ಯಾದಗಿರಿ; ಸದ್ಯಕ್ಕೆ ಭೀಮಾನದಿಯಲ್ಲಿ ಒಳಹರಿವು 2.70 ಲಕ್ಷ ಕ್ಯೂಸೆಕ್‌ಗೆ ಇಳಿಕೆಯಾದರೂ ಜಿಲ್ಲೆಯ ಜನರಲ್ಲಿ ಪ್ರವಾಹದ ಭೀತಿ ಆವರಿಸಿದೆ. ಸನ್ನತಿ ಬ್ಯಾರೇಜ್‌ಗೆ ಸಂಬಂಧಿಸಿದ ಅಧಿಕಾರಿಯೊಬ್ಬರು ರಾತ್ರಿವೇಳೆ ಪ್ರವಾಹ ಹೆಚ್ಚಾದರೂ ಆಗಬಹುದು ಎಂದು ಸುಳಿವು ನೀಡಿದ್ದಾರೆ.
ಕಳೆದರೆಡು ದಿನಗಳಿಂದ ಭೀಮಾನದಿ ಪಾತ್ರಕ್ಕೆ 3.70 ಲಕ್ಷ ಕ್ಯೂಸೆಕ್ ವರೆಗೆ ನೀರು ಹರಿಸಲಾಗಿದೆ. ಗುರುವಾರ ಮಧ್ಯರಾತ್ರಿಯಿಂದಲೇ 7 ಲಕ್ಷ ಕ್ಯೂಸೆಕ್ ಒಳಹರಿವು ಹೆಚ್ಚಳವಾಗುವ ಸಾಧ್ಯತೆಯ ಕುರಿತು ಜಿಲ್ಲಾಡಳಿತ ಎಚ್ಚರಿಕೆಯನ್ನು ನೀಡಿತ್ತು. ಆದರೇ, ಪ್ರಸ್ತುತ ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರ ಸಂಜೆ ವೇಳೆಗೆ ಕೊಂಚಮಟ್ಟಿಗೆ ಪ್ರವಾಹ ಇಳಿಕೆ ಕಂಡಿದ್ದು ಶನಿವಾರ ಸಂಜೆ ವೇಳೆಗೆ ನೀರಿನ ಪ್ರಮಾಣ ಮತ್ತಷ್ಟು ಇಳಿಕೆಯಾಗಿದೆ.
ಕಲಬುರಗಿಯ ಸೊನ್ನ ಬ್ಯಾರೇಜ್‌ನಿಂದ 8 ಲಕ್ಷ ಕ್ಯೂಸೆಕ್ ನೀರು ಹರಿದು ಬರುವ ಕುರಿತು ಅಲ್ಲಿನ ಜಿಲ್ಲಾಡಳಿತ ಎಚ್ಚರಿಕೆ ನೀಡುತ್ತಿದ್ದಂತೆ ಯಾದಗಿರಿಯಲ್ಲಿ ಜನರು ತೀವ್ರ ಆತಂಕದ ಸ್ಥಿತಿಗೆ ಸಿಲುಕಿದ್ದಾರೆ. ಪ್ರವಾಹ 3 ಲಕ್ಷ ಕ್ಯೂಸೆಕ್ ಆಸುಪಾಸಿನಲ್ಲಿಯೇ ಸಾಕಷ್ಟು ಅವಾಂತರ ಸೃಷ್ಟಿಯಾಗಿದ್ದು ಇನ್ನೂ 8 ಲಕ್ಷ ಕ್ಯೂಸೆಕ್ ನೀರು ಬಂದರೆ ನಮ್ಮ ಪಾಡೇನು ಎಂದು ರೈತರು ತೀವ್ರ ಆಘಾತಕ್ಕೊಳಗಾಗಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹುರಸಗುಂಡಗಿ, ಶಿರವಾಳ, ರೋಜಾ ಎಸ್, ಅಣಬಿ, ಹಬ್ಬಳ್ಳಿ, ತಂಗಡಗಿ, ಮರಮಕಲ್, ಬಲಕಲ್, ನಾಲವಡಗಿ, ಯಾದಗಿರಿ ತಾಲೂಕಿನ ಗೂಡೂರು, ಗೊಂದಡಗಿ, ಭೀಮನಳ್ಳಿ, ಬೆಳಗುಂದಿ, ಆನೂರು(ಬಿ)ಮತ್ತು (ಕೆ),ಸಾವೂರ, ಮಲ್ಹಾರ, ಲಿಂಗೇರಿ, ಕೌಳೂರು, ಮುಷ್ಟೂರು, ಎಮ್.ಹೊಸಳ್ಳಿ, ಯಾದಗಿರಿ(ಬಿ), ಅಬ್ಬೆತುಮಕೂರು, ಠಾಣಗುಂದಿ, ಹೆಡಗಿಮದ್ರಾ, ತಳಕ್ ಮತ್ತು ವಡಗೇರಾ ತಾಲೂಕಿ ಹಾಲಗೇರಾ, ಗೋಡಿಹಾಳ, ಕಂದಹಳ್ಳಿ, ಕುಮನೂರು, ಅರ್ಜುನಗಿ, ಬಿಳ್ಹಾರ, ಬೂದಿಹಾಳ, ಬೆನಕನಹಳ್ಳಿ, ಶಿವನೂರು, ಸೂಗೂರು, ಜೋಳದಡಗಿ, ಸಂಗಮ್, ಮಾಚನೂರು, ನಾಯ್ಕಲ್, ಗಡ್ಡೆಸೂಗೂರ, ಬೀರನಾಳ, ಬಬಲಾದ್ ಹಾಗೂ ಹುಲಕಲ್ ಗ್ರಾಮ ಸೇರಿದಂತೆ 45ಕ್ಕೂ ಹೆಚ್ಚು ಗ್ರಾಮಗಳಿಗೆ ಪ್ರವಾಹ ನೀರು ನುಗ್ಗುವ ಆತಂಕವಿದೆ.
ಈಗಾಗಲೇ ಜಿಲ್ಲಾಡಳಿತ ಮುನ್ನೆಚ್ಚರಿಕೆಯಾಗಿ 14ಕ್ಕೂ ಹೆಚ್ಚು ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಕಾಳಜಿ ಕೇಂದ್ರಗಳಲ್ಲಿ ಇರಿಸಿದ್ದು, ನೋಡಲ್ ಅಧಿಕಾರಿಗಳನ್ನು ನೇಮಿಸಿ ಅಗತ್ಯ ಮುನ್ನೆಚ್ಚರಿಕೆಯನ್ನುವಹಿಸಿದೆ. ಸನ್ನತಿ ಬ್ಯಾರೇಜ್‌ನಿಂದ ಹೆಚ್ಚಿನ ನೀರು ಬರುವ ಸಾಧ್ಯತೆಯಿಂದ ಯಾದಗಿರಿಯ ಹೊರವಲಯದ ಗುರುಸಣಿಗಿ ಬ್ರಿಡ್ಜ್ ಕಂ ಬ್ಯಾರೇಜ್ ನ 14 ಗೇಟ್ ಗಳನ್ನು ತೆರೆದು ಭೀಮಾ ತೀರಕ್ಕೆ ನೀರು ಹರಿಸಲಾಗುತ್ತಿದೆ.
ಯಾದಗಿರಿ ಹೊರವಲಯದ ಭೀಮಾ ನದಿ ತೀರದಲ್ಲಿರುವ ಕುಡಿಯುವ ನೀರು ಸರಬರಾಜು ಘಟಕ ಶುಕ್ರವಾರ ಪ್ರವಾಹದಲ್ಲಿ ಜಲಾವೃತಗೊಂಡಿತ್ತು. ಶನಿವಾರ ಸಂಜೆ ವೇಳೆ ಪ್ರವಾಹ ನೀರು ಸಂಪೂರ್ಣ ಇಳಿಕೆಯಾಗಿದ್ದು ಕಂಡು ಬಂತು.