Advertisement

ಜಲಜನಕದಿಂದ ವಾಹನ ಚಾಲನೆಗೆ ಸಂಶೋಧನೆ 

06:00 AM Jun 24, 2018 | |

ಬೆಂಗಳೂರು: ಪರಿಸರ ಮಾಲಿನ್ಯ ಕಡಿಮೆ ಮಾಡಲು ಜಲಜನಕದಿಂದ ವಾಹನ ಚಾಲನೆ ಮಾಡುವ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ ಎಂದು ಭಾರತ ರತ್ನ ಸಿ.ಎನ್‌.ಆರ್‌ ರಾವ್‌ ತಿಳಿಸಿದ್ದಾರೆ.

Advertisement

ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಳ್ಳಲಾದ ಮನೆಯಂಗಳದಲ್ಲಿ ಮಾತುಕತೆಯ 200ನೇ ಅತಿಥಿಯಾಗಿ ಭಾಗವಹಿಸಿದ ಅವರು, ಹವಾಮಾನ ವೈಪರಿತ್ಯದಿಂದ ಬೆಂಗಳೂರು ನರಳುತ್ತಿದೆ. ವಾಹನಗಳ ದಟ್ಟಣೆಯಿಂದಾಗಿ ಪರಿಸರ ಮಾಲಿನ್ಯ ಹೆಚ್ಚಾಗಿದ್ದು ಹವಾಮಾನದಲ್ಲಿ ಹಲವು ಕೆಟ್ಟ ಬದಲಾವಣೆಗಳಾಗುತ್ತಿವೆ ಎಂದು ಹೇಳಿದರು.

ವಾಹನಗಳಿಗೆ ಪೆಟ್ರೋಲ್‌ ಹಾಗೂ ಡೀಸೆಲ್‌ನಿಂದ ಬಳಸುತ್ತಿರುವುದರಿಂದ ಪರಿಸರದ ಮೇಲೆ ವಿಪರೀತ ದುಷ್ಪರಿಣಾಮ ಉಂಟಾಗುತ್ತಿದೆ. ಹೀಗಾಗಿ, ಜಲಜನಕದಿಂದ ವಾಹನ ಚಾಲನೆ ಮಾಡಬಹುದಾದ  ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ. ಅದು ಫ‌ಲಿಸಿದರೆ ಹವಾಮಾನ ವೈಪರೀತ್ಯ ತಡೆಗಟ್ಟಬಹುದು ಎಂದು ತಿಳಿಸಿದರು.

ವಿಜ್ಞಾನ ಕ್ಷೇತ್ರವು ಜಿಡಿಪಿಗೆ ಶೇ.3ರಷ್ಟು ಕೊಡುಗೆ ನೀಡುತ್ತಿದೆ. ಆದರೆ ಕೇಂದ್ರ ಸರ್ಕಾರ ಶೇ.0.9ರಷ್ಟು ಶಿಕ್ಷಣಕ್ಕೆ ಅನುದಾನ ಮೀಸಲಿಡುತ್ತಿವೆ. ಇದರಲ್ಲಿ ಮೂಲ ವಿಜ್ಞಾನ ಹಾಗೂ ಬಾಹ್ಯಕಾಶದ ಸಂಶೋಧನೆಯೂ ಒಳಗೊಂಡಿರುತ್ತದೆ. ಇಷ್ಟು ಸಣ್ಣ ಮೊತ್ತದಲ್ಲಿ ಮೂಲ ವಿಜ್ಞಾನ ಹೆಚ್ಚು  ಮುಂದುವರೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಬಜೆಟ್‌ನಲ್ಲಿ ವಿಜ್ಞಾನ ಕ್ಷೇತ್ರಕ್ಕೆ ಕರ್ನಾಟಕ ನೀಡುವಷ್ಟು ಅನುದಾನವನ್ನು ಬೇರೆ ಯಾವ ರಾಜ್ಯ ಸರ್ಕಾರವೂ ನೀಡುವುದಿಲ್ಲ. ರಾಜ್ಯ ಸರ್ಕಾರ ನೀಡುವ ಅನುದಾನದಿಂದ ಬೆಂಗಳೂರಿನ ಹಲವು ವಿಜ್ಞಾನ ಸಂಸ್ಥೆಗಳು ಉನ್ನತ ಹಂತ ತಲುಪಿವೆ. ಆದರೆ ಸಂಶೋಧನೆಗೆ ಸಂಬಂಧಿಸಿದ ಸಲಕರಣೆಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಅನುದಾನ ಒದಗಿಸಬೇಕು ಎಂದರು.

Advertisement

ಬದುಕಿವವರೆಗೂ ವಿಜ್ಞಾನಕ್ಕಾಗಿ ದುಡಿಯುವೆ
ಒಬ್ಬ ಒಳ್ಳೆಯ ಸಂಗೀತಗಾರನಾಗಿ ರೂಪುಗೊಳ್ಳಬೇಕೆಂದರೆ ನಿರಂತರವಾಗಿ ಹಾಡುವುದನ್ನು ಅಭ್ಯಾಸ ಮಾಡಬೇಕು. ಅದೇ ರೀತಿ ಒಬ್ಬ ಉತ್ತಮ ವಿಜ್ಞಾನಿ ರೂಪುಗೊಳ್ಳಬೇಕೆಂದರೆ ನಿರಂತರ ಅಧ್ಯಯನ ಮುಖ್ಯ ಎಂದು ಹೇಳಿದರು.
ನಾವು ಮಾಡುವ ಕೆಲಸಗಳಲ್ಲಿ ಆಸಕ್ತಿ ಹಾಗೂ ನೆಮ್ಮದಿ ಇರುವುದು ಮುಖ್ಯ. ನನಗೆ ಸಂಶೋಧನೆ ಹಾಗೂ ಹೊಸ ಯೋಜನೆಗಳನ್ನು ನೀಡುವುದರಲ್ಲಿಯೇ ಸಂತೋಷವಿದೆ. ಹೀಗಾಗಿ ನಾನು ಕೊನೆವರೆಗೂ ವಿಜ್ಞಾನ ಕ್ಷೇತ್ರದಲ್ಲಿಯೇ ಕೆಲಸ ಮಾಡಲು ಬಯಸುವೆ ಎಂದು ತಿಳಿಸಿದರು.

ಭಾರತವು ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಉನ್ನತಿ ಹೊಂದಿದಾಗ ಮಾತ್ರ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ಸೇರ್ಪಡೆಗೊಳ್ಳಲು ಸಾಧ್ಯ. ಈಗ ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಪೈಪೋಟಿ ನಡೆಯುತ್ತಿದೆ. ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕ ದೇಶವನ್ನು ಹಿಂದಿಕ್ಕಲು ಚೀನಾ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಜಪಾನ್‌ಗಿಂತ ವೇಗವಾಗಿ ಕೊರಿಯಾ ವಿಜ್ಞಾನ ಕ್ಷೇತ್ರದಲ್ಲಿ ಬೆಳೆಯುತ್ತಿದೆ. ಇನ್ನೂ 10-15 ವರ್ಷದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಭಾರತ ಚೀನಾಕ್ಕಿಂತ ಮುಂದೆ ಬಾರದಿದ್ದರೆ ಕಷ್ಟವಾಗಲಿದೆ ಎಂದು ಎಚ್ಚರಿಸಿದರು.

ವಿಜ್ಞಾನದ ರಾಜಧಾನಿ ಬೆಂಗಳೂರು
ಬೆಂಗಳೂರು ಐಟಿ ಬಿಟಿಯ ರಾಜಧಾನಿಯಲ್ಲ. ಅದು ವಿಜ್ಞಾನದ ರಾಜಧಾನಿ. ಆದರೆ ಬಂಡಾವಾಳ ಹಾಗೂ ವಿದೇಶಿ ಹೂಡಿಕೆ ಹೆಚ್ಚಾಗಲಿದೆ ಎಂಬ ಕಾರಣಕ್ಕೆ ಬೆಂಗಳೂರನ್ನು ಐಟಿ ರಾಜಧಾನಿ ಎಂದು ಪ್ರತಿಬಿಂಬಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂದಿನ ಪೋಷಕರು ಕೇವಲ ವೈದ್ಯಕೀಯ ಹಾಗೂ ಇಂಜಿನಿಯರಿಂಗ್‌ ವೃತ್ತಿಯೇ ಸರ್ವಶ್ರೇಷ್ಟವಾದುದು ಎಂದು ಭಾವಿಸಿದ್ದಾರೆ. ಒಂದೇ ವಿಷಯದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಹೆಚ್ಚಾದರೆ ಮುಂದೆ ನಿರುದ್ಯೋಗದ ಸಮಸ್ಯೆ ತಲೆದೂರಲಿದೆ. ಹೀಗಾಗಿ ಮಕ್ಕಳು ನೆಚ್ಚಿನ ವೃತ್ತಿ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಮನೆಯಂಗಳದಲ್ಲಿನ ಇಲ್ಲಿಯವರೆಗಿನ ಸಾಧಕರು ಹಾಗೂ ಇಲಾಖೆ ನಿರ್ದೇಶಕರನ್ನು ಗೌರವಿಸಲಾಯಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ, ನಿರ್ದೇಶಕ ವಿಶುಕುಮಾರ್‌ ಹಾಜರಿದ್ದರು.

ಮೂಢನಂಬಿಕೆ ಒಳ್ಳೆಯದಲ್ಲ
ನಂಬಿಕೆ ಹಾಗೂ ವಾಸ್ತುವಿನ ಹೆಸರಿನಲ್ಲಿ ವಿಧಾನಸೌಧದ ಬಾಗಿಲು ಒಡೆಯುವುದು ಹಾಗೂ ಬದಲಾವಣೆ ಮಾಡುವುದರ ಬಗ್ಗೆ ನಿಮ್ಮ ನಿಲುವೇನು ಎಂಬ ಪ್ರಶ್ನೆಗೆ, ದೇವರ ಬಗೆಗಿನ ನಂಬಿಕೆ ಮುಖ್ಯ. ಆದರೆ ಮೂಡನಂಬಿಕೆ ಒಳ್ಳೆಯದಲ್ಲ ಎಂದು ಸಿಎನ್‌ಆರ್‌ ರಾವ್‌ ತಿಳಿಸಿದರು.

ಗುಟ್ಟನ್ನು ಬಿಚ್ಚಿಟ್ಟರು
ವಿಜ್ಞಾನ ಕ್ಷೇತ್ರದಲ್ಲಿ ನಾನು ಇಷ್ಟೆಲ್ಲ ದುಡಿದರೂ ಭಾರತ ಯಾಕೆ ಮುಂದುವರೆಯುತ್ತಿಲ್ಲ. ಯುವ ಪೀಳಿಗೆ ಯಾಕೆ ಮೂಲ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಿಲ್ಲ ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ ಸಿ.ವಿ.ರಾಮನ್‌ ನನ್ನ ಬಳಿ ಚರ್ಚಿಸಿದ್ದರು. ಆಗ ನಾನು ವಿಜ್ಞಾನ ಕ್ಷೇತ್ರದಲ್ಲಿ ದುಡಿದು, ಮುಂದೆ ಒಳ್ಳೆಯ ವಿಜ್ಞಾನಿಯಾಗಬೇಕೆಂದು ದೃಢ ನಿರ್ಧಾರ ಮಾಡಿದೆ ಎಂದು ವಿಜ್ಞಾನಿಯಾದ ಗುಟ್ಟು ರಾವ್‌ ಬಿಚ್ಚಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next