಮಗಾರಿ ಮುಗಿಸಲು ಗಡುವು: ವಳಖೀಂಡಿ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಮಟ್ಟದ ನೀರಿನ ಸಂಗ್ರಹಗಾರ ಹಾಗೂ ತೆರೆದ ಬಾವಿಗಳನ್ನು ಸಿಇಒ ಅವರು ವೀಕ್ಷಿಸಿದರು.

ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮದಡಿ 2018-19ನೇ ಸಾಲಿನಲ್ಲಿ ಮಂಜೂರಾದ ಈ ಕಾಮಗಾರಿಗಳು ಅಂದಾಜು 40 ಲಕ್ಷ ರೂ. ವೆಚ್ಚದಲ್ಲಿ ನಡೆಯುತ್ತಿವೆ. ಪೈಪ್‌ಲೈನ್‌, ಎರಡು ಪಂಪಹೌಸ್‌ಗಳು ಕೂಡ ಇದರಲ್ಲಿ ಸೇರಿವೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಭಿಯಂತರರಾದ ಶಿವಾಜಿ ಡೋಣೆ, ರಾಚಪ್ಪ ಪಾಟೀಲ ಅವರು ಸಿಇಒ ಅವರಿಗೆ ಮಾಹಿತಿ ನೀಡಿದರು.

2017-18ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮ್ಯಾಕ್ರೋ ಯೋಜನೆಯಡಿಯಲ್ಲಿ ಮಂಜೂರಾದ ಅಂದಾಜು 50.38 ಲಕ್ಷ ರೂ. ವೆಚ್ಚದಲ್ಲಿ ಜಲಸಂಗಿ ಗ್ರಾಮದಲ್ಲಿ ನಡೆದ ಎಂ.ವೈ.ಘೋರ್ಪಡೆ ಗ್ರಾಮ ಪಂಚಾಯಿತಿ ಭವನ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಸಿಇಒ ಅವರು, ನಿರ್ಮಾಣ ಹಂತದಲ್ಲಿದ್ದ ಕಟ್ಟಡ ವೀಕ್ಷಿಸಿ ಗುಣಮಟ್ಟದದಿಂದ ಕಾಮಗಾರಿ ನಡೆಸುವಂತೆ ಮತ್ತು ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಕೆಆರ್‌ ಐಡಿಎಲ್‌ ಅಭಿಯಂತರರಿಗೆ ಸೂಚಿಸಿದರು.

ಬಳಿಕ ಹಳ್ಳಿಖೇಡ್‌(ಬಿ)-ಅಲ್ಲೂರ ಕಬೀರಬದವಾಡಿ ರಸ್ತೆ ಸೇತುವೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 2017-18ನೇ ಸಾಲಿನ ಮೈಕ್ರೋ ಯೋಜನೆಯಡಿ ಮಂಜೂರಾದ ಅಂದಾಜು 106.25 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಪ್ರಧಾನಮಂತ್ರಿ ಗ್ರಾಮೀಣ ಸಡಕ್‌ ಯೋಜನೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಮಾಹಿತಿ ನೀಡಿದರು.

ಮೇಲ್ಮಟ್ಟದ ನೀರಿನ ಸಂಗ್ರಹಗಾರ ವೀಕ್ಷಣೆ: ಹುಡುಗಿ ಗ್ರಾಮಕ್ಕೆ ಭೇಟಿ ನೀಡಿದ ಸಿಇಒ 2018-19ನೇ ಸಾಲಿನಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮದಡಿ ಮಂಜೂರಾದ ಅಂದಾಜು 2 ಲಕ್ಷ ಲೀಟರ್‌ ಸಾಮರ್ಥ್ಯದ ಮೇಲ್ಮಟ್ಟದ ನೀರಿನ ಸಂಗ್ರಹಗಾರ ವೀಕ್ಷಿಸಿದರು. ಈ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಭಿಯಂತರರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next