Advertisement

Bhatkal: ಸಚಿವ ಮಂಕಾಳ ವೈದ್ಯ ಅವರ ಕಾರ್ಯಾಲಯ ಆರಂಭ; ಜನಜಂಗುಳಿ

07:33 PM Sep 24, 2023 | Team Udayavani |

ಭಟ್ಕಳ: ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಕಾರ್ಯಾಲಯವನ್ನು ಇಲ್ಲಿನ ಅಂಜುಮಾನ್ ಕಾಲೇಜು ರಸ್ತೆಯ ಈ ಹಿಂದಿನ ಸಹಾಯಕ ಆಯುಕ್ತರ ಕಚೇರಿ ಕಟ್ಟಡದಲ್ಲಿ ಆರಂಭಿಸಲಾಯಿತು.

Advertisement

ಕಾರ್ಯಾಲಯ ಉದ್ಘಾಟನೆಗೂ ಪೂರ್ವ ವೇ.ಮೂ. ವಿಶ್ವನಾಥ ಭಟ್ಟ ಅವರ ನೇತೃತ್ವದಲ್ಲಿ ಪೂಜೆ ನೆರವೇರಿಸಿದ ಸಚಿವರು ನಂತರ ಕಚೇರಿಯ ಉದ್ಘಾಟನೆಯನ್ನು ಪುಟಾಣಿಗಳಾದ ಯಶಸ್ವಿ ಆರ್. ಭಟ್ ಹಾಗೂ ರಶ್ಮಿತಾ ಆರ್. ಭಟ್ ಅವರಿಂದ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದ್ದು ವಿಶೇಷವಾಗಿತ್ತು. ಸದಾ ಜನರೊಂದಿಗೆ ಇರುವ ಸಚಿವರ ಕಾರ್ಯಾಲಯ ಉದ್ಘಾಟನೆಯಲ್ಲಿ ನೂರಾರು ಜನರು ಸೇರಿದ್ದರಿಂದ ಒಮ್ಮೆಲೆ ಹೆಚ್ಚು ಜನಜಂಗುಳಿ ಎರ್ಪಟ್ಟಿದ್ದು ಸಂಜೆಯ ತನಕವೂ ಕೂಡಾ ಕಚೇರಿಯಲ್ಲಿಯೇ ಇದ್ದು ತಮ್ಮಲ್ಲಿ ಬಂದ ಜನರಿಂದ ಮನವಿಗಳನ್ನು ಸ್ವೀಕರಿಸಿ ಅವರ ಸಂಕಷ್ಟಗಳನ್ನು ಕೇಳಿ ಸ್ಪಂದಿಸುವ ಭರವಸೆಯೊಂದಿಗೆ ಕಳುಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಅದರ ಹಿಂದೆ ಯಾರೇ ಇದ್ದರೂ ಸಹ ಜನರಿಗೆ ದೊರೆಯ ಬೇಕಾದ ಸೌಲಭ್ಯದಿಂದ ವಂಚಿತರನ್ನಾಗಿ ಮಾಡಲು ಸಾಧ್ಯವಿಲ್ಲ. ಐ.ಆರ್.ಬಿ. ಕಾಮಗಾರಿಯನ್ನು ಮಾಡದೇ ಇರುವುದನ್ನು ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿ ವಿಷಯವನ್ನು ತಿಳಿಸಿದ್ದಾರೆ. ಆದರೆ ಕೇಂದ್ರ ಸರಕಾರದ ನಿಯಂತ್ರಣದಲ್ಲಿರುವ ಹೆದ್ದಾರಿ ಕಾಮಗಾರಿ ಹಾಗೂ ಐ.ಆರ್.ಬಿ. ಕಂಪೆನಿ ಕೇಂದ್ರ ಸಚಿವರದ್ದೆಂದು ತಿಳಿದುಕೊಂಡಿದ್ದೇನೆ. ಆದರೆ ಜನತೆಗೆ ಅಗತ್ಯ ಸೌಲಭ್ಯ ಒದಗಿಸುವಲ್ಲಿ ರಾಜೀ ಇಲ್ಲ ಜನರಿಗೆ ತೊಂದರೆಯಾಗಬಾರದು ಎನ್ನುವುದು ನಮ್ಮ ಉದ್ದೇಶ. ಕಾರವಾರದ ಸುರಂಗ ಸೋರುತ್ತಿದ್ದು ಅದರ ಸುರಕ್ಷತಾ ಪ್ರಮಾಣ ಪತ್ರವನ್ನು ಕೇಳಿದ್ದೇವೆ. ಆದರೆ ಅದುವೇ ಐ.ಆರ್.ಬಿ.ಯವರಲ್ಲಿ ಇಲ್ಲ ಎನ್ನುವುದು ಇವರ ಕಾರ್ಯವೈಖರಿ ಬಗ್ಗೆ ತೋರಿಸುತ್ತದೆ. ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅನೇಕ ಅಪಘಾತಗಳು ಸಂಭವಿಸಿದೆ, ಅನೇಕ ಸಾವು-ನೋವುಗಳಾಗಿದೆ ಅದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದ ಸಚಿವರು ಇಲ್ಲಿಯ ತನಕ ಬಿಜೆಪಿಯವರು ಈ ಬಗ್ಗೆ ಮಾತೇ ಆಡದಿರುವ ಕುರಿತು ಬೇಸರ ವ್ಯಕ್ತಪಡಿಸಿದರು.

ಕಚೇರಿ ಉದ್ಘಾಟನೆಯ ವೇಳೆ ಮಾತನಾಡಿದ ತಂಝೀಮ್ ಅಧ್ಯಕ್ಷ ಇನಾಯತ್‌ವುಲ್ಲಾ ಶಾಬಂದ್ರಿ ಸಚಿವರ ಕಚೇರಿಯ ಉದ್ಘಾಟನೆಯಿಂದ ಜಿಲ್ಲೆಯ ಜನರಿಗೆ ಅನುಕೂಲವಾಗಿದೆ. ಯವುದೇ ಕೆಲಸ ಕಾರ್ಯಗಳಿದ್ದರೂ ಕೂಡಾ ಇಲ್ಲಿಗೆ ಬಂದು ಸಚಿವರ ಆಪ್ತ ಕಾರ್ಯದರ್ಶಿಯವರಿಗೆ ತಿಳಿಸಬಹುದು. ಬೆಂಗಳೂರಿನಲ್ಲಿಯೂ ಕೂಡಾ ಸಚಿವರ ಕಾರ್ಯಾಲಯದಲ್ಲಿ ಉತ್ತಮ ಕಾರ್ಯಗಳನ್ನು ಮಾಡುವ ಅಧಿಕಾರಿಗಳಿದ್ದಾರೆ. ಸಚಿವರು ಯಾವುದೇ ಕಾರ್ಯವನ್ನು ಮಾಡಬೇಕು ಅಂದು ಕೊಂಡರೆ ಅದನ್ನು ಮಾಡಿ ಮುಗಿಸುವ ಛಲವನ್ನು ಹೊಂದಿದ್ದು ಜಿಲ್ಲೆಯ ಜನತೆಗೆ ಇನ್ನಷ್ಟು ಸಹಾಯವಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಧ್ಯಕ್ಷ ಸಾಯಿ ಗಾಂವಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಹಿರಿಯ ಮುಖಂಡ ಎಲ್.ಎಸ್.ನಾಯ್ಕ, ತಂಝೀಮ್ ಮಾಜಿ ಅಧ್ಯಕ್ಷ ಎಂ.ಎ.ಮುಝಮ್ಮಿಲ್, ಜಿ.ಪಂ.ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ರಾಮಾ ಮೊಗೇರ, ಗೋಪಾಲ ನಾಯ್ಕ, ಭಾಸ್ಕರ ನಾಯ್ಕ, ವಿಷ್ಣು ದೇವಡಿಗ, ಪುರಸಭಾ ಮಾಜಿ ಅಧ್ಯಕ್ಷ ಪರ್ವೆಜ್ ಕಾಶಿಮಜಿ, ಎಫ್.ಕೆ. ಮೊಗೇರ, ವಿಠಲ ನಾಯ್ಕ, ಆಲ್ಬರ್ಟ ಡಿ ಕೋಸ್ತ ಮುಂತಾದವರು ಉಪಸ್ಥಿತರಿದ್ದರು.

Advertisement

ಪತ್ರಿಕಾ ವಿತರಕರ ಒಕ್ಕೂಟದಿಂದ ಸನ್ಮಾನ
ಮಂಕಾಳ ವೈದ್ಯ ಅವರನ್ನು ಅವರ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಭಟ್ಕಳ ಘಟಕದ ವತಿಯಿಂದ ತಾಲೂಕಾ ಅಧ್ಯಕ್ಷ ರಾಮಕೃಷ್ಣ ಭಟ್ಟ, ಕಾರ್ಯದರ್ಶಿ ಮಂಜುನಾಥ ದೇವಡಿಗ ಅವರು ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ನೀಡಿದ ಗುರುತಿನ ಚೀಟಿಯನ್ನು ಸಚಿವರು ಪತ್ರಿಕಾ ವಿತರಕರಿಗೆ ಹಸ್ತಾಂತರಿಸಿದರು. ಪತ್ರಿಕಾ ಒಕ್ಕೂಟದ ವತಿಯಿಂದ ಸಚಿವರಿಗೆ ಮನವಿಯನ್ನು ನೀಡಿದ್ದು ಮನವಿಯಲ್ಲಿ ಸರಕಾರದಿಂದ ಸಹಾಯ, ಸಹಕಾರ ವದಗಿಸುವಂತೆ ಕೋರಲಾಗಿದೆ. ಸರಕಾರದ ಮಟ್ಟದಲ್ಲಿ ಗಮನ ಸೆಳೆದು ಪತ್ರಿಕಾ ವಿತರಕರಿಗೆ ಸರಕಾರದಿಂದ ಸೌಲಭ್ಯಗಳನ್ನು ವದಗಿಸಿಕೊಡುವರೇ ಪ್ರಯತ್ನಿಸುವಂತೆ ಮನವಿ ಮಾಡಿದ್ದು, ವರ್ಷದ 365 ದಿನವೂ ಕೂಡಾ ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸಿ, ಅವರ ಮನ ತಣಿಸುವಲ್ಲಿ ಹಾಗೂ ರಾಷ್ಟç, ಅಂತಾರಾಷ್ಟ್ರೀಯ ಮಟ್ಟದ ನಿಖರವಾದ ಸುದ್ದಿಯನ್ನು ತಲುಪಿಸುವಲ್ಲಿ ಮಳೆ, ಬಿಸಿಲು, ಛಳಿಯೆನ್ನದೇ ನಾವು ಕರ್ತವ್ಯವನ್ನು ಮಾಡುತ್ತಿದ್ದು ನಮಗೆ ಸರಕಾರದಿಂದ ಯಾವುದೇ ಸೌಲಭ್ಯವು ಈ ವರೆಗೂ ದೊರಕಿರುವುದಿಲ್ಲ. ಕನಿಷ್ಟ ತಮ್ಮನ್ನು ಕೂಲಿ ಕಾರ್ಮಿಕರೆಂದು ಪರಿಗಣಿಸಿ ಸರಕಾರ ಕಾರ್ಮಿಕರಿಗೆ ನೀಡುವ ಮಾದರಿಯಲ್ಲಿಯೇ ಸೌಲಭ್ಯ ವದಗಿಸುವಲ್ಲಿ ತಮ್ಮ ಸಹಕಾರ ಮುಖ್ಯ ಎಂದೂ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಈ ಹಿಂದೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ತಾಲೂಕಿನ ಪತ್ರಿಕಾ ವಿತರಕರಿಗೆ ಸೈಕಲ್ ನೀಡಿದ್ದನ್ನು ಸ್ಮರಿಸುತ್ತಾ ಸರಕಾರದಿಂದ ಸಹಾಯ ಸಹಕಾರ ಮಾಡುವ ಕುರಿತು ಭರವಸೆಯನ್ನು ಸಹ ನೀಡಿದರು.

ಈ ಸಂದರ್ಭದಲ್ಲಿ ಪತ್ರಿಕಾ ವಿತರಕರಾದ ಮಂಜುನಾಥ ಮೊಗೇರ, ಗಣೇಶ ನಾಯ್ಕ, ದಯಾನಂದ ನಾಯ್ಕ, ಮಂಜುನಾಥ ನಾಯ್ಕ, ಸಂತೋಷ ನಾಯ್ಕ, ನಾಗರಾಜ ಶೆಟ್ಟಿ, ಕಿರಣ ಗೊಂಡ, ಧನಂಜಯ ನಾಯ್ಕ, ಮಹೇಶ ದೇವಡಿಗ, ಹೇಮಂತ ನಾಯ್ಕ, ಸುಬ್ರಹ್ಮಣ್ಯ ಕಾಯ್ಕಿಣಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next