ಸಾಮಾನ್ಯವಾಗಿ ಚಿತ್ರರಂಗಕ್ಕೆ ಬರುವ ನಟಿಯರು ಹೀರೋಯಿನ್ ಆಗಬೇಕು, ಗ್ಲಾಮರಸ್ ಆಗಿ ಕಾಣಿಸಿಕೊಳ್ಳಬೇಕೆಂದು ಕನಸು ಕಾಣುತ್ತಾರೆ. ಕಾಮಿಡಿ ನಟಿಯಾಗಬೇಕು, ಸಿಕ್ಕ ಪಾತ್ರಗಳ ಮೂಲಕ ಗಮನ ಸೆಳೆಯಬೇಕೆಂದುಕೊಂಡು ಸಿನಿಮಾ ಕನಸು ಕಾಣುವವರು ಕಡಿಮೆ. ಈ ತರಹ ವಿಭಿನ್ನ ಪಾತ್ರಗಳ ಕನಸು ಕಂಡುಕೊಂಡು ಈಗ ಆ ಕನಸನ್ನು ಈಡೇರಿಸಿಕೊಳ್ಳುತ್ತಿರುವ ನವನಟಿ ಶಾಲಿನಿ ಭಟ್. ಯಾವ ಶಾಲಿನಿ ಭಟ್ ಎಂದರೆ ಇತ್ತೀಚೆಗಷ್ಟೇ ಬಿಡುಗಡೆಯಾದ “ಕರಾಲಿ’ ಚಿತ್ರವನ್ನು ತೋರಿಸಬೇಕು. ಆ ಚಿತ್ರದ ಮಂಗಳಮುಖೀ ಪಾತ್ರದ ಮೂಲಕ ಗಮನ ಸೆಳೆದವರು ಶಾಲಿನಿ ಭಟ್. ಸದ್ಯ ಆ ಪಾತ್ರಕ್ಕೆ ಸಿಗುತ್ತಿರುವ ಪ್ರಶಂಸೆಯಿಂದ ಶಾಲಿನಿ ಖುಷಿಯಾಗಿದ್ದಾರೆ.
ಶಾಲಿನಿ ಮೂಲತಃ ಶೃಂಗೇರಿಯ ಹುಡುಗಿ. ಕಾಲೇಜು ಮುಗಿಸಿಕೊಂಡ ನಂತರ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬರಲೇಬೇಕಿತ್ತು. ಹಾಗೆ ಬಂದ ಶಾಲಿನಿ ಕಂಪೆನಿಯೊಂದರಲ್ಲಿ ಕೆಲಸಕ್ಕೂ ಸೇರಿದ್ದರು.
ಚಿಕ್ಕಂದಿನಿಂದಲೇ ಸಿನಿಮಾ ಆಸಕ್ತಿ ಇದ್ದ ಶಾಲಿನಿ ಇಲ್ಲಿ “ಬಣ್ಣ’ ತಂಡಕ್ಕೆ ಸೇರಿಕೊಳ್ಳುತ್ತಾರೆ. ಹೀಗೆ “ಬಣ್ಣ’ ತಂಡದ ಜೊತೆಗಿದ್ದ ಶಾಲಿನಿಗೆ ಮೊದಲು ಸಿಗೋದು ಧಾರಾವಾಹಿ. “ರೋಬೋ ಫ್ಯಾಮಿಲಿ’, “ಪ್ರೀತಿ ಪ್ರೇಮ’, “ಈ ಬಂಧನ’ ಸೇರಿದಂತೆ ಒಂದಷ್ಟು ಧಾರಾವಾಹಿಗಳಲ್ಲಿ ಅವಕಾಶ ಸಿಗುತ್ತದೆ. ಅವೆಲ್ಲವೂ ಕಾಮಿಡಿ. ಶಾಲಿನಿಗೂ ಕಾಮಿಡಿ ಎಂದರೆ ಇಷ್ಟವಂತೆ. “ಗಬ್ಬರ್’ ಎಂಬ ಶೋನಲ್ಲಿ ಮೂಕಿ ಪಾತ್ರದಲ್ಲಿ ನಗಿಸಿದ ಖ್ಯಾತಿ ಕೂಡಾ ಅವರಿಗಿದೆ. ಬಣ್ಣದ ಲೋಕದಲ್ಲಿ ಬಿಝಿಯಾಗುತ್ತಿದ್ದ ಶಾಲಿನಿ ಕೆಲಸಕ್ಕೆ ಗುಡ್‌ಬೈ ಹೇಳಿ ಫುಲ್‌ಟೈಮ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟೇಬಿಡುತ್ತಾರೆ. ಸದ್ಯ ಶಾಲಿನಿ ನಟಿಸಿದ “ಕರಾಲಿ’ಯ ಪಾತ್ರ ಸದ್ದು ಮಾಡುತ್ತಿದೆ. ಶಾಲಿನಿಗೆ ಇದು ನಾಲ್ಕನೇ ಸಿನಿಮಾ. “ಸತ್ಯದೇವತೆ ಕಬ್ಟಾಳಮ್ಮ’, “ಅಲ್ಲಮ’, “ಬಿಎಂಡಬ್ಲ್ಯು’ ಚಿತ್ರಗಳಲ್ಲಿ ಶಾಲಿನಿ ನಟಿಸಿದ್ದಾರೆ. ಇದಲ್ಲದೇ “ಅಹುಲಾ ಅಹುಲಾ’
ಎಂಬ ಚಿತ್ರವೂ ಕೈಯಲ್ಲಿದೆ.
ಸಾಮಾನ್ಯವಾಗಿ ನಟಿಯರು ಮಂಗಳಮುಖೀ ಪಾತ್ರ ಮಾಡೋದು ಕಡಿಮೆ. ಆದರೆ, ಶಾಲಿನಿ ಮಾಡಿದ್ದಾರೆ. ಅದಕ್ಕೆ ಕಾರಣ ಆ ಪಾತ್ರ ವಿಭಿನ್ನತೆಯಂತೆ. “ನನಗೆ ಹೀರೋಯಿನ್ ಆಗಬೇಕು, ಗ್ಲಾಮರ್ ಆಗಿ ಕಾಣಿಸಿಕೊಳ್ಳಬೇಕೆಂಬ ಆಸೆ ಇಲ್ಲ. ವಿಭಿನ್ನವಾದ ಪಾತ್ರದಲ್ಲಿ ನಟಿಸಿಬೇಕೆಂಬ ಆಸೆ ಮುಂಚಿನಿಂದಲೂ ಇತ್ತು. ಅದಕ್ಕೆ ಪೂರಕವಾಗಿ “ಕರಾಲಿ’ ಸಿಕ್ಕಿತು. ಮಂಗಳಮುಖೀಯರು ಕೈ ತಟ್ಟುವಂತೆ ನಾನು ಕೂಡಾ ಅಭ್ಯಾಸ ಮಾಡಿದೆ. ಮಂಗಳಮುಖೀಯರೇ ಹೇಳಿಕೊಟ್ಟರು’ ಎನ್ನುವುದು ಶಾಲಿನಿ ಮಾತು. ಈ ಪಾತ್ರ ಮಾಡಿದ್ದರ ಬಗ್ಗೆ ಶಾಲಿನಿಗೆ ಯಾವುದೇ ಬೇಸರವಿಲ್ಲವಂತೆ. “ಯಾವುದಾದರೂ ಸಿನಿಮಾಕ್ಕೆ ನಾನೇ ಬೇಕೆಂದಾದರೆ ಖಂಡಿತಾ ತಗೋತ್ತಾರೆ. ಅದು ಬಿಟ್ಟು ಏನೇನೋ ಕಾರಣ ಕೊಟ್ಟರೆ ನಾನೇನು ಮಾಡಲಾಗುವುದಿಲ್ಲ. ನನಗೆ ವಿಭಿನ್ನ ಪಾತ್ರ ಮಾಡಿದ ಖುಷಿ ಇದೆ’ ಎನ್ನಲು ಮರೆಯುವುದಿಲ್ಲ.
ರವಿ ರೈ