Advertisement

Bhagavad Gita ಮತೀಯವಲ್ಲ, ಸನ್ಮತಿಯ ಗ್ರಂಥ: ಪುತ್ತಿಗೆ ಸುಗುಣೇಂದ್ರತೀರ್ಥ ಶ್ರೀಪಾದರು

09:53 AM Dec 29, 2023 | Team Udayavani |

ಮಣಿಪಾಲ: ಭಗವದ್ಗೀತೆ ಮತೀಯ ಗ್ರಂಥವಲ್ಲ, ಸನ್ಮತಿಯ ಗ್ರಂಥ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ವೈಯಕ್ತಿಕ, ಕೌಟುಂಬಿಕ, ವ್ಯವಹಾರಿಕ ಹೀಗೆ ಎಲ್ಲ ರೀತಿಯ ಸಮಸ್ಯೆಗಳಿಗೂ ಗೀತೆಯ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಗೀತೆಯನ್ನು ನಿತ್ಯವೂ ಪಠಿಸುವುದರಿಂದ ಮನಸ್ಸಿಗೆ ಏಕಾಗ್ರತೆ ಹಾಗೂ ಶಾಂತಿ ಲಭಿಸಲಿದೆ ಎಂದು ಭಾವೀ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನುಡಿದರು.

Advertisement

ಮಣಿಪಾಲದ ಗ್ರಾಮ ಸೇವಾ ಪ್ರತಿಷ್ಠಾನದಿಂದ ಹೊರತಂದಿರುವ “ಶ್ರೀ ಮದ್ಭಗವದ್ಗೀತಾ’ ಪುಸ್ತಕವನ್ನು ಮಣಿಪಾಲದ ಗೀತಾಮಂದಿರದಲ್ಲಿ ಗುರುವಾರ ಬಿಡುಗಡೆಗೊಳಿಸಿ ಅವರು ಆಶೀರ್ವಚನ ನೀಡಿದರು.

ಮಣಿಪಾಲದ ಯಶಸ್ಸಿನ ಮೂಲ ಗೀತಾಮಂದಿರವಾಗಿದೆ. ಇಲ್ಲಿನ ಮಹಾನ್‌ ಸಾಧಕರ ಹಿಂದೆ ಭಗವದ್ಗೀತೆಯ ಸ್ಫೂರ್ತಿ ಇದೆ. ಉಡುಪಿಯ ಗೀತಾಮಂದಿರಕ್ಕೂ ಇದುವೇ ಪ್ರೇರಣೆಯಾಗಿದೆ. ಜೀವನದಲ್ಲಿ ಸಾಧನೆ ಮಾಡಲು ಭಗವದ್ಗೀತೆಯ ಸಂದೇಶಗಳಿಂದ ಸಾಧ್ಯವಿದೆ. ಇದನ್ನು ಪಾಲಿಸಿದರೆ ಮಹಾತ್ಮರಾಗಬಹುದು. ಮನೋವೈದ್ಯರು, ಎಂಎನ್‌ಸಿ ಕಂಪೆನಿ ಸಿಇಒಗಳು ಗೀತೆಯ ಸಾರವನ್ನು ಪಾಲಿಸುತ್ತಾರೆ. ಏಕಾಗ್ರತೆ, ಸಮರ್ಪಣಾಭಾವದಿಂದ ಕೆಲಸಕ್ಕೆ ತಕ್ಕ ಪ್ರತಿಫ‌ಲ ಕಂಡುಕೊಳ್ಳಲು ಸಾಧ್ಯವಿದೆ. ಭಗವದ್ಗೀತೆಯನ್ನು ಆಧ್ಯಾತ್ಮಿಕ ರೂಪದಲ್ಲಿ ಸಮರ್ಥನಿಯವಾಗಿ ಅಧ್ಯಯನ ಮಾಡಿದರೆ ಸಾಧನೆ ಮಾಡಲು ಸಾಧ್ಯವಿದೆ. ಗೀತೆಯ ಸಂದೇಶವನ್ನು ಪರಿಪಾಲನೆ ಮಾಡುವ ಜತೆಗೆ ನಮ್ಮಲ್ಲಿರುವ ಅಹಂಕಾರವನ್ನು ಕಡಿಮೆ ಮಾಡಿದರೆ ಮನಃಶಾಂತಿ ಸಿಗಲಿದೆ. ಇದರಿಂದ ಒತ್ತಡ ಕಡಿಮೆಯಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ ಎಂದರು.

ಜಗತ್ತನ್ನು ಶ್ರೀಕೃಷ್ಣ ಮುನ್ನಡೆಸುತ್ತಿದ್ದಾನೆ. ಎಲ್ಲವೂ ನಾನೇ ಎಂಬ ಭಾವನೆಯನ್ನು ತ್ಯಜಿಸಿ ಎಲ್ಲವೂ ದೇವರದ್ದು ಎಂಬ ಭಾವನೆ ಹೊಂದಬೇಕು. ಅನವಶ್ಯಕವಾಗಿ ಯಾವುದೇ ವಿಚಾರಕ್ಕೂ ಒತ್ತಡಕ್ಕೆ ಒಳಗಾಗಬಾರದು. ಆಗುವುದೆಲ್ಲವನ್ನೂ ಸಂತೋಷದಿಂದ ಸ್ವೀಕರಿಸಬೇಕು. ದೇವರ ಇಚ್ಛೆಗೆ ವಿರುದ್ಧವಾಗಿ ಏನನ್ನೂ ಮಾಡಬಾರದು. ಇದು ಅಶಾಂತಿಗೂ ಕಾರಣವಾಗಬಹುದು ಎಂದರು.

Advertisement

ತಮ್ಮ ಪರ್ಯಾಯ ಅವಧಿಯಲ್ಲಿ ಭಗವದ್ಗೀತೆಯನ್ನು ಎಲ್ಲ ಭಾಷೆಗೆ ಅನುವಾದಿಸುವ, ಉಡುಪಿ ಕಲ್ಸಂಕದಲ್ಲಿ ಮಹಾದ್ವಾರ ನಿರ್ಮಿಸುವ, ಗೀತೆಯ ಕುರಿತು ಅಂತಾರಾಷ್ಟ್ರೀಯ ಸ್ತರದ ಸಮ್ಮೇಳನವನ್ನು ಆಯೋಜಿಸುವ ಗುರಿಯನ್ನು ಇರಿಸಿಕೊಳ್ಳಲಾಗಿದೆ ಎಂದು ಪುತ್ತಿಗೆ ಶ್ರೀಪಾದರು ತಿಳಿಸಿದರು.

ಭಗವದ್ಗೀತೆ ಜಿಪಿಎಸ್‌ನಂತೆ
ಭಗವದ್ಗೀತೆಯನ್ನು ಸರ್ವಸ್ವ ಎಂದು ತಿಳಿದುಕೊಳ್ಳಬೇಕು. ಇದು ಜೀವನ ನಿರ್ವಹಣೆಯ ಮಾರ್ಗದರ್ಶಕವಾಗಿದೆ. ಇದನ್ನು ಎಲ್ಲರೂ ಸಮರ್ಪಕವಾಗಿ ಬಳಸಿಕೊಂಡರೆ ನಿರ್ದಿಷ್ಟ ಗುರಿ ತಲುಪಲು ಸಾಧ್ಯವಿದೆ. ಇದುವೇ ಜಗತ್ತಿನ ಶ್ರೇಷ್ಠ ಮಾರ್ಗದರ್ಶಕವಾಗಿದೆ. ಇದರಿಂದ ಮಹಾತ್ಮರಾಗಲು ಸಾಧ್ಯವಿದೆ. ಮಣಿಪಾಲ ಇದಕ್ಕೆ ಸ್ಫೂರ್ತಿಯಾಗಿದೆ. ಶ್ರೀಕೃಷ್ಣನಿಗೆ ಮಣಿಪಾಲವೇ ಗೋವರ್ಧನ ಪರ್ವತವಿದ್ದಂತೆ. ಅದನ್ನು ಆತ ಎತ್ತಿ ಹಿಡಿದಿದ್ದಾನೆ ಎಂದು ಶ್ರೀಪಾದರು ನುಡಿದರು.

ಭಗವದ್ಗೀತೆ ಪ್ರಚಾರ ಉದ್ದೇಶ
ಕೋಟಿಗೀತಾ ಲೇಖನದ ಮೂಲಕ ಭಗವದ್ಗೀತೆ ಪ್ರಚಾರಪಡಿಸುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ಲಕ್ಷಾಂತರ ಮಂದಿ ಭಗವದ್ಗೀತೆ ಬರೆದಿದ್ದಾರೆ. ಜಾತಿ-ಮತ-ಭೇದವಿಲ್ಲದೆ ಎಲ್ಲರೂ ಇದರಲ್ಲಿ ಭಾಗವಹಿಸಬಹುದು. ಇದನ್ನು ಬರೆಯುವವರು ಯಾವುದಾದರೊಂದು ದುಶ್ಚಟ ಬಿಡುವ ಜತೆಗೆ ಜೀವನದಲ್ಲಿ ಹೊಸ ನಿಯಮವನ್ನು ಸ್ವೀಕರಿಸುವ ಸಂಕಲ್ಪ ಮಾಡಿಕೊಳ್ಳಬೇಕು ಶ್ರೀಪಾದರು ಹೇಳಿದರು.

ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ| ಸಂಧ್ಯಾ ಎಸ್‌.ಪೈ ಅವರು ಪ್ರಸ್ತಾವನೆಗೈದು, ಬೋಳು ಗುಡ್ಡದಂತಿದ್ದ ಮಣಿಪಾಲವಿಂದು ವಿಶ್ವವಿಖ್ಯಾತಿಯಾಗಿದ್ದರೆ ಅದಕ್ಕೆ ಯುಗಪುರುಷ ಉಪೇಂದ್ರ ಪೈ ಅವರ ಕಾರ್ಯಸಾಧನೆ ಕಾರಣವಾಗಿದೆ. ಅವರು ಭಗವದ್ಗೀತೆಯನ್ನು ಓದುವ ಜತೆಗೆ ಮನನ ಮಾಡುತ್ತಿದ್ದರು ಮತ್ತು ಅದನ್ನು ಹೃದಯದಲ್ಲಿಟ್ಟುಕೊಂಡಿದ್ದರು. ದೈವಸಂಕಲ್ಪವೂ ಅವರಿಗಿತ್ತು. ಜಾಗತಿಕವಾಗಿ ಭಗವದ್ಗೀತೆಯನ್ನು ಪ್ರಚಾರ ಮಾಡಲು ಜೀವನವನ್ನು ಮುಡಿಪಾಗಿಟ್ಟುಕೊಂಡಿರುವ ಪುತ್ತಿಗೆ ಶ್ರೀಪಾದರು ನಮ್ಮ ನಡುವಿನ ಯುಗಪುರುಷರು ಎಂದು ಹೇಳಿದರು.

ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿ.ನ ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಸತೀಶ್‌ ಯು.ಪೈ, ಡಾ| ಟಿಎಂಎ ಪೈ ಪ್ರತಿಷ್ಠಾನದ ಅಧ್ಯಕ್ಷ ಟಿ. ಅಶೋಕ್‌ ಪೈ, ಗಾಯತ್ರಿ ಪೈ, ಮಣಿಪಾಲ ಟೆಕ್ನಾಲಜಿಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಗೌತಮ್‌ ಪೈ, ವನಿತಾ ಪೈ, ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿಮಿಟೆಡ್‌ನ‌ ಆಡಳಿತ ನಿರ್ದೇಶಕ ಹಾಗೂ ಸಿಇಒ ವಿನೋದ್‌ ಕುಮಾರ್‌, ಮಣಿಪಾಲ ಟೆಕ್ನಾಲಜಿಸ್‌ ಲಿಮಿಟೆಡ್‌ನ‌ ಆಡಳಿತ ನಿರ್ದೇಶಕ ಹಾಗೂ ಸಿಇಓ ಅಭಯ್‌ ಗುಪ್ತೆ , ಮಣಿಪಾಲ ಸಮೂಹದ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಪ್ರಮೋದ್‌ ಫೆರ್ನಾಂಡಿಸ್‌, ಗೀತಾ ಮಂದಿರದ ಅರ್ಚಕ ವೇ| ಮೂ| ಶಿವಾನಂದ ಭಟ್‌ ಉಪಸ್ಥಿತರಿದ್ದರು. ಉದಯವಾಣಿಯ ಹಿರಿಯ ಸಹಾಯಕ ಸಂಪಾದಕ ಕುಮಾರಸ್ವಾಮಿ ಸ್ವಾಗತಿಸಿ ತರಂಗ ವಾರಪತ್ರಿಕೆಯ ಸಂಪಾದಕಿ ಡಾ| ಯು.ಬಿ.ರಾಜಲಕ್ಷ್ಮೀ ವಂದಿಸಿದರು. ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ.,ನ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಮ್ಯಾನೇಜರ್‌ ಉಷಾರಾಣಿ ಕಾಮತ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next