ಕೆ.ಆರ್.ನಗರ: ತಾಲೂಕಿನ ಭೇರ್ಯ ಗ್ರಾಮದ ದೊಡ್ಡಮ್ಮ-ಕರಿಯಮ್ಮ ವಾರ್ಷಿಕ ಸಿಡಿ ಮತ್ತು ಜಾತ್ರಾ ಮಹೋತ್ಸವ ಮಂಗಳವಾರ ರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಗ್ರಾಮದ ಪೂರ್ವ ಭಾಗದಲ್ಲಿರುವ ಅಕ್ಕಿಹೆಬ್ಟಾಳು ರಸ್ತೆ ಬಳಿಯಿಂದ ಹೊರಟ ದೇವಿಯ ಸಿಡಿ ಹತ್ತಾರು ವಿವಿಧ ಜಾನಪದ ಕಲಾ ತಂಡಗಳೊಂದಿಗೆ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹಾಸನ-ಮೈಸೂರು ರಸ್ತೆಯ ಬದಿಯಲ್ಲಿರುವ ದೇವಾಲಯದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಲಾಯಿತು. ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತರು ಮೊಳಗಿಸಿದ ಜೈಕಾರದ ಘೋಷಣೆ ಮುಗಿಲು ಮುಟ್ಟಿತ್ತು.
ಸಂಜೆ 7 ಗಂಟೆಗೆ ಗ್ರಾಮದ ಹೃದಯ ಭಾಗದಲ್ಲಿರುವ ಕರಿಯಮ್ಮನ ದೇವಾಲಯದಿಂದ ಕನ್ನಡ ಕಳಶದ ಮೆರವಣಿಗೆ ಸಿಡಿಯ ಬಳಿ ಆಗಮಿಸಿದ ನಂತರ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಸಿಡಿ ಸಂಚರಿಸುವ ಸಂದರ್ಭದಲ್ಲಿ ರಸ್ತೆಯುದ್ದಕ್ಕೂ ಭಕ್ತ ವೃಂದ ವಿವಿಧ ರೀತಿಯ ಬಲಿಗಳನ್ನು ನೀಡುವುದರ ಜತೆಗೆ ನೂತನ ದಂಪತಿಗಳು, ಮಹಿಳೆಯರು, ಮಕ್ಕಳು, ಹಸುಗೂಸು ಸೇರಿದಂತೆ ಸಾವಿರಾರು ಭಕ್ತರು ಬಾಯಿಗೆ ಬೀಗ ಧರಿಸಿ ಸಿಡಿಯ ಹಿಂಭಾಗದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಸಿಡಿಯೊಂದಿಗೆ ದೇವಾಲಯದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಬಾಯಿ ಬೀಗವನ್ನು ತೆಗೆಯಲಾಯಿತು. ಜೊತೆಗೆ ಸಿಡಿ ಮಹೋತ್ಸವದ ಹಿಂಬದಿಯಲ್ಲಿ ಹೆಣ್ಣು ಮಕ್ಕಳಿಗೆ ಹೊರಿಸಿದ್ದ ಕನ್ನಡ ಕಳಶದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಾಲಯದವರೆಗೆ ಸಂಚರಿಸಿತು.
ಜಾತ್ರೆಯಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಮತ್ತು ನೂತನ ದಂಪತಿಗಳು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡು ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಜಮಾಯಿಸಿದ್ದು. ಸಿಡಿ ಮಹೋತ್ಸವದ ಸಂದರ್ಭದಲ್ಲಿ ಭಕ್ತರು ದೇವರಿಗೆ ಹಣ್ಣು ಧವನ ಸಮರ್ಪಿಸಿದರು. ಭಕ್ತರಿಗೆ ಮಜ್ಜಿಗೆ ಪಾನಕ ಮತ್ತು ಪ್ರಸಾದ ವಿತರಿಸಲಾಯಿತು.
ಜಾತ್ರೆಯಲ್ಲಿ ಕಿಕ್ಕಿರಿದು ನೆರೆದಿದ್ದ ಭಕ್ತ ಸಮೂಹದಿಂದ ಭರ್ಜರಿ ವ್ಯಾಪಾರ ವಹಿವಾಟು ನಡೆಯಿತು. ಈ ವೇಳೆ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾಡಗೌಡ ಬಿ.ಎಸ್.ಕುಮಾರ್, ಗ್ರಾಪಂ ಅಧ್ಯಕ್ಷ ಶಿವಶಂಕರ್, ಉಪಾಧ್ಯಕ್ಷೆ ಅನುಸೂಯಮ್ಮ,
ಸದಸ್ಯರಾದ ಬಿ.ಕೆ.ಕುಮಾರ್, ಮಂಜಪ್ಪ, ಕುಮಾರ್, ಮನ್ಸೂರ್, ಹರೀಶ್, ಸುದರ್ಶನ್, ತಾಲೂಕು ಪಂಚಾಯ್ತಿ ಅಧ್ಯಕ್ಷೆ ಶೋಭಾ ಕುಮಾರ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಎಲ್.ರಾಜಶೇಖರ್, ಗ್ರಾಮದ ಮುಖಂಡರಾದ ಬಿ.ಎಂ.ಪ್ರಕಾಶ್, ಈರಯ್ಯ, ಸುಭಾಕರ್, ಮಹದೇವಪ್ಪ, ಪುಟ್ಟಮಲ್ಲಯ್ಯ, ಶಿವಕುಮಾರ್, ಲೋಕೇಶ್ ಇತರರಿದ್ದರು.