Advertisement

ಭಾರತ್‌ ಜೋಡೋ ಯಾತ್ರೆ ಒಂದು ಝಲಕ್‌ ಇಲ್ಲಿದೆ…

08:43 PM Jan 29, 2023 | Team Udayavani |

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಳೆದ 5 ತಿಂಗಳ ಕಾಲ 12 ರಾಜ್ಯಗಳನ್ನು ದಾಟಿ 4 ಸಾವಿರ ಕಿ.ಮೀ.ಗೂ ಹೆಚ್ಚು ಕ್ರಮಿಸಿದ ಭಾರತ್‌ ಜೋಡೋ ಯಾತ್ರೆಯು ಭಾನುವಾರ ಶ್ರೀನಗರದ ಲಾಲ್‌ಚೌಕ್‌ನಲ್ಲಿ ಧ್ವಜಾರೋಹಣದೊಂದಿಗೆ ತೆರೆ ಕಂಡಿತು. ಯಾತ್ರೆಯುದ್ದಕ್ಕೂ ನಡೆದ ಪ್ರಮುಖ ಘಟನೆಗಳು, ವಿವಾದಗಳು, ಸಾವು-ನೋವು, ಅಚ್ಚರಿ, ಅಡ್ಡಿ-ಆತಂಕಗಳ ಒಂದು ಝಲಕ್‌ ಇಲ್ಲಿದೆ.

Advertisement

ದೇಣಿಗೆ ಜಗಳ
ಯಾತ್ರೆಗೆ ದೇಣಿಗೆ ಸಂಗ್ರಹ ಮಾಡುತ್ತಿರುವುದಾಗಿ ಹೇಳಿದ್ದ ಮೂವರು ಕಾಂಗ್ರೆಸ್‌ ಕಾರ್ಯಕರ್ತರು, ಕೇರಳದ ತರಕಾರಿ ಅಂಗಡಿ ಮಾಲೀಕನ ಬಳಿ 2 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು. ಮಾಲೀಕ 500 ರೂ. ನೀಡಿದ್ದಕ್ಕೆ ಆತನ ಮೇಲೆ ಹಲ್ಲೆ ನಡೆಸಿ, ಅಂಗಡಿಯಲ್ಲಿ ದಾಂದಲೆ ಎಬ್ಬಿಸಿದರು. ಸುದ್ದಿ ತಿಳಿಯುತ್ತಿದ್ದಂತೆ ಕಾಂಗ್ರೆಸ್‌ ಆ ಮೂವರನ್ನೂ ಅಮಾನತು ಮಾಡಿತು.

ಖಾಕಿ ಚಡ್ಡಿ
ಯಾತ್ರೆಯ ಆರಂಭಿಕ ದಿನಗಳಲ್ಲಿ ಕಾಂಗ್ರೆಸ್‌ “ಖಾಕಿ ಚಡ್ಡಿಯೊಂದಕ್ಕೆ ಬೆಂಕಿ ಹೊತ್ತಿಕೊಂಡಿರುವ ಫೋಟೋ’ವನ್ನು ಬಿಡುಗಡೆ ಮಾಡಿತ್ತು. ಜೋಡೋ ಯಾತ್ರೆಯಿಂದ ಆರೆಸ್ಸೆಸ್‌ಗೆ ಬಿಸಿ ತಟ್ಟಿದೆ ಎಂದು ಬಿಂಬಿಸುವ ಪ್ರಯತ್ನ ಇದಾಗಿತ್ತು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ, “ಕಾಂಗ್ರೆಸ್‌ ಹಿಂಸೆಗೆ ಪ್ರಚೋದನೆ ನೀಡುತ್ತಿದೆ’ ಎಂದು ಆರೋಪಿಸಿತು. ನಂತರ ಈ ಬೆಂಕಿ ತಣ್ಣಗಾಯಿತು.

ರಾಜಸ್ಥಾನದಲ್ಲಿ ಒಳಜಗಳ
ಯಾತ್ರೆಯು ರಾಜಸ್ಥಾನ ತಲುಪುವ ಮೊದಲೇ ಸಿಎಂ ಅಶೋಕ್‌ ಗೆಹ್ಲೋಟ್ ಮತ್ತು ಸಚಿನ್‌ ಪೈಲಟ್‌ ನಡುವಿನ ವಾಗ್ವಾದ ಜೋರಾಗಿಯೇ ನಡೆದಿತ್ತು. ಆದರೆ, ಯಾತ್ರೆಗೆ ಭಂಗವಾಗದಿರಲಿ ಎಂಬ ನಿಟ್ಟಿನಲ್ಲಿ ಉಭಯ ನಾಯಕರು ಯಾತ್ರೆ ರಾಜ್ಯದಿಂದ ಪಾಸ್‌ ಆಗುವವರೆಗೂ “ಒಗ್ಗಟ್ಟಿನ’ ಮಂತ್ರ ಜಪಿಸಿದ್ದು ಕಂಡುಬಂತು.

ಸಾವರ್ಕರ್‌ ವಿವಾದ
ಸಾರ್ವಕರ್‌ ಅವರು ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದಿದ್ದರು ಎಂಬ ರಾಹುಲ್‌ ಗಾಂಧಿ ಹೇಳಿಕೆ ಮಹಾರಾಷ್ಟ್ರದಲ್ಲಿ ಭಾರೀ ವಿವಾದಕ್ಕೆ ಕಾರಣವಾಯಿತು. ಕಾಂಗ್ರೆಸ್‌ ನಾಯಕನ ಈ ಹೇಳಿಕೆ ಮಿತ್ರಪಕ್ಷ ಶಿವಸೇನೆ(ಉದ್ಧವ್‌ ಬಣ)ಗೂ ಇರುಸು ಮುರುಸು ಉಂಟುಮಾಡಿತು.

Advertisement

ಚಳಿಗೇ ಜ್ವರ ಬರಿಸಿದ ರಾಹುಲ್‌
ಜೋಡೋ ಯಾತ್ರೆ ಹಿಮಾಚಲ ಪ್ರದೇಶ, ದೆಹಲಿ, ಜಮ್ಮು ಮತ್ತು ಕಾಶ್ಮೀರದಂಥ “ಕೊರೆಯುವ ಚಳಿ’ಯಿರುವ ರಾಜ್ಯಗಳಲ್ಲಿ ಸಂಚರಿಸಿದಾಗಲೂ ರಾಹುಲ್‌ ಮಾತ್ರ ಬಿಳಿ ಟಿಶರ್ಟ್‌ ಧರಿಸಿಯೇ ನಡೆದರು. ಎಲ್ಲಿಯೂ ಅವರು ಕೋಟ್‌, ಜರ್ಕಿನ್‌ ಹಾಕಿರಲಿಲ್ಲ. ಅಷ್ಟೊಂದು ಚಳಿಯ ನಡುವೆಯೂ ರಾಹುಲ್‌ರ ಈ ನಡಿಗೆ ಎಲ್ಲರನ್ನೂ ಅಚ್ಚರಿಗೆ ನೂಕಿತು.

ಗಡ್ಡದ ವಿಷ್ಯ
ಕೇವಲ ಟಿ-ಶರ್ಟ್‌ ಮಾತ್ರವಲ್ಲ ರಾಹುಲ್‌ ಗಡ್ಡ ಕೂಡ ಭಾರೀ ಸುದ್ದಿಯಾಯಿತು. ಗಡ್ಡ ಬಿಟ್ಟಿದ್ದ ಕಾಂಗ್ರೆಸ್‌ ನಾಯಕನನ್ನು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯವಾಡಿದರು. ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಅವರಂತೂ, ರಾಹುಲ್‌ರನ್ನು ಇರಾಕ್‌ ಸರ್ವಾಧಿಕಾರಿ ಸದ್ದಾಂ ಹುಸೇನ್‌ಗೆ ಹೋಲಿಸಿದರು.

ನಾಯಕರ ಸಾವು
ಪಂಜಾಬ್‌ನಲ್ಲಿ ರಾಹುಲ್‌ ಜತೆ ಹೆಜ್ಜೆ ಹಾಕುತ್ತಿದ್ದ ಕಾಂಗ್ರೆಸ್‌ ಸಂಸದ ಸಂತೋಖ್‌ ಸಿಂಗ್‌ ಚೌಧರಿ ಹೃದಯಾಘಾತದಿಂದ ನಿಧನರಾದರು. ಮಹಾರಾಷ್ಟ್ರದ ನಾಂದೇಡ್‌ನ‌ಲ್ಲಿ ಕಾಂಗ್ರೆಸ್‌ ಸೇವಾದಳದ ಪದಾಧಿಕಾರಿಯೊಬ್ಬರು ಕುಸಿದು ಬಿದ್ದು ಮೃತಪಟ್ಟರು.

ಭದ್ರತಾ ಲೋಪ
ಜಮ್ಮು ಮತ್ತು ಕಾಶ್ಮೀರದ ಬನಿಹಾಲ್‌ನಲ್ಲಿ ಏಕಾಏಕಿ ಪೊಲೀಸರ ಭದ್ರತೆಯನ್ನು ವಾಪಸ್‌ ಪಡೆದು, ಭದ್ರತಾ ಲೋಪ ಎಸಗಲಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿತು. ಕೊನೆಗೆ ದಿನದ ಮಟ್ಟಿಗೆ ಯಾತ್ರೆ ಸ್ಥಗಿತಗೊಳಿಸಿ, ಮಾರನೇ ದಿನ ಪುನಾರಂಭಗೊಂಡಿತು.

ಹುತಾತ್ಮರಿಗೆ ಪುಷ್ಪನಮನ
ಪುಲ್ವಾಮದ ಲೆಥೊರಾಗೆ ಯಾತ್ರೆ ತಲುಪುತ್ತಿದ್ದಂತೆ ರಾಹುಲ್‌ ಕೆಲಹೊತ್ತು ನಡಿಗೆಯನ್ನು ಸ್ಥಗಿತಗೊಳಿಸಿದರು. ನೇರವಾಗಿ 2019ರ ಪುಲ್ವಾಮಾ ಉಗ್ರರ ದಾಳಿ ನಡೆದ ಸ್ಥಳಕ್ಕೆ ತೆರಳಿದ ಅವರು, 40 ಮಂದಿ ಹುತಾತ್ಮರಿಗೆ ಪುಷ್ಪನಮನ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next