ಅಂತೂ ಇಂತೂ ಬಿಡುಗಡೆಗೆ ಸಜ್ಜಾಗಿದ್ದ ಚಿತ್ರಗಳೀಗ ನಿಟ್ಟುಸಿರು ಬಿಟ್ಟಂತಾಗಿದೆ. ಹೌದು, ಯುಎಫ್ಓ ಮತ್ತು ಕ್ಯೂಬ್ ಸಮಸ್ಯೆ ತಲೆದೋರಿ, ಕಳೆದ ವಾರ ಯಾವ ಚಿತ್ರವೂ ಬಿಡುಗಡೆಯಾಗಿರಲಿಲ್ಲ. ಇನ್ನೇನು ಚಿತ್ರಮಂದಿರಕ್ಕೆ ಬರಲು ಅಣಿಯಾಗಿದ್ದ ಚಿತ್ರಗಳಿಗೆ ಬೇಕ್ ಬಿತ್ತು. ಮಾ.9 ರಂದು ತೆರೆಗೆ ಬರಲು ಎಂಟು ಚಿತ್ರಗಳು ರೆಡಿಯಾಗಿದ್ದವು. ಆದರೆ, ಮಂಡಳಿ ತೀರ್ಮಾನಕ್ಕೆ ಬದ್ಧರಾದ ನಿರ್ಮಾಪಕರು ತಮ್ಮ ಚಿತ್ರ ಬಿಡುಗಡೆ ಮಾಡದೆ, ಹೋರಾಟಕ್ಕೆ ಬೆಂಬಲ ಕೊಟ್ಟರು.
ಈ ವಾರ ಸಮಸ್ಯೆ ಇತ್ಯರ್ಥಕ್ಕೆ ಗಡುವು ನೀಡಿರುವ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆಗೆ ಅವಕಾಶವಿದ್ದರೂ, ಬಿಡುಗಡೆ ಆಗುತ್ತಿರುವುದು ನಾಲ್ಕು ಚಿತ್ರಗಳು ಮಾತ್ರ. ಕಾರಣ, ಕೇವಲ ಎರಡು ದಿನ ಬಾಕಿ ಇರುವಂತೆ, ರಿಲೀಸ್ ಮಾಡಬಹುದು ಎಂಬ ಆದೇಶದಿಂದ ಇದ್ದಕ್ಕಿದ್ದಂತೆ, ಬಿಡುಗಡೆಗೆ ತಯಾರಿ ಮಾಡಿಕೊಳ್ಳಲು ಕಷ್ಟ ಎಂಬ ಕಾರಣದಿಂದ ನಾಲ್ಕು ಚಿತ್ರಗಳು ಹಿಂದೆ ಸರಿದಿದ್ದು, ನಾಲ್ಕು ಚಿತ್ರಗಳು ಮಾತ್ರ ಬಿಡುಗಡೆಗೆ ಮುಂದಾಗಿವೆ.
“ಯೋಗಿ ದುನಿಯಾ’, “ದಂಡುಪಾಳ್ಯ 3′,”ಓ ಪ್ರೇಮವೇ’, “ನನಗಿಷ್ಟ’, “ಮುಖ್ಯಮಂತ್ರಿ ಕಳೆದೋದ್ನಪ್ಪೋ’, “ಹೀಗೊಂದು ದಿನ’, “ಇದಂ ಪ್ರೇಮಂ ಜೀವನಂ’, “ಸೋಜಿಗ’ ಚಿತ್ರಗಳು ಬಿಡುಗಡೆಗೆ ಸಜ್ಜಾಗಿದ್ದವು. ಈಗ “ಓ ಪ್ರೇಮವೇ’, “ದಂಡುಪಾಳ್ಯ 3′,”ನನಗಿಷ್ಟ’ ಮತ್ತು “ಇದಂ ಪ್ರೇಮಂ ಜೀವನಂ’ ಮಾತ್ರ ಬಿಡುಗಡೆಯಾಗುತ್ತಿವೆ. “ಯೋಗಿ ದುನಿಯಾ’, “ಮುಖ್ಯಮಂತ್ರಿ ಕಳೆದೋದ್ನಪೋ’,”ಹೀಗೊಂದು ದಿನ’ ಮತ್ತು “ಸೋಜಿಗ’ ಚಿತ್ರಗಳು ಬಿಡುಗಡೆ ಕಾಣುತ್ತಿಲ್ಲ.
ಈ ಕುರಿತು “ಯೋಗಿ ದುನಿಯಾ’ ನಿರ್ಮಾಪಕ ಸಿದ್ಧರಾಜು ಅವರನ್ನು ಕೇಳಿದರೆ, ತರಾತುರಿಯಲ್ಲಿ ಬಿಡುಗಡೆ ಮಾಡಲು ಆಗುವುದಿಲ್ಲ. ಯಾಕೆಂದರೆ, ಎರಡು ದಿನ ಬಾಕಿ ಇರುವುದರಿಂದ, ಯುಎಫ್ಓ, ಕ್ಯೂಬ್‌ಗೆ ಚಿತ್ರ ಅಪ್‌ಲೋಡ್ ಮಾಡಲು ಒಂದು ದಿನವಾದರೂ ಬೇಕು. ಪ್ರಚಾರ ಕಾರ್ಯವೂ ಮಾಡಬೇಕು. ಅದಕ್ಕೆ ಸಮಯ ಬೇಕಾಗುತ್ತೆ. ಹಾಗಾಗಿ ಮುಂದಿನ ವಾರ ಬಿಡುಗಡೆ ಮಾಡುವ ಯೋಚನೆ ಇದೆ’ ಎಂದು ಹೇಳುತ್ತಾರೆ ಸಿದ್ಧರಾಜು.
“ಓ ಪ್ರೇಮವೇ’ ಚಿತ್ರದ ನಿರ್ಮಾಪಕ ಕಮ್ ನಿರ್ದೇಶಕ ಮನೋಜ್ ಕೂಡ ಎಲ್ಲವನ್ನೂ ತಯಾರಿ ಮಾಡಿಕೊಂಡಿದ್ದರಿಂದ ಈ ವಾರವೇ ತೆರೆಗೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಚಿತ್ರದ ಪ್ರಚಾರ ಕಾರ್ಯವನ್ನೂ ಮಾಡಿರುವ ಅವರು, ಚಿತ್ರ ಬಿಡುಗಡೆಯ ದಿನ ಎದುರು ನೋಡುತ್ತಿದ್ದರು. ಸಮಸ್ಯೆ ಬಗೆಹರಿದಿಲ್ಲವಾದರೂ, ಮಂಡಳಿ ಅವಕಾಶ ಮಾಡಿಕೊಟ್ಟ ಕಾರಣ, ಅವರು ಈ ವಾರ ತೆರೆಗೆ ಬರುತ್ತಿದ್ದಾರೆ. ಇನ್ನುಳಿದಂತೆ ‘ದಂಡುಪಾಳ್ಯ’ ಹಾಗು ಹೊಸಬರ ಚಿತ್ರ “ಇದಂ ಪ್ರೇಮಂ ಜೀವನಂ’ ತೆರೆಗೆ ಬರುತ್ತಿವೆ.