Advertisement
186 ಅಡಿ ಗರಿಷ್ಠ ಮಟ್ಟದ ಭದ್ರಾ ಜಲಾಶಯದಲ್ಲಿ ಮೇ 31ರಂದು 150.6 ಅಡಿ ನೀರಿದೆ. ಇಷ್ಟೊಂದು ನೀರು ಸಂಗ್ರಹವಾಗಿರುವುದು ಜಲಾಶಯದ ಇತಿಹಾಸದಲ್ಲೇ ಮೊದಲು. ಮುಂಗಾರು ಹಾಗೂ ಬೇಸಿಗೆ ಬೆಳೆ ನಂತರ 110 ಅಡಿಯಷ್ಟು ನೀರು ಉಳಿದಿರುತ್ತದೆ. 2019ರಿಂದ ಈಚೆಗೆ ಜಲಾಶಯದ ನೀರಿನ ಉಳಿಕೆ ಏರಿಕೆಯಾಗಿದೆ. 2019, ಮೇ 31ರಂದು 125.1 ಅಡಿ, 2020ರಲ್ಲಿ 133.3 ಅಡಿ, 2021ರಲ್ಲಿ 138.5 ಅಡಿ ನೀರಿತ್ತು. 2019ರಿಂದ ಈಚೆಗೆ ಉತ್ತಮ ಮಳೆಯಾಗುತ್ತಿದ್ದು ಜಲಾಶಯ ಭರ್ತಿ ಯಾಗಿದೆ. ಉತ್ತಮ ಮಳೆ, ನೀರಿನ ಮಿತ ಬಳಕೆ, ಕಾಲುವೆ ಸ್ವಚ್ಛತೆ ಸೇರಿ ಅನೇಕ ಕಾರಣಗಳಿಗೆ ಜಲಾಶಯದಲ್ಲಿ ಹೆಚ್ಚಿನ ನೀರು ಉಳಿಕೆಯಾಗಿದೆ.
Related Articles
Advertisement
ವಿವಿ ಸಾಗರಕ್ಕೆ ಬಿಟ್ಟಿದೆಷ್ಟು?
ಬಯಲುಸೀಮೆ ಚಿತ್ರದುರ್ಗದ ಜೀವನಾಡಿ ವಾಣಿವಿಲಾಸ ಸಾಗರಕ್ಕೆ ಜೂನ್ ತಿಂಗಳಲ್ಲಿ 7 ಟಿಎಂಸಿಗೂ ಅಧಿಕ ನೀರು ಹರಿಸಲಾಗಿದೆ. 130 ಅಡಿ ಗರಿಷ್ಠ ಮಟ್ಟದ ವಿವಿ ಸಾಗರದಲ್ಲಿ 120.15 ಅಡಿ ನೀರಿದೆ. ಉತ್ತಮ ಮಳೆಯಾದರೆ ಭದ್ರಾ ಜಲಾಶಯ ಜುಲೈನಲ್ಲೇ ಭರ್ತಿಯಾಗುವ ಅವಕಾಶಗಳಿದ್ದು ಹೆಚ್ಚುವರಿ ನೀರನ್ನು ವಿವಿ ಸಾಗರಕ್ಕೆ ಹರಿಸುವ ಸಾಧ್ಯತೆಗಳಿವೆ.
ನೀರು ಉಳಿಕೆ ಮಾಡಿದ್ದು ಹೇಗೆ?
ಜಲಾಶಯದಿಂದ 3 ವರ್ಷಗಳಿಂದ ಉತ್ತಮ ನೀರು ಉಳಿಕೆ ಮಾಡಲಾಗಿದೆ. ಮೊದಲು ಬೇಸಿಗೆ ಬೆಳೆ, ಮುಂಗಾರು ಬೆಳೆಗೆ 120 ದಿನ ನೀರು ಬಿಟ್ಟು ಸುಮ್ಮನಾಗುತ್ತಿದ್ದರು. ಈ ಮಧ್ಯೆ ಮಳೆಯಾದರೂ ನೀರು ನಿಲ್ಲಿಸುತ್ತಿರಲಿಲ್ಲ. ಈಗ ಪ್ರತಿದಿನ ನೀರಿನ ಬೇಡಿಕೆ, ಮಳೆ ಮುನ್ಸೂಚನೆ ಅರಿತು ನೀರು ಹರಿಸಲಾಗುತ್ತಿದೆ. ಇದರಿಂದ ನೀರಿನ ಉಳಿಕೆಯಾಗುತ್ತಿದೆ. ಇನ್ನು ಕಾಲುವೆಗಳು ಹೂಳು ತುಂಬಿ, ಜಂಡು ಬೆಳೆದು ನೀರು ಸರಾಗವಾಗಿ ಹರಿಯುತ್ತಿರಲಿಲ್ಲ. ರೈತರು ಹೆಚ್ಚು ಹರಿಸುವಂತೆ ಒತ್ತಡ ಹಾಕುತ್ತಿದ್ದರು. ಇದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ನೀರು ಪೋಲಾಗುತಿತ್ತು. ನರೇಗಾ ಮೂಲಕ ನೂರಾರು ಕಿಮೀ ಕಾಲುವೆ ಕ್ಲೀನ್ ಮಾಡಲಾಗಿದೆ. ಕೊನೆಯ ಭಾಗದ ರೈತರು ಸಹ ನಿರಾತಂಕವಾಗಿ ಬೆಳೆ ಬೆಳೆಯುತ್ತಿದ್ದಾರೆ. ಮುಂಗಾರು, ಹಿಂಗಾರಿನಲ್ಲೂ ಉತ್ತಮ ಮಳೆಯಾಗಿರುವುದು ಹೆಚ್ಚಿನ ನೀರು ಸಂಗ್ರಹಕ್ಕೆ ಕಾರಣವಾಗಿದೆ ಎನ್ನುತ್ತಾರೆ ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ.
ಶರತ್ ಭದ್ರಾವತಿ