ಶಿರಸಿ-ಕುಮಟಾ ರಸ್ತೆಯಲ್ಲಿ ದೇವಿಮನೆ ಘಟ್ಟ ಸಿಗುತ್ತದೆ. ಶಿರಸಿ ಕಡೆಯಿಂದ ಹೋದರೆ ಆರೆಂಟು ಕಿ.ಮೀ.ಘಟ್ಟ ಇಳಿಯಬೇಕು. ಕಾರವಾರ, ಕುಮಟಾ ಕಡೆಯಿಂದ ಬಂದರೆ ಘಟ್ಟ ಏರಬೇಕು. ಈ ಘಟ್ಟದ ಬುಡದಲ್ಲಿ ಸಿಗುವ ಊರೇ ಮಾಸ್ತಿಹಳ್ಳ. ಹೀಗೆಲ್ಲ ಸರ್ಕಸ್ ಮಾಡುವ ಹೊತ್ತಿಗೆ ಹೊಟ್ಟೆ ತಾಳ ಹಾಕಿದರೆ ಈ ಮಾಸ್ತಿಹಳ್ಳದಲ್ಲೊಂದು ಭಟ್ರ ಹೋಟೆಲ್ಲಿದೆ.
ಹೊರಗಿನಿಂದ ನೋಡಿದರೆ ಸಣ್ಣ ಮನೆ ಕಂಡಂತೆ ಕಾಣುತ್ತದೆ. ಒಂದು ಕುಟೀರ ರೀತಿಯ ಮನೆಯ ಎದುರು ಒಂದಿಷ್ಟು ಖಾರಾದ ಪ್ಯಾಕ್, ಬಿಸ್ಕೇಟ್, ಚಾಕೋಲೇಟ್‌ಗಳು. ಇದಿಷ್ಟು ಬಿಟ್ಟರೆ ನಿಮ್ಮಲ್ಲಿ ಬೇರೇನಿದೆ ಎಂದು ಕೇಳಿದರೆ ಅವಲಕ್ಕಿ ಮೊಸರು, ಮಿಸಳ್ ಬಾಜಿ ಎನ್ನುತ್ತಾರೆ!
ಈ ಭಟ್ರ ಹೋಟೆಲ್‌ನ ವಿಶೇಷವೇ ಇದು. ಪಕ್ಕಾ ಮಲೆನಾಡ ಶೈಲಿಯ ಅವಲಕ್ಕಿ ಮೊಸರು ಹಾಗೂ ಮಿಸಳ್ ಬಾಜಿ. ಈ ಎರಡು ಬಿಟ್ಟು ಬೇರೇನೂ ತಿಂಡಿ ಸಿಗುವುದಿಲ್ಲ. ಈ ಎರಡು ತಿಂಡಿಗಳನ್ನು ತಯಾರಿಸಿ, ಮಾರುತ್ತಲೇ ಕಳೆದ ಇಪ್ಪತ್ತೆರಡು ವರ್ಷದಿಂದ ಗ್ರಾಹಕರನ್ನು ಸೆಳೆದಿದ್ದಾರೆ. ಯಾವಮಟ್ಟಿಗೆ ಎಂದರೆ, ಈ ದಾರಿಯಲ್ಲಿ ಸಾಗುವ, ಮಾಹಿತಿ ಉಳ್ಳ ಪ್ರಯಾಣಿಕರಿಗೆ, ಭಟ್ಟರ ಹೋಟೆಲ್‌ನಲ್ಲಿ ಇದನ್ನು ತಿನ್ನದಿದ್ದರೆ ಮುಂದೆ ಹೋಗುವುದಕ್ಕೆ ಮನಸ್ಸೇ ಒಪ್ಪುವುದಿಲ್ಲ. ಅಷ್ಟು ಸ್ವಾದಿಷ್ಟವಾಗಿ ಅವಲಕ್ಕಿ ಮೊಸರು, ಬಿಸಿ ಬಿಸಿ ಮಿಸಳ್ ಬಾಜಿ ಇಲ್ಲಿ ಫೇಮಸ್ಸು.
ಭಟ್ಟರು ಮೂಲತಃ ಕುಮಟಾ ತಾಲೂಕಿನ ಬರಗದ್ದೆಯವರು. ಮಹಾಬಲೇಶ್ವರ ಪರಮೇಶ್ವರ ಭಟ್ಟ ಎಂಬುದು ಅವರ ಪೂರ್ಣನಾಮ. ತಮ್ಮ ಇಪ್ಪತ್ತೆಂಟನೇ ವರ್ಷದಿಂದ ಅವರು ಈ ಹೋಟೆಲ್ ನಡೆಸುತ್ತಿದ್ದಾರೆ. ಈ ಹೋಟೆಲ್‌ಗೆ ಬೋರ್ಡಿಲ್ಲ. ಆದರೆ ಜನರೇ ಭಟ್ಟರ ಹೋಟೆಲ್ ಎಂದು ನಾಮಕರಣ ಮಾಡಿದ್ದಾರೆ. ಇಲ್ಲಿ ಸಿಗುವ ಚಹಾ, ಕೆ.ಟಿ, ಕಾಫಿಯನ್ನು ಜನರು ಇಷ್ಟ ಪಟ್ಟು ಕುಡಿಯುತ್ತಾರೆ. ಅಲ್ಲೂ ತಮ್ಮದೇ ಆದ ಬ್ರಾಂಡ್ ಉಳಿಸಿಕೊಂಡಿದ್ದಾರೆ.
ಮುಂಜಾನೆ 5ರಿಂದ ರಾತ್ರಿ 10ರ ತನಕ ಹೋಟೆಲ್ ತೆರೆದಿರುತ್ತದೆ. ಮಿಸಳ್‌ಬಾಜಿ, ಅವಲಕ್ಕಿ ಮೊಸರಿನ ತಲಾ ಒಂದು ಪ್ಲೇಟ್‌ಗೆ 20 ರೂ. ಮಾತ್ರ. ದೂರ ದೂರ ತೆರಳುವ ಅನೇಕ ವಾಹನಗಳ ಸವಾರರು, ಶಿರಸಿ ಭಾಗದಿಂದ ಕಾರವಾರ ಜಿಲ್ಲಾ ಕೇಂದ್ರಕ್ಕೆ ತೆರಳುವ ಅಧಿಕಾರಿಗಳು, ಜನಪ್ರತಿನಿಧಿಗಳೂ ಇಲ್ಲಿನ ಖಾಯಂ ಅತಿಥಿಗಳು.
ಅವಲಕ್ಕಿ ಮೊಸರಿಗೆ ಸಕ್ಕರೆ ಹಾಕಿ ಬಟ್ಟಲ ತುಂಬ ನೀಡುತ್ತಾರೆ. ಪಕ್ಕದ ಹಳ್ಳಿಗರು ನೀಡುವ ಹಾಲು ಬಳಸಿ ಹೆಚ್ಚು ಪ್ರಮಾಣದಲ್ಲಿ ಮೊಸರು ಮಾಡಿಟ್ಟುಕೊಳ್ಳುತ್ತಾರೆ. ಹುಳಿ ಇರದ ಅವಲಕ್ಕಿ ಮೊಸರು, ಅನೇಕ ಪ್ರಯಾಣಿಕರ ಹೊಟ್ಟೆಯನ್ನು ತಣ್ಣಗೆ ಇಡುತ್ತಿದೆ. ಮಿಸಳ್ ಬಾಜಿಗೂ ಅವರದ್ದೇ ಆದ ಗ್ರಾಹಕರ ಇದ್ದಾರೆ. ಕುಮಟಾ ಶಿರಸಿಯಿಂದಲೂ ಬಂದು ಇಲ್ಲಿಯೇ ತಿಂದು ಹೋಗುವವರು ಇದ್ದಾರೆ. ತಮ್ಮಲ್ಲಿಗೆ ಬರುವ ಗ್ರಾಹಕರಿಗಾಗಿ ಉಚಿತವಾಗಿ ತಾಂಬೂಲದ ಬಟ್ಟಲನ್ನೂ ಇಟ್ಟಿದ್ದಾರೆ ಭಟ್ಟರು. ಯಾಣ, ಕುಮಟಾದ ತೆಂಗಿನ ಕಾಯಿಗಳನ್ನು ಕೂಡ ಕೇಳಿ ಪಡೆಯುವ ಜನರೂ ಇದ್ದಾರೆ.
ಇಲ್ಲಿ ತಿಂಡಿ ತಿನ್ನಲು ಬಂದವರನ್ನು, ನಗುಮೊಗದಿಂದ ಸ್ವಾಗತಿಸಿ ಉಪಚರಿಸುವ ರೀತಿ ಆತ್ಮೀಯವಾದದ್ದು. ಈ ಕಾರಣಕ್ಕೂ ಭಟ್ರ ಹೋಟ್ಲು ಸುತ್ತಲಿನ ಜನರ ಜಂಕ್ಷನ್ ಪಾಯಿಂಟ್ ಕೂಡ ಆಗಿದೆ. ಹತ್ತಾರು ಬಗೆಯ ತಿಂಡಿ ಸಿದ್ಧ ಮಾಡಿ ಸ್ವಾಗತಿಸುವ ಹೋಟೆಲ್‌ಗಳ ನಡುವೆ ಎರಡೇ ತಿಂಡಿಗಳಿಂದ ನಿತ್ಯವೂ ನೂರಾರು ಗ್ರಾಹಕರನ್ನು ತಮ್ಮತ್ತ ಸೆಳೆಯುವ ಭಟ್ರ ಹೋಟೆಲ್ ಒಂಥರಾ ಟಿಪಿಕಲ್ ಆಗಿದೆ!
– ರಾಘವೇಂದ್ರ ಬೆಟ್ಟಕೊಪ್ಪ