ವುಕ್ಸಿ : ಭಾರತದ ಒಲಿಂಪಿಯನ್ ಸಿ.ಎ.ಭವಾನಿ ದೇವಿ ಅವರು ಫೆನ್ಸಿಂಗ್ ನಲ್ಲಿ ಹೊಸ ಇತಿಹಾಸ ಬರೆದಿದ್ದು, ಸೋಮವಾರ ಚೀನಾದ ವುಕ್ಸಿಯಲ್ಲಿ ನಡೆದ ಏಷ್ಯನ್ ಫೆನ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ಸೇಬರ್ ಸ್ಪರ್ಧೆಯ(ಕತ್ತಿ ವರಸೆ) ಸೆಮಿಫೈನಲ್‌ಗೆ ಮುನ್ನಡೆಯುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು, ಈವೆಂಟ್‌ನಲ್ಲಿ ಭಾರತಕ್ಕೆ ತನ್ನ ಚೊಚ್ಚಲ ಪದಕವನ್ನು ಖಚಿತಪಡಿಸಿದ್ದಾರೆ. ಸೆಮಿಫೈನಲ್‌ನಲ್ಲಿ 29 ರ ಹರೆಯದ ಭವಾನಿ ಉಜ್ಬೇಕಿಸ್ತಾನ್‌ನ ಝೈನಾಬ್ ದೈಬೆಕೋವಾ ವಿರುದ್ಧ ಸೆಣಸಲಿದ್ದಾರೆ.
ಕ್ವಾರ್ಟರ್‌ಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಜಪಾನ್‌ನ ಮಿಸಾಕಿ ಎಮುರಾ ಅವರನ್ನು 15-10 ರಿಂದ ಸೋಲಿಸಿ ಬೆರಗುಗೊಳಿಸಿದರು.ಕೈರೋದಲ್ಲಿ ನಡೆದ 2022 ರ ವಿಶ್ವ ಫೆನ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಿಸಾಕಿ ಮಹಿಳೆಯರ ಸೇಬರ್ ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು.
ಫೆನ್ಸಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಅವರು ಭವಾನಿ ಅವರ ಐತಿಹಾಸಿಕ ಸಾಧನೆಯನ್ನು ಪ್ರಶಂಸಿಸಿದ್ದು, “ಭಾರತೀಯ ಫೆನ್ಸಿಂಗ್‌ಗೆ ಇದು ಅತ್ಯಂತ ಹೆಮ್ಮೆಯ ದಿನ. ಈ ಹಿಂದೆ ಯಾರೂ ಸಾಧಿಸಲಾಗದನ್ನು ಭವಾನಿ ಸಾಧಿಸಿದ್ದಾರೆ. ಪ್ರತಿಷ್ಠಿತ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಫೆನ್ಸರ್. ಇಡೀ ಫೆನ್ಸಿಂಗ್ ಭ್ರಾತೃತ್ವದ ಪರವಾಗಿ, ನಾನು ಆಕೆಯನ್ನು ಅಭಿನಂದಿಸುತ್ತೇನೆ. ಚಿನ್ನದ ಪದಕ ತರುತ್ತಾಳೆ ಎಂದು ಭಾವಿಸುತ್ತೇನೆ ಎಂದು ಮೆಹ್ತಾ ಪಿಟಿಐಗೆ ಹೇಳಿದ್ದಾರೆ.
ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಫೆನ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಭವಾನಿ ದೇವಿ, ಟೋಕ್ಯೋ ಗೇಮ್ಸ್‌ನಲ್ಲಿ 32 ನೇ ಸುತ್ತಿನಲ್ಲಿ ನಿರ್ಗಮಿಸಿದ್ದರು.