Advertisement

ಪಬ್ಬಜ್ಜ ಕಾರ್ಯಕ್ರಮ: ವಾಡಿಯ ಬೌದ್ಧ ತಾಣದಲ್ಲಿ ಪೊರಕೆ ಹಿಡಿದ ಭಂತೇಜಿಗಳು

09:11 PM Dec 04, 2022 | Team Udayavani |

ವಾಡಿ: ಬುದ್ಧನ ಶಾಂತಿಯ ಚಿಂತನೆಗಳನ್ನು ಗ್ರಾಮೀಣ ಜನರಿಗೆ ತಿಳಿಸಲು ಪಬ್ಬಜ್ಜ (ಪಿಂಡಪಾತ) ಕಾರ್ಯಕ್ರಮ ಏರ್ಪಡಿಸಿ ಸನ್ನತಿಗೆ ಆಗಮಿಸಿರುವ ಹತ್ತಾರು ಜನ ಬೌದ್ಧ ಭಿಕ್ಷುಗಳು, ಪೊರಕೆ ಸಲಿಕೆಗಳನ್ನು ಹಿಡಿದು ಬೌದ್ಧ ತಾಣದ ಶುಚಿತ್ವಕ್ಕೆ ನಿಂತ ಪ್ರಸಂಗ ನಡೆದಿದೆ.

Advertisement

ಮೌರ್ಯ ಸಾಮ್ರಾಜ್ಯದ ದೊರೆ ಸಾಮ್ರಾಟ್ ಅಶೋಕ ಚಕ್ರವರ್ತಿಯ ಕ್ರಿ.ಪೂ. ೩ನೇ ಶತಮಾನದ ಇತಿಹಾಸ ಹೇಳುತ್ತಿರುವ ಬೌದ್ಧ ಶಿಲಾ ಶಾಸನಗಳ ತಾಣವಾದ ಚಿತ್ತಾಪುರ ತಾಲೂಕಿನ ಸನ್ನತಿ ಬುದ್ದ ವಿಹಾರದ ಸುತ್ತಲೂ ಮುಳ್ಳುಕಂಟಿ ಬೆಳೆದು ಕಲ್ಲುಗಳ ರಾಶಿ ಹರಡಿದ್ದ ದುಸ್ಥಿತಿ ಕಂಡು ಮರುಗಿದ ಭಂತೇಜಿಗಳು ಸ್ವತಃ ಸ್ವಚ್ಚತೆಗೆ ಮುಂದಾದರು.

ಚಾರಿಕಾ ಭಿಕ್ಷಾ ಪಾತ್ರೆಗಳನ್ನು ಕೆಳಗಿಟ್ಟು ಮುಳ್ಳಿನ ಗಿಡಗಳನ್ನು ಕತ್ತರಿಸಿ ಗುಡ್ಡೆಹಾಕಿದರು. ಘನತ್ಯಾಜ್ಯ, ಕಸ, ಕಲ್ಲು, ಸೆಗಣಿ ಸಂಗ್ರಹಿಸಿ ವಿಲೇವಾರಿ ಮಾಡುವ ಮೂಲಕ ಗ್ರಾಮೀಣ ಜನರ ಗಮನ ಸೆಳೆದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ 66 ನೇ ಪರಿನಿರ್ವಾಣ ನಿಮಿತ್ತ ಅಂತಾರಾಷ್ಟ್ರೀಯ ಬೌದ್ಧ ಯುವ ಸಂಘಟನೆ ಸನ್ನತಿಯ ಬುದ್ಧ ವಿಹಾರದಲ್ಲಿ ಹತ್ತು ದಿನಗಳ ಪಬ್ಬಜ್ಜ ಕಾರ್ಯಕ್ರಮ ಹಾಗೂ ಹಳ್ಳಿಗಳಲ್ಲಿ ಧಮ್ಮ ಸಂಸ್ಕೃತಿಯ ಚಾರಿಕಾ ಅಭಿಯಾನ ಆಯೋಜಿಸಿದೆ. ವಿಹಾರದಲ್ಲಿ ಆಶ್ರಯ ಪಡೆದು ಧಮ್ಮ ಪ್ರಾರ್ಥನೆ, ಧ್ಯಾನ, ಉಪನ್ಯಾಸ ನೀಡುತ್ತಲೇ ವಿಹಾರದ ಮುಂದೆ ಪ್ರತಿಷ್ಠಾಪಿಸಲಾದ ಸಾಮ್ರಾಟ್ ಅಶೋಕನ ಪ್ರತಿಮೆ ಮತ್ತು ಅಶೋಕ ಸ್ತಂಭದ ಜಾಗದ ಶುಚಿತ್ವಕ್ಕೆ ಆಧ್ಯತೆ ನೀಡಿ ಸ್ವಚ್ಚತೆಯ ಮಹತ್ವ ಸಾರಿದರು.

ಸಾವಿರಾರು ಬೌದ್ಧ ಶಿಲೆಗಳು, ಬುದ್ಧನ ಮೂರ್ತಿಗಳು, ಬುದ್ಧವಿಹಾರ ಸಮುಚ್ಚಯ, ಪಾಲಿ ಭಾಷೆಯ ಶಾಸನ, ಅಶೋಕ ಚಕ್ರವರ್ತಿಯ ಮೂರ್ತಿ, ನೆಲದಲ್ಲಿ ಹೂತ ಇಟ್ಟಿಗೆ ಮನೆಗಳು ಸೇರಿದಂತೆ ಇನ್ನಿತರ ಬೌದ್ಧ ಕುರುಹುಗಳು ನೆಲದಾಳದಲ್ಲಿ ದೊರೆತಿವೆ. ಆ ಮೂಲಕ ಪ್ರಪಂಚದ ಗಮನ ಸೆಳೆದಿರುವ ಸನ್ನತಿಯ ಪರಿಸರ ಅಭಿವೃದ್ಧಿ ಕಾಣದೆ ಮುಳ್ಳುಕಂಟಿಗಳ ತಣವಾಗಿದೆ ಎಂದು ಬೇಸರ ಹೊರಹಾಕಿದರು. ಮುಳ್ಳು ಬೆಳೆದ ಜಾಗದಲ್ಲಿ ಧಮ್ಮ ಶಾಂತಿಯ ಹೂಗಳನ್ನು ಬೆಳೆಯಲು ಬುದ್ಧನ ಅನುಯಾಯಿಗಳು ಮುಂದೆ ಬರಬೇಕು ಎಂದು ಭಂತೇಜಿಗಳು ಗ್ರಾಮೀಣ ಜನರಲ್ಲಿ ಮನವಿ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next