ಜೇವರ್ಗಿ: ಪ್ರತಿವರ್ಷ ಜನವರಿ 1 ಜಗತ್ತಿಗೆ ಹೊಸ ವರ್ಷದ ಸಂಭ್ರಮದ ದಿನವಾದರೆ ಭಾರತದ ದಲಿತರ ಪಾಲಿಗೆ ಮಹಾರಾಷ್ಟ್ರದ ಪೇಶ್ವೆಗಳ ವಿರುದ್ಧ ಮಹಾರ್ ಸೈನಿಕರು ಕೆಚ್ಚೆದೆಯ ಹೋರಾಟ ನಡೆಸಿ ದಿಗ್ವಿಜಯ ಸಾಧಿಸಿದ ದಿನ ಎಂದು ಕಲಬುರಗಿ ಸಾಹಿತಿ ವಿಠಲ್ ವಗ್ಗನ್ ಹೇಳಿದರು.
ಪಟ್ಟಣದ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿ ಬಳಿ ದಲಿತ ಸಮನ್ವಯ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ 204ನೇ ಭೀಮಾ ಕೋರೇಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಬಾಬಾ ಸಾಹೇಬರ ಬದುಕಿನ ಪ್ರೇರಣೆಗಳಲ್ಲಿ ಭೀಮಾ ಕೋರೆಗಾಂವ್ ಹೋರಾಟವೂ ಒಂದಾಗಿದೆ. 1817 ಡಿಸೆಂಬರ್ 31ನೇ ತಾರೀಖು ರಾತ್ರಿ ಪೂಣಾ ಬಳಿಯ ಸಿರೂರುನಿಂದ ಮಹಾರ್ ಸೈನಿಕರು ಹೊರಡುತ್ತಾರೆ. ಇಡೀ ರಾತ್ರಿ ಸತತವಾಗಿ 27 ಕಿಲೋಮೀಟರ್ ನಡೆದು ಮಾರನೇ ದಿನ ಅಂದರೆ 1818 ಜನವರಿ 01ರಂದು ಪೂಣಾ ನಗರದಿಂದ 15ಕಿ. ಮೀ ದೂರದಲ್ಲಿರುವ ಭೀಮಾ ನದಿ ತೀರದಲ್ಲಿರುವ ಕೋರೇಗಾಂವ್ ಎನ್ನುವ ಸ್ಥಳವನ್ನು ಸಿದ್ಧನಾಯಕನ ಪಡೆ ತಲುಪುತ್ತದೆ.
ಇಡೀ ರಾತ್ರಿ ನಿದ್ದೆಯಿಲ್ಲದೇ 27 ಕಿ.ಮೀ ದೂರ ನಡೆದುಕೊಂಡು ಬಂದಿದ್ದ ಮಹಾರ್ ಪಡೆ ನಿದ್ದೆ, ಅನ್ನ, ನೀರು ಯಾವುದನ್ನು ಬಯಸದೇ ಬೆಳಗ್ಗೆ 9 ಗಂಟೆಗೆ ಪೇಶ್ವೆ ಸೈನಿಕರ ಮೇಲೆ ಎರಗುತ್ತದೆ. 20 ಸಾವಿರ ಅಶ್ವದಳ, ಎಂಟು ಸಾವಿರ ಕಾಲ್ದಳ ಸೇರಿ ಒಟ್ಟು 28 ಸಾವಿರ ಪೇಶ್ವೆ ಸೈನಿಕರು ಮೂರು ದಿಕ್ಕಿನಿಂದ ಮಹಾರ್ ಯೋಧರಿಗೆ ಎದುರಾಗುತ್ತಾರೆ. ಸತತವಾಗಿ 12 ಗಂಟೆ ಕಾಲ ನಡೆದ ಘೋರ ಯುದ್ಧದಲ್ಲಿ ಪೇಶ್ವೆ ಸೈನ್ಯ ಧೂಳಿಪಟವಾಗುತ್ತದೆ. ಸಾವಿರಾರು ಸೈನಿಕರು ಯುದ್ಧ ಭೂಮಿಯಲ್ಲಿ ಕೊನೆಯುಸಿರು ಎಳೆಯುತ್ತಾರೆ. ಕೊನೆಗೆ ಮಹಾರ್ ಸೈನಿಕರು ವಿಜಯಶಾಲಿಗಳಾಗುತ್ತಾರೆ ಎಂದು ಇತಿಹಾಸದ ಪುಟಗಳನ್ನು ತೆರೆದಿಟ್ಟರು.
ಸೊನ್ನ ಎಸ್.ಜಿ.ಎಸ್.ವಿ ಪ.ಪೂ ಕಾಲೇಜಿನ ಉಪನ್ಯಾಸಕ ನಿಜಲಿಂಗ ದೊಡ್ಮನಿ ಮಾತನಾಡಿ, ಜ. 1ರಂದು ಶೋಷಿತರ ಆತ್ಮಗೌರವ ತಲೆ ಎತ್ತಿದ ದಿನವೆಂದೇ ಖ್ಯಾತಿ ಪಡೆದಿದೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯರಾದ ಚಂದ್ರಶೇಖರ ಹರನಾಳ, ಮರೆಪ್ಪ ಬಡಿಗೇರ, ಶಾಂತಪ್ಪ ಕೂಡಲಗಿ, ಮುಖಂಡರಾದ ವರಜ್ಯೋತಿ ಬಂತೇಜಿ ಅಣದೂರ, ಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ, ಶಾಂತಪ್ಪ ಯಲಗೊಡ, ಪ್ರಭಾಕರ ಸಾಗರ, ಸಿದ್ರಾಮ ಕಟ್ಟಿ, ಪುಂಡಲಿಕ್ ಗಾಯಕ್ವಾಡ, ದೌಲಪ್ಪ ಮದನ್, ಶ್ರೀಹರಿ ಕರಕಿಹಳ್ಳಿ, ಮಲ್ಲಿಕಾರ್ಜುನ ಕಟ್ಟಿ, ಮಲ್ಲಿಕಾರ್ಜುನ ಬಿಲ್ಲಾಡ, ಮಹೇಶ ಕೋಕಿಲೆ, ಸುಬಾಷ ಆಲೂರ, ಜಗದೇವಿ ಜಟ್ನಾಕರ, ಶಿವಶರಣ ಮಾರಡಗಿ, ಗುರಣ್ಣ ಐನಾಪುರ, ಬಸವರಾಜ ಹೆಗಡೆ, ಭಾಗಣ್ಣ ಸಿದ್ನಾಳ, ರಾಜಶೇಖರ ಶಿಲ್ಪಿ, ಸಂಗು ಕಟ್ಟಿಸಂಗಾವಿ, ಸಂಗು ಹರನೂರ, ಭಾಗಣ್ಣ ರದ್ದೇವಾಡಗಿ, ಬಾಗಣ್ಣ ಕೋಳಕೂರ, ರಾಜು ಹಾಲಗಡ್ಲಾ, ಶಿವು ಹೆಗಡೆ, ಭಾಗಪ್ಪ ಸೊನ್ನ, ಸುರೇಶ ಕಡಿ ಇದ್ದರು. ಪ್ರಭಾಕರ ಸಾಗರ ಪ್ರಾಸ್ತಾವಿಕ ಮಾತನಾಡಿದರು, ಮಹೇಶ ಕೋಕಿಲೆ ಸ್ವಾಗತಿಸಿದರು, ಶರಣಪ್ಪ ಬಡಿಗೇರ ನಿರೂಪಿಸಿದರು, ರವಿ ಕುರಳಗೇರಾ ವಂದಿಸಿದರು.