Advertisement

ಕಾರಾಗೃಹದಲ್ಲಿ ಭಾವಯಾನ 

05:09 PM Sep 22, 2018 | Team Udayavani |

ಕಾರವಾರ: ಯಾವುದೋ ಕ್ಷಣದ ದುಡುಕಿನಿಂದ ತಪ್ಪು ಮಾಡಿ ಬಂಧನಕ್ಕೆ ಸಿಲುಕಿದವರು ಬೆಳಕಿಗೆ ಹುಡುಕಾಡಬೇಕು. ಕಾರಾಗೃಹದಲ್ಲಿ ಭಾವಗೀತೆ ಗಾಯನ ಅಪರೂಪದ ಕಾರ್ಯಕ್ರಮವಾಗಿದ್ದು, ಕವಿತೆಗಳನ್ನು ಕೇಳುವುದರಿಂದ ನಿಮ್ಮ ಮನದಲ್ಲಿ ಪರಿವರ್ತನೆ ಮೂಡಲು ಸಾಧ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹಿಮಂತರಾಜು ಜಿ. ಅಭಿಪ್ರಾಯಪಟ್ಟರು.

Advertisement

ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಂಸ್ಕೃತಿ ಇಲಾಖೆ, ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ ಸಂಯುಕ್ತಾಶ್ರಯದಲ್ಲಿ ನಡೆದ ಬಂಧಿಗಳ ಜೊತೆ ಭಾವಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನೀವು ಸಮಾಜಕ್ಕೆ ಏನನ್ನಾದರೂ ಕೊಡಬೇಕು. ಸಮಾಜದಲ್ಲಿ ಉತ್ತಮರಾಗಿ ಬಾಳಬೇಕು ಎಂಬ ಕನಸು ಇಟ್ಟುಕೊಂಡು ಪರಿವರ್ತನೆಯಾಗಿ. ನಿಮ್ಮ ಮನಸ್ಸಿಗೆ ಸಾಂತ್ವಾನ ಹೇಳಲು ಇಲ್ಲಿನ ಸಾಹಿತ್ಯ ಪರಿಷತ್ತು ಕನ್ನಡ ಕವಿಗಳ ಕವಿತೆಗಳನ್ನು ಗಾಯಕರ ಮೂಲಕ ಕರೆ ತಂದಿದೆ. ಉದಾತ್ತ ಕನಸುಗಳನ್ನು ಇಟ್ಟುಕೊಳ್ಳಿ. ನಿಮ್ಮ ಬಾಲ್ಯ ನೆನಪಿಸಿಕೊಳ್ಳಿ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗರಾಜ ಹರಪನಹಳ್ಳಿ ಮಾತನಾಡಿ, ಕವಿತೆಗೆ ದುಃಖೀಗಳ ಕಣ್ಣೀರು ಒರೆಸುವ ಶಕ್ತಿಯಿದೆ. ನೋವಿಗೆ ಮುಲಾಮು ಹಚ್ಚುವುದು, ಕನಸು ಬಿತ್ತುವುದು, ಬದುಕಿನ ಆಶಾ ಭಾವನೆ ಚಿಗುರುವಂತೆ ಮಾಡುವುದೇ ಕಾವ್ಯದ ಗುಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾರಾಗೃಹ ಅಧಿಧೀಕ್ಷಕ ಈರಣ್ಣ ಬಿ. ರಂಗಾಪುರ ಮಾತನಾಡಿ, ನಮ್ಮ ಪೂರ್ವಜರು ದುಡಿಮೆಯ ನಂತರ ಸಂಜೆ ದೇವಸ್ಥಾನಗಳಲ್ಲಿ ಭಜನೆಗಳನ್ನು ಹಾಡುತ್ತಿದ್ದರು. ಹಬ್ಬಗಳಲ್ಲಿ ಜಾನಪದ ಕುಣಿತ ಜೊತೆ ಹಾಡು ಇರುತ್ತಿತ್ತು. ಹೆಣ್ಣು ಮಕ್ಕಳು ಬೀಸುವಾಗ, ಕುಟ್ಟುವಾಗ ಹಾಡುಗಳನ್ನು ಕಟ್ಟಿದರು. ಹಾಡು ಕೇಳುವುದರಿಂದ ಮತ್ತು ಹಾಡುವುದರಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ. ಅಂತಹ ಉದ್ದೇಶದಿಂದ ಕಾರಾಗೃಹದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕವಿತೆಗಳ ಭಾವಯಾನ ಏರ್ಪಡಿಸಿದ್ದು, ಒಳ್ಳೆಯ ಹೆಜ್ಜೆ ಎಂದರು. ಕಾರವಾರ ಜಿಲ್ಲಾ ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ ಅಧ್ಯಕ್ಷ ಕಡತೋಕ ಮಂಜು, ಪರಿಷತ್ತನ ಗೌರವ ಕಾರ್ಯದರ್ಶಿ ದೀಪಕಕುಮಾರ್‌ ಶೆಣ್ವೆ ಇದ್ದರು. ರಾಘವೇಂದ್ರ ಶಾನಭಾಗ ಸ್ವಾಗತಿಸಿ, ನಿರೂಪಿಸಿದರು.

ಕವಿತೆಗಳ ಗಾಯನ: ಸುಗಮ ಸಂಗೀತ ಗಾಯಕಿ ದೀಪ್ತಿ ಅರ್ಗೇಕರ್‌ ಕುವೆಂಪು ಅವರ ಕನ್ನಡವೇ ನಿತ್ಯ, ಕನ್ನಡವೇ ಸತ್ಯ, ಬೇಂದ್ರ ಅವರ ಘಮಘಮಿಸ್ತಾವ ಮಲ್ಲಿಗೆ, ನೀ ಹೊಂಟಿದ್ದೀಗ ಎಲ್ಲಿಗೆ?, ನರಸಿಂಹ ಸ್ವಾಮಿ ಅವರ ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು, ಎಂ.ಎನ್‌. ವ್ಯಾಸರಾವ್‌ ಅವರ ನೀನಿಲ್ಲದೇ ನನಗೇನಿದೆ, ನಾಗರಾಜ ಇಬ್ಬನಿ ಅವರ ಓ ಮೋಡವೇ, ನಿಲ್ಲು ಮೋಡವೇ, ಬಿ.ಆರ್‌. ಲಕ್ಷ್ಮಣರಾವ್‌ ಅವರ ಅಮ್ಮ ನಿನ್ನ ಎದೆಯಾಳದಲ್ಲಿ ಇನ್ನಿತರ ಕವಿತೆಗಳನ್ನು ಹಾಡಿ ರಂಜಿಸಿದರು. ನನ್ನ ಕಾಯದ ಕತ್ತಲ ಕಳೆಯಯ್ನಾ, ನನ್ನ ಮನದ ಮಾಯವ ಕಳೆಯಯ್ನಾ ಎಂಬ ವಚನವನ್ನು ಸಹ ಹಾಡಿದರು. ವಿಚಾರಣಾ ಧೀನ ಕೈದಿ ಆನಂದ ಸಹ ಮುನಿಸು ತರವೇ ಮುಗುದೆ, ಹಿತವಾಗಿ ನಗಲು ಬಾರದೇ ಎಂಬ ಭಾವಗೀತೆಯನ್ನು ಹಾಡಿದರು. ಉದಯ್‌ ಸೈಲ್‌ ಹಾರ್ಮೋನಿಯಂ, ರಾಜೇಶ್‌ ಸೈಲ್‌ ತಬಲಾ ಸಾಥ್‌ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಕ್ರಮ ಪ್ರಾಯೋಜಿಸಿತ್ತು. 200 ರಷ್ಟಿದ್ದ ವಿಚಾರಣಾದೀನ ಕೈದಿಗಳು ಹಾಡುಗಳನ್ನು ಕೇಳಿ ಸಂತೋಷಪಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next