ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ಅವರು “ಆಡುವ ಗೊಂಬೆ’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿರುವ ಸುದ್ದಿ ಎಲ್ಲರಿಗೂ ಗೊತ್ತೇ ಇದೆ. ಇದೀಗ ಅವರ ನಿರ್ದೇಶನದ 50ನೇ ಚಿತ್ರ ಹಿರೇಮಗಳೂರಿನಲ್ಲಿ ಶುರುವಾಗಿದ್ದು, ಚಿತ್ರದ ಮೊದಲ ದೃಶ್ಯಕ್ಕೆ ಹಿರಿಯ ನಟಿ ಗಾಯತ್ರಿ ಅನಂತ್ ನಾಗ್ ಕ್ಲಾಪ್ ಮಾಡಿದ್ದಾರೆ.
“ಆಡುವ ಗೊಂಬೆ’ ಚಿತ್ರದ ಮುಹೂರ್ತವು ಇತ್ತೀಚೆಗೆ ಹಿರೇಮಗಳೂರಿನ ರಾಮದೇವರ ದೇವಸ್ಥಾನದಲ್ಲಿ ನೆರವೇರಿದೆ. ಕನ್ನಡ ಪುರೋಹಿತರಾದ ಹಿರೇಮಗಳೂರು ಕಣ್ಣನ್ ಅವರ ಮಾರ್ಗದರ್ಶನದಲ್ಲಿ ಚಿತ್ರದ ಮುಹೂರ್ತವಾಗಿದೆ.
ಅನಂತ್ ನಾಗ್, ಸಂಚಾರಿ ವಿಜಯ್ ಹಾಗೂ ಸುಧಾ ಬೆಳವಾಡಿ ಅಭಿನಯದ ಮೊದಲ ದೃಶ್ಯಕ್ಕೆ ಗಾಯತ್ರಿ ಅನಂತ್ ನಾಗ್ ಅವರು ಆರಂಭ ಫಲಕ ತೋರಿದರೆ, ಚಾಮುಂಡೇಶ್ವರಿ ಸ್ಟುಡಿಯೋದ ರಾಜಲಕ್ಷ್ಮೀ ಅವರು ಕ್ಯಾಮೆರಾ ಚಾಲನೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಹಿರೇಮಗಳೂರು ಕಣ್ಣನ್ ಅವರು ಪುರೋಹಿತರಾಗಿಯೇ ಕಾಣಿಸಿಕೊಂಡಿದ್ದಾರೆ. ಕಸ್ತೂರಿ ನಿವಾಸ ಕ್ರಿಯೃಷನ್ಸ್ ಲಾಂಛನದಲ್ಲಿ ಶಂಕರಪ್ಪ ಹಾಗೂ ವೇಣುಗೋಪಾಲ್ ಅವರು ಈ ಚಿತ್ರವನ್ನು ನಿರ್ಮಿಸಿದ್ದು, ಹಿರಿಯ ನಿರ್ದೇಶಕ ಭಗವಾನ್ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸಿದ್ದಾರೆ.
ಅನಂತ್ ನಾಗ್, ಸಂಚಾರಿ ವಿಜಯ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಚಿತ್ರದಲ್ಲಿ ಸುಧಾ ಬೆಳವಾಡಿ, ನಿರೋಷಾ, ರಿಶಿತಾ ಮಲ್ನಾಡ್, ಸೀಮಾಗೌಡ ಮುಂತಾದವರು ನಟಿಸುತ್ತಿದ್ದು, ಚಿತ್ರಕ್ಕೆ ಹೇಮಂತ್ ಕುಮಾರ್ ಅವರ ಸಂಗೀತ ಮತ್ತು ಗಣೇಶ್ ಅವರ ಛಾಯಾಗ್ರಹಣವಿದೆ.