ಹಿರೇಕೆರೂರ: ಮೈದುಂಬಿ ಹರಿಯುತ್ತಿರುವ ಪಟ್ಟಣದ ದುರ್ಗಾದೇವಿ ಕೆರೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ ಹಾಗೂ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಬಾಗಿನ ಅರ್ಪಿಸಿದರು. ಪಟ್ಟಣದ ಅಧಿದೇವತೆ ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ, ದುರ್ಗಾದೇವಿ ಕೆರೆಗೂ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ಈ ವೇಳೆ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ, ರೈತರ ಜೀವನಾಡಿಯಾಗಿರುವ ಕೆರೆ-ಕಟ್ಟೆಗಳು ತುಂಬುವುದರಿಂದ ರೈತಾಪಿ ಜನತೆ ನೆಮ್ಮದಿಯಿಂದಿರಲು ಸಾಧ್ಯವಾಗುತ್ತದೆ. ಪಟ್ಟಣದ ದುರ್ಗಾದೇವಿ ಕೆರೆ ಭರ್ತಿಯಾಗಿರುವುದರಿಂದ ಈ ಭಾಗದ ಸುತ್ತಮುತ್ತಲಿನ ಹಲವಾರು ಹಳ್ಳಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ ಜನ-ಜಾನುವಾರುಗಳಿಗೆ ಅನಕೂಲವಾಗಲಿದೆ. ಇದರಿಂದ ರೈತರ ಬದುಕು ಹಸನವಾಗಲಿದೆ ಎಂದರು.
ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಮಾತನಾಡಿ, ಐತಿಹಾಸಿಕ ದುರ್ಗಾದೇವಿ ಕೆರೆ ಮಳೆಯಿಂದ ತನ್ನ ಒಡಲನ್ನು ತುಂಬಿಕೊಂಡಿದೆ. ಇದೇ ರೀತಿ, ಮಳೆ-ಬೆಳೆ ನೀಡಿ ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವಂತೆ ದುರ್ಗಾದೇವಿಯಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ದುರ್ಗಾದೇವಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಜಗದೀಶ ತಂಬಾಕದ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ಪಪಂ ಅಧ್ಯಕ್ಷ ಕಂಠಾಧರ ಅಂಗಡಿ, ಉಪಾಧ್ಯಕ್ಷೆ ಕುಸುಮಾ ಬಣಕಾರ, ಸದಸ್ಯರಾದ ಹರೀಶ ಕಲಾಲ, ಅಲ್ತಾಫ್‌ಖಾನ ಪಠಾಣ, ಹನುಮಂತಪ್ಪ ಕುರುಬರ, ರಮೇಶ ಕೋಡಿಹಳ್ಳಿ, ಬಸವರಾಜ ಕಟ್ಟಿಮನಿ, ವಿಜಯಶ್ರೀ ಬಂಗೇರ, ಸುಧಾ ಚಿಂದಿ, ರಜಿಯಾ ಅಸದಿ, ಶಿವಕುಮಾರ ತಿಪ್ಪಶೆಟ್ಟಿ, ರವಿಶಂಕರ ಬಾಳಿಕಾಯಿ, ಎನ್.ಎಸ್.ಚಿಕ್ಕನರಗುಂದಮಠ, ರಾಮು
ಮುರಡೇಶ್ವರ, ಸತೀಶ ಕೋರಿಗೌಡ್ರ, ಮಂಜು ತಂಬಾಕದ, ಈರಣ್ಣ ಚಿಟ್ಟೂರ ಇತರರಿದ್ದರು.