Advertisement

ಭದ್ರಾವತಿ ತಾಲೂಕು ಬಾರಂದೂರಲ್ಲಿನ್ನು “ನೀರಾ’ತಂಕ

06:00 AM Sep 22, 2018 | |

ಶಿವಮೊಗ್ಗ: ರಾಜ್ಯದ ಪ್ರಥಮ ನೀರಾ ಉತ್ಪಾದನೆ ಹಾಗೂ ಸಂಸ್ಕರಣ ಘಟಕ ಭದ್ರಾವತಿ ತಾಲೂಕಿನ ಬಾರಂದೂರಿನಲ್ಲಿ ಆರಂಭಗೊಂಡಿದೆ. ನೀರಾವನ್ನು ಅಲ್ಕೋಹಾಲ್‌ ಅಂಶವಿಲ್ಲದೇ ಶೇಖರಿಸಿಟ್ಟುಕೊಳ್ಳುವ ತಂತ್ರಜ್ಞಾನವನ್ನು ಬಳಸಿಕೊಂಡಿರುವ ಘಟಕವು ಪರಿಶುದ್ಧ ನೀರಾ ಒದಗಿಸುತ್ತಿದೆ.

Advertisement

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನೀರಾ ಇಳಿಸಲು ಅನುಮತಿ ನೀಡುವ ನೀತಿ ರೂಪಿಸಲಾಯಿತು. ಈ ಮೂಲಕ ಪ್ರಥಮವಾಗಿ ಸರ್ಕಾರದಿಂದ ಪರವಾನಗಿ ಪಡೆದು ಭದ್ರಾವತಿಯ ಮಲೆನಾಡು ನಟ್ಸ್‌ ಆ್ಯಂಡ್‌ ಸ್ಪೈಸ್‌ ಪ್ರೊಡ್ನೂಸರ್‌ ಕಂಪನಿ ನೀರಾ ಇಳಿಸಲು ಚಾಲನೆ ನೀಡಿದೆ. ಸಾಮಾನ್ಯವಾಗಿ ನೀರಾವನ್ನು ಬೆಳಗ್ಗೆ ಅಂದರೆ ಸೂರ್ಯ ಹುಟ್ಟುವ ಮುನ್ನ ಕುಡಿಯಬೇಕೆಂಬುದು ಪ್ರತೀತಿ. ಆದರೆ ಇದು ಎಷ್ಟೋ ಬಾರಿ ಸಾಧ್ಯವಾಗುತ್ತಿಲ್ಲ. ಕಾರಣ ಅದನ್ನು ಹುಳಿ ಬಾರದಂತೆ ಯಾವ ರೀತಿ ಸಂಸ್ಕರಿಸಬೇಕೆಂಬ ತಂತ್ರಜ್ಞಾನ ಈವರೆಗೂ ಕಂಡು ಹಿಡಿದಿರಲಿಲ್ಲ. ಕೇರಳದಲ್ಲಿ ಮೊದಲ ಬಾರಿಗೆ ಮೈನಸ್‌ 4 ಡಿಗ್ರಿ ಉಷ್ಣಾಂಶದಲ್ಲಿ ಸಂಸ್ಕರಿಸಿ ಬಳಸುವ ಪ್ರಯೋಗ ಯಶಸ್ವಿಯಾಗಿತ್ತು. ಈಗ ಅದೇ ಪ್ರಯೋಗವನ್ನು ಕರ್ನಾಟಕದಲ್ಲೂ ಮಾಡಲಾಗುತ್ತಿದೆ.

ಮೈನಸ್‌ 4 ಡಿಗ್ರಿಗಿಂತ ಹೆಚ್ಚಿನ ತಾಪಮಾನದಲ್ಲಿ ನೀರಾ ಹೆಂಡವಾಗಿ ಪರಿವರ್ತನೆ ಆಗುವುದರಿಂದ ಹಾಗೂ ಅದನ್ನು ಸಂಸ್ಕರಿಸಲು ಸ್ಥಾಪಿಸುವ ಘಟಕಗಳಿಗೆ ಹೆಚ್ಚು ಹಣ ಬೇಕಾಗಿರುವುದರಿಂದ ಕೇವಲ ರೈತ ಉತ್ಪಾದಕಾ ಕಂಪನಿಗಳಿಗೆ (ಎಫ್‌ಪಿಒ) ನೀರಾ ಉತ್ಪಾದಿಸುವ ಹಾಗೂ ಸಂಸ್ಕರಿಸುವ ಅನುಮತಿ ನೀಡಲು ಅಬಕಾರಿ ಕಾಯಿದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಸೂಕ್ತ ಅನುಮತಿ ಇಲ್ಲದೇ ನೀರಾ ಉತ್ಪಾದನೆ ಈಗಲೂ ಅಪರಾಧ. ಭದ್ರಾವತಿಯ ಈ ಕಂಪನಿಯು ಬಾರಂದೂರು ಗ್ರಾಮದಲ್ಲಿ 2.5 ಕೋಟಿ ವೆಚ್ಚದಲ್ಲಿ ಸಂಸ್ಕರಣಾ ಘಟಕ ಸ್ಥಾಪಿಸಿದೆ. ತೋಟಗಾರಿಕೆ ಇಲಾಖೆ 1 ಕೋಟಿ ಸಹಾಯಧನ, ತೆಂಗು ಅಭಿವೃದ್ಧಿ ಮಂಡಳಿ 35 ಲಕ್ಷ ಹಾಗೂ ರೈತ ಉತ್ಪಾದಕಾ ಕಂಪನಿಯು 1.25 ಕೋಟಿ ರೂ. ಬಂಡವಾಳ ಹೂಡಿದೆ.

ಆದಾಯ ದುಪ್ಪಟ್ಟು: ವರ್ಷಕ್ಕೆ ಒಂದು ತೆಂಗಿನ ಮರ ಹೆಚ್ಚೆಂದರೆ 100 ಕಾಯಿ ಬಿಡಬಹುದು. ಈಗಿನ ಮಾರ್ಕೆಟ್‌ ದರದಲ್ಲಿ ವರ್ಷಕ್ಕೆ ಒಂದು ಮರದಿಂದ 1300, 1400ರೂ. ಆದಾಯ ಗಳಿಸಬಹುದು. ಆದರೆ ನೀರಾದಿಂದ ತಿಂಗಳಿಗೆ ಒಂದು ಮರದಿಂದ ಕನಿಷ್ಠ 1600ರೂ. ಸಂಪಾದಿಸಬಹುದು. ಒಂದು ಮರ ದಿನಕ್ಕೆ ಕನಿಷ್ಠ 2 ರಿಂದ 3.5 ಲೀಟರ್‌ ನೀರಾ ಕೊಡುತ್ತದೆ. ಒಂದು ಕೆಜಿ ನೀರಾಗೆ 40ರೂ. ಇದೆ.     

ನೀರಾ ಮಾರಾಟದಿಂದ ರೈತನಿಗಷ್ಟೇ ಅಲ್ಲದೇ ನೀರಾ ಟೆಕ್ನಿಷಿಯನ್‌ಗೂ (ನೀರಾ ಇಳಿಸುವವರು) ಕೂಡ ಆದಾಯ ನೀಡುತ್ತದೆ. ನೀರಾ ಟೆಕ್ನಿಷಿಯನ್‌ಗೆ 10 ಸಾವಿರ ಸಂಬಳ ಹಾಗೂ ಮರವೊಂದಕ್ಕೆ 8 ರೂ. ಪ್ರತಿ ದಿನ ನೀಡಲಾಗುತ್ತದೆ. ಕನಿಷ್ಠ 12 ಮರದಿಂದ 2 ಲೀಟರ್‌ ನೀರಾ ಇಳಿಸಿದರೂ ತಿಂಗಳಿಗೆ 15,760ರೂ. ದುಡಿಯಬಹುದು. ಮಲೆನಾಡು ನಟ್ಸ್‌ ಆ್ಯಂಡ್‌ ಸ್ಪೈಸ್‌ ಪ್ರೊಡ್ನೂಸರ್‌ ಕಂಪನಿ ವತಿಯಿಂದ ಈಗಾಗಲೇ ತರಬೇತಿ ಕೂಡ ಆರಂಭವಾಗಿದೆ.

Advertisement

5 ಲಕ್ಷ ಹೆಕ್ಟೇರ್‌ನಲ್ಲಿ ತೆಂಗು
ರಾಜ್ಯದ 13 ಜಿಲ್ಲೆಗಳಲ್ಲಿ ಪ್ರಮುಖವಾಗಿ ತೆಂಗು ಬೆಳೆಯಲಾಗುತ್ತಿದ್ದು ಒಟ್ಟು 5.11 ಲಕ್ಷ ಹೆಕ್ಟೇರ್‌ ತೆಂಗು ಬೆಳೆ ಇದ್ದು, 7.665 ಕೋಟಿ ತೆಂಗಿನ ಮರಗಳಿವೆ. 13 ಜಿಲ್ಲೆಗಳಲ್ಲಿ ಶೇ.81ರಷ್ಟು ಬೆಳೆ ಇದೆ. ತುಮಕೂರು ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದು 1,94,12,400 ಮರಗಳಿವೆ. ಶಿವಮೊಗ್ಗದಲ್ಲಿ 8,87,460 ಮರಗಳಿವೆ.

ನೀರಾ ಇಳಿಸೋದು ಹೇಗೆ?
ಡಬ್ಬಿ ರೀತಿ ಇರುವ ಬಾಕ್ಸ್‌ನಲ್ಲಿ ಮೊದಲು ಐಸ್‌ ಕ್ಯೂಬ್‌ ಹಾಕಲಾಗುತ್ತದೆ. ಅದರ ಮೇಲೆ ನೀರಾ ತುಂಬುವಂತೆ ಪ್ಲಾಸ್ಟಿಕ್‌ ಕವರ್‌ ಹಾಕಲಾಗುತ್ತದೆ. ಹೊಂಬಾಳೆ ತುದಿಯನ್ನು ನುಣುಪಾಗಿ ಕತ್ತರಿಸಿ ಕವರ್‌ನೊಳಗೆ ನೀರಾ ಬೀಳುವಂತೆ ತೂಗು ಹಾಕಲಾಗುತ್ತದೆ. ಇದರಿಂದ ಪ್ರತಿ ಹನಿಯೂ ಮೈನಸ್‌ 4 ಡಿಗ್ರಿ ಒಳಗೆ ಇರುತ್ತದೆ. ಅಲ್ಲದೇ ಧೂಳು, ಕ್ರಿಮಿ, ಕೀಟಗಳು ಹೋಗಲೂ ಅವಕಾಶವಿರುವುದಿಲ್ಲ.

ವರ್ಷದ ಹಿಂದೆ ಅಸ್ತಿತ್ವಕ್ಕೆ ಬಂದಿರುವ ನಮ್ಮ ಉತ್ಪಾದಕಾ ಕಂಪನಿಯಲ್ಲಿ ಸಾವಿರ ರೈತರು ಸದಸ್ಯರಾಗಿದ್ದಾರೆ. 22.66 ಲಕ್ಷ ಷೇರು ಬಂಡವಾಳ ಹೊಂದಿದೆ. ನೀರಾ ಸಂಸ್ಕರಣೆಯನ್ನು ಒಂದು ತಿಂಗಳಿನಿಂದ ಆರಂಭಿಸಲಾಗಿದ್ದು ಮುಂದಿನ ತಿಂಗಳು ಶಿವಮೊಗ್ಗದಲ್ಲಿ ನೀರಾ ಲಭ್ಯವಾಗಲಿದೆ. ಕೆಡದಂತೆ ಬಹುದಿನಗಳವರೆಗೆ ಕಾಪಾಡುವ ಸಂಶೋಧನೆ ನಡೆಯುತ್ತಿದ್ದು ಇದರಲ್ಲಿ ಯಶಸ್ಸು ಸಿಕ್ಕರೆ ರಾಜ್ಯ, ದೇಶ, ಹೊರದೇಶಗಳಿಗೂ ರಫ್ತು ಮಾಡಲಾಗುವುದು.
– ಮನೋಹರ ಮಸ್ಕಿ, ಅಧ್ಯಕ್ಷ, ಮಲೆನಾಡು ನಟ್ಸ್‌ ಆ್ಯಂಡ್‌

ಸ್ಪೈಸ್‌ ಪ್ರೊಡ್ನೂಸರ್‌ ಕಂಪನಿ
ಮೈನಸ್‌ 4 ಡಿಗ್ರಿ ಉಷ್ಣಾಂಶದಲ್ಲಿ ಹೆಚ್ಚೆಂದರೆ ವಾರದವರೆಗೆ ಸಂಸ್ಕರಿಸಬಹುದು. ಆದರೆ ಇದರ ಮೇಲೆ ಇಡಬೇಕಾದರೆ ನೂತನ ವಿಧಾನಬೇಕು. ಕೇರಳದಲ್ಲಿರುವ ಥರ್ಮಲ್‌ ಟ್ರೀಟ್‌ಮೆಂಟ್‌ ಯಶಸ್ವಿಯಾಗಿಲ್ಲ. ಆದ್ದರಿಂದ ನಾವು ಕೋಲ್ಡ್‌ ಟ್ರೀಟ್‌ಮೆಂಟ್‌ನಲ್ಲೇ ಹೆಚ್ಚು ದಿನ ಇಡುವ ಸಂಶೋಧನೆಗೆ ಮುಂದಾಗಿದ್ದೇವೆ.
– ಚೇತನ್‌, ಲ್ಯಾಬ್‌ ಟೆಕ್ನಿಷಿಯನ್‌, ಮಲೆನಾಡು ನಟ್ಸ್‌ ಆ್ಯಂಡ್‌ ಸ್ಪೈಸ್‌ ಪ್ರೊಡ್ನೂಸರ್‌ ಕಂಪನಿ

– ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next