Advertisement

ವೇದಾಂತ, ರಾದ್ಧಾಂತಗಳ ಮಧ್ಯೆ ಅವನೊಬ್ನೇ ಒಳ್ಳೇವ್ನು

10:26 AM Jul 01, 2017 | |

ಅವ್ನು ಒಳ್ಳೇವ್ನ, ಕೆಟ್ಟೋವ್ನ ಅಥವಾ ತಿಕ್ಲನಾ..? ಈ ಪ್ರಶ್ನೆಗೆ ಉತ್ತರಿಸೋದು ತುಸು ಕಷ್ಟ  ಆದರೆ… ಅವನ ವರ್ತನೆ ನೋಡಿದರೆ ಅವನೊಬ್ಬ ತಿಕ್ಲಾನೇ ಇರಬೇಕು ಅಂತೆನಿಸದೇ ಇರದು. ಯಾಕಂದ್ರೆ, ಕಾಲೇಜ್‌ಗೆ ಹುಡುಗಿ ತುಂಡುಡುಗೆ ಹಾಕ್ಕೊಂಡ್‌ ಬಂದ್ರೆ, ಬಾಯಿಗ್‌ ಬಂದಂಗೆ ಬೈಯ್ತಾನೆ. ಅಷ್ಟೇ ಅಲ್ಲ, ಅಲ್ಲೊಂದು ವೇದಾಂತ ಶುರು ಮಾಡ್ತಾನೆ. ಲವ್‌ ಮಾಡ್ತೀನಿ ಅಂತ ಹುಡುಗಿಯೊಬ್ಬಳು ಅವನ ಬಳಿ ಬಂದ್ರೆ, ಅವಳಿಗೊಂದು ಉಪದೇಶ ಹೇಳ್ತಾನೆ.

Advertisement

ಹುಡುಗಿಯೊಬ್ಬಳು ತನ್ನ “ಅಂದ’ ತೋರಿಸೋಕೆ ನಿಂತ್ರೆ, ನೀನೊಂದು ಮಗು ಥರಾ ಕಾಣಿಸ್ತೀಯ ಅಂತಾನೆ. ಕಾಲೇಜ್‌ ಟ್ರಿಪ್‌ಗೆ ಹುಡುಗರೇ ಬೇಡ ಅನ್ನೋ ಉಪನ್ಯಾಸಕಿಗೆ, ಗಂಡಸರು ಎಷ್ಟು ಒಳ್ಳೇವ್ರು ಎಂಬ ಬುದ್ಧಿವಾದ ಹೇಳ್ತಾನೆ. ಎಲ್ಲೋ ರಸ್ತೇಲಿ ಒಂದಷ್ಟು ಜನರ ಮಧ್ಯೆ ನಿಂತು, ಸುದ್ದಿಗೋಸ್ಕರ ಪ್ರತಿಭಟಿಸೋ ವ್ಯಕ್ತಿಗೆ ಪಾಠ ಕಲೀಸ್ತಾನೆ. ಇಷ್ಟೆಲ್ಲಾ ಮಾಡೋ ಅವ್ನಿಗೆ ಮತ್ತದೇ ಪ್ರಶ್ನೆ ಎದುರಾಗುತ್ತೆ ಅವ್ನು ಒಳ್ಳೇವ್ನಾ? ಆದರೂ ಉತ್ತರ ಸಿಗೋದು ಕಷ್ಟಸಾಧ್ಯ.

ಯಾಕಂದ್ರೆ, ಇಲ್ಲಿ “ಒಳ್ಳೇವ್ನು’ ಎಂಬ ಪದಕ್ಕೆ ಸರಿಯಾದ ಸಮರ್ಥನೆ ಇಲ್ಲ. ಹಾಗಂತ, ಇಲ್ಲಿ ಯಾವ ಹೊಸ ಅಂಶವೂ ಇಲ್ಲ. ಕಥೆಯಲ್ಲಿ ಹೊಸತನ ಅನ್ನೋದೂ ಇಲ್ಲ. ಈಗಾಗಲೇ ಅದೆಷ್ಟೋ ಚಿತ್ರಗಳಲ್ಲಿ ಬಂದು ಹೋಗಿರುವ ಅಂಶಗಳೇ ಇಲ್ಲೂ ತುಂಬಿಕೊಂಡಿವೆ. ಹಾಗಾಗಿ, “ಅವನೊಬ್ನೇ ಒಳ್ಳೇವ್ನು’ ಅಂತ ಹೇಳುವುದಕ್ಕಾಗಲ್ಲ. ವಿಜಯ್‌ ಮಹೇಶ್‌ ಇಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ, ನಟನೆ ಹೀಗೆ ಎಲ್ಲವನ್ನೂ ಒಂದೇ ಏಟಿಗೆ ನಿಭಾಯಿಸಿರುವುದರಿಂದಲೋ ಏನೋ, ಯಾವುದನ್ನೂ ಪರಿಪೂರ್ಣಗೊಳಿಸಲು ಸಾಧ್ಯವಾಗಿಲ್ಲ.

ಮೊದಲರ್ಧ ಸ್ವಲ್ಪ ಮಾತು, ಬಿಲ್ಡಪ್‌ ಮತ್ತು ಅಲ್ಲಲ್ಲಿ ಗೊಂದಲದಲ್ಲೇ ಸಾಗುವ ಚಿತ್ರ, ದ್ವಿತಿಯಾರ್ಧದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳುತ್ತದೆ. ಸಣ್ಣದ್ದೊಂದು ತಿರುವು ಸಿನಿಮಾವನ್ನು ಸುಮ್ಮನೆ ನೋಡಿಸಿಕೊಂಡು ಹೋಗುತ್ತದೆಯಾದರೂ, ಆ ಕುತೂಹಲ ಹೆಚ್ಚು ಸಮಯ ಉಳಿಯೋದಿಲ್ಲ. ಕಥೆಯ ಎಳೆಯೇನೋ ಪರವಾಗಿಲ್ಲ. ಆದರೆ, ಅದನ್ನು ವಿಸ್ತರಿಸಿರುವ ಕ್ರಮ ಸರಿಯಾಗಿಲ್ಲ. ಹಾಗಾಗಿಯೇ ಅಲ್ಲಲ್ಲಿ ನಿರೂಪಣೆ ಹಿಡಿತ ತಪ್ಪಿದೆ. ಮೊದಲರ್ಧವಂತೂ ಉಪದೇಶದ ಸೀನ್‌ಗಳಿಗೇ ಸೀಮಿತವಾಗಿದೆ.

ಇನ್ನೇನು ನೋಡುಗ ಸೀಟಿಗೆ ಒರಗಿಕೊಳ್ಳುತ್ತಾನೆ ಅನ್ನುವಷ್ಟರಲ್ಲಿ ಹಸಿಬಿಸಿ ಎನಿಸುವ ಹಾಡೊಂದು ಕಾಣಿಸಿಕೊಂಡು, ತಾಳ್ಮೆ ಸುಧಾರಿಸುತ್ತದೆ. ಒಂದು ಗಂಭೀರ ವಿಷಯ ಇಟ್ಟುಕೊಂಡು ಸಿಲ್ಲಿಯಾಗಿ ತೋರಿಸಿರುವ ನಿರ್ದೇಶಕರು, ವಿನಾಕಾರಣ ಹಾಸ್ಯ ದೃಶ್ಯಗಳನ್ನಿಟ್ಟು ಅಪಹಾಸ್ಯಕ್ಕೀಡಾಗಿದ್ದಾರೆ. ಮಧ್ಯಂತದವರೆಗೆ ಒಂದಷ್ಟು ಬಿಲ್ಡಪ್ಪು, ಉದ್ದುದ್ದ ಡೈಲಾಗು, ಹೀರೋಯಿಸಂಗೊಂದು ಫೈಟು, ಕಾಲೇಜ್‌ ಹಿನ್ನಲೆಯಲ್ಲೊಂದು ಲವ್‌ಸ್ಟೋರಿ, ಅದರೊಂದಿಗೊಂದು ಡ್ಯುಯೆಟ್ಟು, ಇದರ ಹೊರತಾಗಿ ಬೇರೇನೂ ಇಲ್ಲ.

Advertisement

ಚಿತ್ರಕ್ಕೊಂದು ಟ್ವಿಸ್ಟ್‌ ಸಿಗೋದೇ ದ್ವಿತಿಯಾರ್ಧದಲ್ಲಿ. ಅಲ್ಲೊಂದಷ್ಟು ಊಹಿಸದ ಪಾತ್ರಗಳು, ಕಾಣದ ದೃಶ್ಯಗಳು, ಕೇಳದ ವಿಷಯಗಳು ಆವರಿಸಿಕೊಂಡು ಸಣ್ಣದ್ದೊಂದು ತಿರುವು ಪಡೆದುಕೊಳ್ಳುತ್ತೆ. ಅದೊಂದೇ ಸಿನಿಮಾದ “ಪ್ಲಸ್‌’ ಎನ್ನಬಹುದು. ವಿಜಯ್‌ ಒಬ್ಬ ಕಮೀಷನರ್‌ ಮಗ. ಕಾಲೇಜ್‌ನಲ್ಲಿ ಅವನೇ ಸೀನಿಯರ್‌. ಸಿಕ್ಕೋರಿಗೆಲ್ಲ ಉಪದೇಶ ಮಾಡೋ ಅವ್ನಿಗೂ ಲವ್‌ ಆಗುತ್ತೆ. ಮದ್ವೆಗೂ ಮುನ್ನ ಆ ಹುಡುಗಿಗೊಂದು ಮಗು ಕರುಣಿಸುತ್ತಾನೆ.

ಆದರೆ, ಆ ಒಳ್ಳೇವ್ನು ಮದ್ವೆ ಆಗ್ತಾನಾ, ಇಲ್ಲವಾ ಅನ್ನೋದೇ ಸಸ್ಪೆನ್ಸ್‌. ಇಲ್ಲಿ ಇನ್ನೊಂದು ಲವ್‌ ಟ್ರ್ಯಾಕ್‌ ಕೂಡ ಇದೆ. ಆ ಟ್ರ್ಯಾಕ್‌ನಲ್ಲಿ ಲವ್‌ ಸಕ್ಸಸ್‌ ಆಗುತ್ತಾ ಇಲ್ಲವಾ ಅಂತ ತಿಳಿಯುವ ಆಸೆ ಇದ್ದರೆ ಚಿತ್ರಮಂದಿರದತ್ತ ಹೋಗಬಹುದು. ವಿಜಯ್‌ ಮಹೇಶ್‌ ನಟನೆಯಲ್ಲಿನ್ನು ದೂರ ಸಾಗಬೇಕಿದೆ. ಫೈಟು, ಡ್ಯಾನ್ಸ್‌ಗೆ ಈ ಮಾತು ಅನ್ವಯಿಸುವುದಿಲ್ಲ. ಆ್ಯನಿ ಪ್ರಿನ್ಸ್‌ ಗ್ಲಾಮರ್‌ಗಷ್ಟೇ ಸೀಮಿತ. ರವಿತೇಜ ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ.

ಸೌಜನ್ಯ ಇಲ್ಲಿ ಬಿಲ್ಡಪ್‌ ಹುಡುಗಿ ಎನಿಸಿಕೊಂಡರೂ ಅಷ್ಟಾಗಿ “ಮಿಂಚು’ವುದಿಲ್ಲ. ಉಳಿದಂತೆ ಬರುವ ಪಾತ್ರಗಳಾವೂ ಗಮನಸೆಳೆಯುವುದಿಲ್ಲ. ಸುಧೀರ್‌ ಶಾಸ್ತ್ರಿ ಸಂಗೀತದಲ್ಲಿ ಒಂದು ಹಾಡು ಪರವಾಗಿಲ್ಲ. ಹಿನ್ನೆಲೆ ಸಂಗೀತ ದೃಶ್ಯಗಳಿಗೆ ಪೂರಕವಾಗಿದೆ. ಇನ್ನು, ವಿಲಿಯಂ ಡೇವಿಡ್‌ ಕ್ಯಾಮೆರಾ ಕೈಚಳಕದಲ್ಲಿ ಹೇಳಿಕೊಳ್ಳುವಂತಹ ಪವಾಡ ನಡೆದಿಲ್ಲ.

ಚಿತ್ರ: ನಾನೊಬ್ನೆ ಒಳ್ಳೆವ್ನು
ನಿರ್ಮಾಣ: ಬಸವರಾಜ್‌
ನಿರ್ದೇಶನ: ವಿಜಯ್‌ ಮಹೇಶ್‌ 
ತಾರಾಗಣ: ವಿಜಯ್‌ ಮಹೇಶ್‌, ರವಿತೇಜ, ಸೌಜನ್ಯ, ಆ್ಯನಿ ಪ್ರಿನ್ಸಿ, ಸೋನು, ಜ್ಯೋತಿ, ಮೂರ್ತಿ ಇತರರು.

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next