Advertisement
ಪಾದಯಾತ್ರೆ ಕರ್ನಾಟಕ ಪ್ರವೇಶಿಸಿ ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಹಾದುಹೋಗುವ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಯ ಟಿಕೆಟ್ ಆಕಾಂಕ್ಷಿತರು ರಾಹುಲ್ ಗಾಂಧಿಯವರ ಮನ ಗೆಲ್ಲುವ ಯತ್ನ ಮಾಡಿದ್ದು ಗುಪ್ತವಾಗೇನೂ ಉಳಿದಿಲ್ಲ. ಬೆಲೆ ಏರಿಕೆ, ಕೇಂದ್ರ-ರಾಜ್ಯ ಸರಕಾರದ ಭ್ರಷ್ಟಾಚಾರ, ಕೋಮುವಾದ ಹೀಗೆ ಹಲವು ವಿಷಯಗಳನ್ನಿಟ್ಟುಕೊಂಡು ಒಡೆದ ಮನಸ್ಸುಗಳ ಒಗ್ಗೂಡಿಸುವ ಮಹತ್ತರ ಉದ್ದೇಶದಿಂದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ರಾಹುಲ್ ಗಾಂಧಿ ಸೇರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಆದಿಯಾಗಿ ಎಲ್ಲರೂ ಹೇಳುತ್ತಿದ್ದಾರೆ. ಆದರೆ ಇದು ಲೋಕಸಭೆ ಹಾಗೂ ರಾಜ್ಯ ವಿಧಾನಸಭಾ ಚುನಾವಣೆಗೆಪೂರ್ವಭಾವಿಯಾಗಿ ನಡೆಸುತ್ತಿರುವುದು ಎಂದೂ ವಿಶ್ಲೇಷಿಸಲಾಗುತ್ತಿದೆ. ಈ ಯಾತ್ರೆಯಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಬಹುತೇಕರು ತಮ್ಮ ಶಕ್ತಿ ಪ್ರದರ್ಶನ ಮಾಡಿದರು.
ಮುಖ್ಯಮಂತ್ರಿ ಜೆ.ಎಚ್. ಪಟೇಲ್ ರವರ ಸಂಬಂಧಿ ಡಾ| ಸವಿತಾ ಮಲ್ಲೇಶ್ ನಾಯ್ಕ್ ಹೀಗೆ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿರುವವರ ಸಾಲೇ ಇದೆ. ಪಾದಯಾತ್ರೆ ನೆರೆಯ ಚಿತ್ರದುರ್ಗ ಜಿಲ್ಲೆಯಲ್ಲಿ ಸಾಗಿದ ಎಲ್ಲೆಡೆ ಟಿಕೆಟ್ ಆಕಾಂಕ್ಷಿಗಳ ಸಮೂಹವೇ ನೆರೆದಿತ್ತು.
Related Articles
Advertisement
ಮಾಯಕೊಂಡ ಮಾತ್ರವಲ್ಲ ಹರಿಹರ, ಹೊನ್ನಾಳಿ, ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹರಪನಹಳ್ಳಿ, ದಾವಣಗೆರೆ ದಕ್ಷಿಣದಲ್ಲಿ ಪರೋಕ್ಷವಾಗಿಬದಲಾವಣೆ ಬಯಸುತ್ತಿರುವವರು ಎಲ್ಲರೂ ಪಾದಯಾತ್ರೆಯುದ್ದಕ್ಕೂ ತಮ್ಮದೇ ಆದ ರಾಜಕೀಯಪಟ್ಟುಗಳ ಪ್ರದರ್ಶನ ಮಾಡಿದರು ಎನ್ನಲಾಗಿದೆ. ಹೊನ್ನಾಳಿ ಕ್ಷೇತ್ರದಿಂದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿರುವುದು ಜಗಜ್ಜಾಹೀರು. ಹಾಗಾಗಿ ರಾಹುಲ್ ಗಾಂಧಿಯವರ ಪಾದಯಾತ್ರೆಯನ್ನು ಇವರು ಸುಸಂದರ್ಭವನ್ನಾಗಿಸಿಕೊಂಡಿದ್ದಾರೆ. ಪಾದಯಾತ್ರೆಯಲ್ಲಿ ತಮಗೆ ವಹಿಸಿದ್ದ ಜವಾಬ್ದಾರಿಯನ್ನು ಚೆನ್ನಾಗಿಯೇ ನಿಭಾಯಿಸುವ ಮೂಲಕ ಹೈಕಮಾಂಡ್ ಗಮನ ಸೆಳೆದಿದ್ದಾರೆ. ಇನ್ನು ಹರಿಹರ ಕ್ಷೇತ್ರದಲ್ಲಿ ಹಾಲಿ ಶಾಸಕ ಎಸ್. ರಾಮಪ್ಪ ಇದ್ದರೂ ಜಿಪಂ ಮಾಜಿ ಸದಸ್ಯ, ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ. ನಾಗೇಂದ್ರಪ್ಪ, ವಿಟಿಯುನ ವಿಶ್ರಾಂತ ಕುಲಪತಿ ಡಾ| ಎಚ್. ಮಹೇಶ್ವರಪ್ಪ ಇತರರು ಟಿಕೆಟ್‌ಗೆ ಒಂದು ಕೈ ನೋಡೋಣ ಎಂದು ಪಾದಯಾತ್ರೆಯನ್ನು ಪ್ರಥಮ ಹೆಜ್ಜೆಯನ್ನಾಗಿಸಿಕೊಂಡರು ಎಂದು ತಿಳಿದುಬಂದಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ಕ್ಷೇತ್ರದಲ್ಲೂ ಟಿಕೆಟ್‌ಗಾಗಿ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರ ಇಬ್ಬರೂ ಪುತ್ರಿಯರು ಪ್ರಯತ್ನ ನಡೆಸುತ್ತಿದ್ದಾರೆ. ಚಿತ್ರದುರ್ಗದ ಜೊತೆಗೆ ಬಳ್ಳಾರಿಯಲ್ಲೂ ರಾಹುಲ್‌ಗಾಂಧಿ ಪಾದಯಾತ್ರೆ ನಡೆದಿದ್ದು ಆಕಾಂಕ್ಷಿಗಳಿಗೆ ಡಬ್ಬಲ್ ಅವಕಾಶ ಮಾಡಿಕೊಟ್ಟಿದೆ. ಎಂ.ಟಿ. ಸುಭಾಶ್ಚಂದ್ರ ಅವರು ಸಹ ಟಿಕೆಟ್ ಕಸರತ್ತಿಗೆ ಪಾದಯಾತ್ರೆ ವೇದಿಕೆಯನ್ನಾಗಿಸಿಕೊಂಡರು. ರಾಹುಲ್ ಗಾಂಧಿಯವರ ಪಾದಯಾತ್ರೆ ರಾಜಕಾರಣದ ವೇದಿಕೆಯಲ್ಲ ಎಂದು ಹೇಳಿದರೂ ಟಿಕೆಟ್ ಆಕಾಂಕ್ಷಿತರು ಬಲ ಪ್ರದರ್ಶನ ತೋರಿಸುವಲ್ಲಿ ಹಿಂದೆ ಬೀಳದೇ ಇರುವುದು ಮುಂದೇನಾಗುತ್ತದೋ ಎಂಬ ಕುತೂಹಲ ಮೂಡಿಸಿದೆ. ಟಿಕೆಟ್ ಘೋಷಣೆಯವರೆಗೂ ಇಂತಹ ಹಲವು ಕಸರತ್ತುಗಳು ಮುಂದುವರೆಯಲಿದೆ. ರಾ. ರವಿಬಾಬು