ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವಿಳಂಬ ಖಂಡಿಸಿ ಹಾಗೂ ಜನತೆಗೆ ಕುಡಿಯುವ ನೀರು ಹಾಗೂ ರೈತರ ಹೊಲಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆಯ ಜಿಲ್ಲಾ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಚಿತ್ರದುರ್ಗ ಜಿಲ್ಲೆ ಸತತ ಬರಗಾಲಕ್ಕೆ ತುತ್ತಾಗುತ್ತಿದೆ. ಅಂಥದ್ದರಲ್ಲಿ ರೈತರು, ಜನ, ಜಾನುವಾರುಗಳು ಬಯಲುಸೀಮೆಯಲ್ಲಿ ಬದುಕು ಕಟ್ಟಿಕೊಂಡಿರುವುದೇ ದೊಡ್ಡ ಸಾಹಸ. ಭದ್ರಾ ಮೇಲ್ದಂಡೆ ಯೋಜನೆ ಅಡಿ ನೀರು ಇಂದು ಬರುತ್ತೆ, ನಾಳೆ ಬರುತ್ತೆ ಎಂದು ಚಾತಕ ಪಕ್ಷಿಗಳಂತೆ ಜನತೆ ಭದ್ರಾ ಕಾಮಗಾರಿ ಕಡೆ ಕಣ್ಣು ಮತ್ತು ಬಾಯಿ ಬಿಟ್ಟುಕೊಂಡು ಕಾಯುವಂತಾಗಿದೆ. ಆದರೂ ಜಿಲ್ಲೆಗೆ ನೀರು ಹರಿಯುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯನ್ನು ಎಲ್ಲ ರಾಜಕೀಯ ಪಕ್ಷಗಳು ಕಡೆಗಣಿಸಿವೆ. ಇದರಿಂದಾಗಿ ಐದಾರು ದಶಕಗಳ ಹಿಂದೆಯೇ ಜಿಲ್ಲೆಗೆ ನೀರು ನೀಡುವ ಎಲ್ಲ ಅವಕಾಶಗಳಿಂದಲೂ ಜನತೆ ವಂಚಿತರಾಗಿದ್ದಾರೆ. ಇಲ್ಲಿಯವರೆಗೂ ಎಲ್ಲಾ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನೀರು ಹರಿಸಿಯೇ ಬಿಡುತ್ತೇವೆಂದು ಬೊಗಳೆ ಬಿಡುತ್ತಿದ್ದಾರೆಯೇ ವಿನಃ ಕಾರ್ಯಗತ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಚಿತ್ರದುರ್ಗಕ್ಕೆ ಮಂಜೂರಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಶೀಘ್ರದಲ್ಲಿ ಆರಂಭವಾಗಬೇಕು. ಮುಂಬರುವ ಬಜೆಟ್ ನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಅಗತ್ಯವಾಗಿ ಬೇಕಿರುವ ಅನುದಾನ ಮೀಸಲಿಡಬೇಕು, ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಕೊಳಗೇರಿ ನಿವಾಸಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು. ಬಡ ಕುಟುಂಬದಲ್ಲಿ ಯಾರಾದರೂ ಮೃತಪಟ್ಟಾಗ ಶವಸಂಸ್ಕಾರಕ್ಕಾಗಿ ತಕ್ಷಣ ನೀಡಬೇಕಾದ ಹಣ ಇನ್ನೂ ಮೃತರ ಕುಟುಂಬಗಳಿಗೆ ತಲುಪಿಲ್ಲ. ಸಂಬಂಧಪಟ್ಟವರು ತಹಶೀಲ್ದಾರ್ ಕಚೇರಿಗೆ ಹೋಗಿ ಕೇಳಿದರೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಅನುದಾನ ಬಂದಿಲ್ಲವೆಂಬ ಉತ್ತರ ನೀಡಿ ಕಳಿಸುತ್ತಿದ್ದಾರೆ. ತಡ ಮಾಡದೆ ಶವಸಂಸ್ಕಾರದ ಹಣ ನೀಡಬೇಕು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕೆ. ಗಣೇಶ್ ಮನವಿ ಮಾಡಿದರು. ಸುಂಕಪ್ಪ ಮತ್ತಿತರರು ಪಾಲ್ಗೊಂಡಿದ್ದರು.