ಬೆಂಗಳೂರು:ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್ ಗೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ. ಮಧ್ಯಾಹ್ನದ ನಂತರ ಕೆಂಪೇಗೌಡ ಬಸ್ ನಿಲ್ದಾಣ ಸಹಜ ಸ್ಥಿತಿಯತ್ತ ಮರಳತೊಡಗಿದ್ದು, ಕೆಲವೆಡೆ ಬಿಎಂಟಿಸಿ ಹಾಗೂ ಖಾಸಗಿ ಬಸ್ ಗಳ ಬಸ್ ಸಂಚಾರ ಆರಂಭವಾಗಿದೆ. ಪ್ರಯಾಣಿಕರು ಕೂಡಾ ಕೆಂಪೇಗೌಡ ಬಸ್ ನಿಲ್ದಾಣದತ್ತ ಆಗಮಿಸಿತೊಡಗಿದ್ದಾರೆ.
ಏತನ್ಮಧ್ಯೆ ಬೆಂಗಳೂರಿನಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಅಷ್ಟೇ ಅಲ್ಲ ಆಟೋ, ಓಲಾ, ಉಬರ್ ಕಾರು ಚಾಲಕರು ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದಾಗಿ ಪ್ರಯಾಣಿಕರು ಆರೋಪಿಸಿದ್ದಾರೆ.
ಬೆಳಗ್ಗೆ 8ಗಂಟೆವರೆಗೆ ಮೆಟ್ರೋ ಸಂಚಾರ ಇದ್ದ ಪರಿಣಾಮ ಜನರು ಮುಗಿಬಿದ್ದಿದ್ದರು. ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಮೆಜೆಸ್ಟಿಕ್ ಬಿಕೋ ಎನ್ನುತ್ತಿತ್ತು. ಮೆಜೆಸ್ಟಿಕ್ ನ ಇಂದಿರಾ ಕ್ಯಾಂಟೀನ್ ತೆರೆದಿದ್ದರಿಂದ ಜನರು ತಿಂಡಿಗಾಗಿ ಮುಗಿಬಿದ್ದಿದ್ದರು ಎಂದು ವರದಿ ತಿಳಿಸಿದೆ.
ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಕೆಲವೆಡೆ ಟಯರ್ ಗೆ ಬೆಂಕಿ ಹಚ್ಚಿ ಪ್ರತಿಭಟಿಸಲು ಯತ್ನಿಸಿದಾಗ ಪೊಲೀಸರು ಅಡ್ಡಿಪಡಿಸಿದ್ದರು. ಇದರಿಂದ ವಾಗ್ವಾದ ನಡೆಯಿತು. ಮೆಟ್ರೋ ಸ್ಟೇಶನ್ ಗೂ ನುಗ್ಗಿದ ಕಾರ್ಯಕರ್ತರು ಮೆಟ್ರೋ ಸಂಚಾರ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಬಿಎಂಟಿಸಿ ಬಸ್ ಸಂಚಾರ ಆರಂಭ:
ಬೆಂಗಳೂರಿನ ಕೆಲವೆಡೆ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿದೆ. ಬಸ್ ನಿಲ್ದಾಣದ ಕಡೆ ಪ್ರಯಾಣಿಕರು ಜಮಾಯಿಸತೊಡಗಿದ್ದು, ಇದೀಗ ಬಸ್ ನಿಲ್ದಾಣ ಸಹಜ ಸ್ಥಿತಿಯತ್ತ ಮರಳತೊಡಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಮೆಜೆಸ್ಟಿಕ್ ನಲ್ಲಿ ಸ್ಕೇಟಿಂಗ್ ಆಡಿದ ಮಕ್ಕಳು!
ಮೆಜೆಸ್ಟಿಕ್ ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದರೆ, ಮತ್ತೊಂದೆಡೆ ಇಬ್ಬರು ಮಕ್ಕಳು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸ್ಕೇಟಿಂಗ್ ಆಡುವ ಮೂಲಕ ಗಮನ ಸೆಳೆದರು.