ಬಾಗಲಕೋಟೆ: ಮಲೆನಾಡ ಸಿರಿಯಲ್ಲಿ ಮಾತ್ರ ಬೆಳೆಯಬಹುದು ಎಂಬ ವಿರಳ ಬೆಳೆಯನ್ನು ಇಲ್ಲೊಬ್ಬ ಪ್ರಗತಿಪರ ರೈತ-ಅಧಿಕಾರಿ ಬಯಲು ಸೀಮೆಯಲ್ಲೂ ಬೆಳೆದು ಸ್ವತಃ ಕೃಷಿ ಇಲಾಖೆ ಅಧಿಕಾರಿಗಳ ಹುಬ್ಬೇರಿಸುವಂತೆ ಮಾಡಿದ್ದಾರೆ. ಹೌದು, ಸರ್ಕಾರಿ ದಿನಗಳಂದು ರೈತರಿಗಾಗಿ ಕೆಲಸ. ರಜೆ ದಿನಗಳು ಹಾಗೂ ನಿತ್ಯ ಬೆಳಗ್ಗೆ-ಸಂಜೆ ಸ್ವತಃ ರೈತನಾಗಿ ದುಡಿಯುವ ಹಂಬಲ. ಮಲೆನಾಡ ಸಿರಿಯಲ್ಲಿ ಬೆಳೆಯುವ ಬೆಳೆಯನ್ನು ಬಯಲು ಸೀಮೆಯಲ್ಲಿ ಬೆಳೆದು ಕೈತುಂಬ ಸಂಪಾದನೆ ಮಾಡುತ್ತಿದ್ದಾರೆ. ಜತೆಗೆ ಸುತ್ತಮುತ್ತಲ ರೈತರಿಗೆ ಆ ಬೆಳೆ ಬೆಳೆಯುವ ಪದ್ಧತಿಯೂ ಹೇಳಿಕೊಡುತ್ತಿದ್ದಾರೆ.
Advertisement
ರೈತನಾದ ಅಧಿಕಾರಿ: ಬಾದಾಮಿ ತಾಲೂಕಿನ ಕುಟಕನಕೇರಿ ಗ್ರಾಮದ ಗೋವಿಂದಪ್ಪ ಹುಲ್ಪಪ್ಪ ಹುಲ್ಲನವರ ಹಿರೇಮುಚ್ಚಳಗುಡ್ಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿ ಕೂಡ. ಪಿಕೆಪಿಎಸ್‌ನಲ್ಲಿ ರೈತರ ಸಮಸ್ಯೆ, ಬೆಳೆಯ ಕುರಿತು ನಿತ್ಯ ಕೇಳುತ್ತಿದ್ದ ಇವರು, ತಾವೂ ಕೃಷಿ ಮಾಡಬೇಕು. ಅದು ಇತರರಿಗೆ ಮಾದರಿಯಾಗಬೇಕೆಂಬ ಸಂಕಲ್ಪದೊಂದಿಗೆ ಆರಂಭಿಸಿದ ಕೃಷಿ ಅವರ ಕೈ ಹಿಡಿದಿದೆ. ಅಧಿಕಾರಿಯಾಗಿದ್ದ ಇವರು, ಈಗ ರೈತರೂ ಆಗಿದ್ದಾರೆ. ತಮ್ಮ ಪೂರ್ವಜರು, ಕೆಂದೂರ ಗ್ರಾಮದಲ್ಲಿ ಹೊಂದಿರುವ 5 ಎಕರೆ 12 ಗುಂಟೆ ಭೂಮಿಯಲ್ಲಿ ಮೊದಲು ಮಲೆನಾಡ ಬೆಳೆ ಎಂದೇ ಕರೆಸಿಕೊಳ್ಳುವ ಶುಂಠಿ (ಅಲ್ಲಾ) ಬೆಳೆಯುತ್ತಿದ್ದಾರೆ. ಮೊದಲಿಗೆ 1 ಎಕರೆಯಲ್ಲಿ ಮಾತ್ರ ಶುಂಠಿ ಬೆಳೆದಿದ್ದ ಗೋವಿಂದಪ್ಪ, ಅದಕ್ಕಾಗಿ ಸುಮಾರು 80 ಸಾವಿರ ಖರ್ಚು ಮಾಡಿದ್ದರು.
Related Articles
Advertisement
ಅತ್ಯಂತ ಕಡಿಮೆ ನಿರ್ವಹಣೆ, ಕಡಿಮೆ ನೀರು ಹಾಗೂ ತಿಪ್ಪೆ ಗೊಬ್ಬರದ ಮೂಲಕ ಶುಂಠಿ ಬೆಳೆದು, ಬಯಲು ಸೀಮೆಯಲ್ಲೇ ಮಲೆನಾಡ ಬೆಳೆ ಬೆಳೆಯಬಹುದು ಎಂಬುದನ್ನು ತೋರಿಸಿದ್ದಾರೆ.
ಶ್ರಮಪಟ್ಟು ದುಡಿಯಬೇಕು ಈಗಿನ ರೈತರು ಶ್ರಮಪಟ್ಟು ದುಡಿದರೆ ಯಾವ ಬೆಳೆಯೂ ಕೈಕೊಡಲ್ಲ. ತಮ್ಮ ಬ್ಯಾಂಕ್ ಖಾತೆಗೆ ಬಂದ 100 ರೂ. ಚೆಕ್ ಮಾಡಲು ಹೋಗಿ, 200 ರೂ. ಖರ್ಚು ಮಾಡುವ ಪದ್ಧತಿ ರೈತರಲ್ಲಿದೆ. ಇದು ಬದಲಾಗಿ, ನಿತ್ಯ ಹೊಲದಲ್ಲಿ ಶ್ರಮಪಟ್ಟು ದುಡಿದರೆ ಕೈ ತುಂಬ ಸಂಪಾದನೆ ಮಾಡಬಹುದು. ಪಾರಂಪರಿಕ ಕೃಷಿ ಬಿಟ್ಟು, ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು. ನಮ್ಮ ಸ್ವಂತ 5 ಎಕರೆ ಹಾಗೂ ಲಾವಣಿ ಮಾಡಿದ 5 ಎಕರೆ ಸೇರಿ ಒಟ್ಟು 10 ಎಕರೆಯಲ್ಲಿ 6 ಎಕರೆ ಶುಂಠಿ, 2 ಎಕರೆ ಮೆಕ್ಕೆಜೋಳ, 20 ಗುಂಟೆಯಲ್ಲಿ 250 ಮಾಗಣಿ ಗಿಡ, 50 ಪೇರಲ, 100 ತೆಂಗು, ತರಕಾರಿ, ತೊಗರಿ, ಈರುಳ್ಳಿ ಬೆಳೆದಿದ್ದೇನೆ. ಒಂದು ಎಕರೆ ಶುಂಠಿಯಿಂದ 4.80 ಲಕ್ಷ ಪಡೆದಿದ್ದು, ಅದರಲ್ಲಿ ಹಾಕಿದ್ದ ಮೆಣಸಿನಕಾಯಿಂದ 70 ಸಾವಿರ ಪಡೆದಿದ್ದೇನೆ. ಶುಂಠಿ ಹಾಗೂ ಮಿಶ್ರ ಬೆಳೆ, ನನ್ನ ಕೈ ಹಿಡಿದಿದೆ. ನಾನು ನಿತ್ಯ ಪಿಕೆಪಿಎಸ್‌ಗೆ ಹೋಗುವ ಮುಂಚೆ, ಕೆಲಸ ಮುಗಿಸಿ ಬಂದ ಬಳಿಕ ಹೊಲದಲ್ಲಿ ದುಡಿಯುತ್ತೇನೆ. ಇಬ್ಬರು ಕೂಲಿಕಾರರು ನಿತ್ಯ ಹೊಲಕ್ಕೆ ಬರುತ್ತಾರೆ. ನನ್ನ ವೃತ್ತಿಯ ಜತೆಗೆ ಕೃಷಿಯಲ್ಲಿ ನೆಮ್ಮದಿಯಾಗಿದ್ದೇನೆ ಎಂದು ರೈತ ಗೋವಿಂದಪ್ಪ ಹುಲ್ಲನ್ನವರ ಹೇಳಿಕೊಂಡರು.