ಭಟ್ಕಳ: ಪ್ರವಾದಿ ಮೊಹಮ್ಮದ್ ಪೈಗಂಬರರ ಕುರಿತು ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದ ನೂಪುರ ಶರ್ಮಾ ಮತ್ತಿತರರ ಹೇಳಿಕೆಯನ್ನು ಇಲ್ಲಿನ ಮಜ್ಲಿಸೆ ಇಸ್ಲಾವ – ತಂಝೀಂ ತೀವ್ರವಾಗಿ ಖಂಡಿಸಿದೆ.
ಈ ಕುರಿತು ತಂಜೀಂ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ತಂಜೀಂ ಮಾಧ್ಯಮ ಪ್ರಮುಖ ಡಾ. ಹನೀಫ್ ಶಬಾಬ್ ಮಾತನಾಡಿ ದೇಶದಲ್ಲಿ ಇಸ್ಲಾಂ ಸೇರಿದಂತೆ ಯಾವುದೇ ಧರ್ಮ ಮತ್ತು ಧರ್ಮದ ಪ್ರಮುಖರ ವಿರುದ್ದ ಅವಹೇಳನ ಮಾಡುವುದನ್ನು ತಡೆಯಲು ಕಠಿಣ ಕಾಯ್ದೆ ಜಾರಿಗೆ ತರುವ ಅಗತ್ಯವಿದೆ ಎಂದು ಹೇಳಿದೆ.
ಮುಸ್ಲೀಮರು ಪ್ರವಾದಿ ಮೊಹಮ್ಮದ್ ಪೈಗಂಬರರನ್ನು ಅತ್ಯುನ್ನತ ಸ್ಥಾನಲ್ಲಿ ಕಾಣುತ್ತಿದ್ದು, ಜಗತ್ತಿಗೆ ಮಾನವೀಯತೆ ಸೇರಿದಂತೆ ಉತ್ತಮ ಸಂದೇಶ ಸಾರಿದ ಮಹಾನ್ ವ್ಯಕ್ತಿಗಳ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿರುವುದು ತೀರಾ ಖಂಡನೀಯ. ಹೇಳಿಕೆ ನೀಡಿದ ದಿನವೇ ಆರೋಪಿಗಳನ್ನು ಸರಕಾರ ಬಂಧಿಸಿದ್ದರೆ ದೇಶದಲ್ಲಿ ಪ್ರತಿಭಟನೆ ಆಗುತ್ತಿರಲಿಲ್ಲ. ಆರೋಪಿಗಳ ವಿರುದ್ದ ದೂರು ದಾಖಲಾಗಿದ್ದರೂ ಸರಕಾರ ಬಂಧನ ಮಾಡುವಲ್ಲಿ ವಿಳಂಬ ಮಾಡುತ್ತಿದ್ದು, ಇದೊಂದು ಗಂಭೀರ ಪ್ರಕರಣವಾಗಿರುವುದರಿಂದ ಶೀಘ್ರ ಬಂಧಿಸಬೇಕು. ದೇಶದಲ್ಲಿ ಧರ್ಮ ಮತ್ತು ಧರ್ಮದ ಪ್ರಮುಖರ ಅವಹೇಳನ ಮಾಡದಂತೆ ಕಠಿಣ ಕಾನೂನು ಜಾರಿಗೆ ತರಬೇಕು. ಕಠಿಣ ಕಾಯ್ದೆ ತಂದರೆ ಮಾತ್ರ ಇಂತಹ ಅವಹೇಳನದ ಹೇಳಿಕೆಗಳನ್ನು ತಡೆಯಬಹುದಾಗಿದೆ ಎಂದರು.
ಇದನ್ನೂ ಓದಿ : ರಾಜ್ಯ ಎನ್‌ಎಸ್‌ಎಸ್ ಘಟಕಕ್ಕೆ 42,800 ಸ್ವಯಂ ಸೇವಕರ ಸೇರ್ಪಡೆಗೆ ಅವಕಾಶ
ಈ ಸಂದರ್ಭದಲ್ಲಿ ಖಲೀಪಾ ಜಮಾತುಲ್ ಮುಸ್ಲೀಮಿನ್‍ನ ಪ್ರಧಾನ ಖಾಜಿ ಮೌಲಾನಾ ಖಾಜಾ ಅಕ್ರಮಿ ಮದನಿ, ಜಮಾತುಲ್ ಮುಸ್ಲೀಮಿನ್‍ನ ಮೌಲಾನಾ ಅಬ್ದುಲ್ ರಾಬೆ ಖತೀಬ್ ನದ್ವಿ ಮಾತನಾಡಿ ಪ್ರವಾದಿ ಪೈಗಂಬರರ ವಿರುದ್ದದ ಹೇಳಿಕೆಯನ್ನು ಬಲವಾಗಿ ಖಂಡಿಸಿದರು.
ಪತ್ರಿಕಾ ಗೋಷ್ಟಿಯಲ್ಲಿ ಭಟ್ಕಳ ಮುಸ್ಲೀಂ ಯುತ್ ಫೆಡರೇಶನ್ ಅಧ್ಯಕ್ಷ ಅಝೀಜುರ್ ರೆಹಮಾನ್, ತಂಝೀಂ ಉಪಾಧ್ಯಕ್ಷ ಮೊತೆಶಾಂ ಜಾಫರ್ ಸಾಹೇಬ, ಕಾರ್ಯದರ್ಶಿ ಜೈಲಾನಿ ಶಾಬಂದ್ರಿ, ಮೌಲಾನಾ ಉಸ್ಮಾ, ಮೌಲ್ವಿ ಅಂಜುಮ್, ಮೌಲಾನಾ ಅಲೀಂ ನದ್ವಿ ಮುಂತಾದವರು ಉಪಸ್ಥಿತರಿದ್ದರು.