ಚಾಮರಾಜನಗರ: ಇಂಗ್ಲಿಷ್ ಮಾಧ್ಯಮ ಶಾಲೆಗಳ ಅಬ್ಬರದ ನಡುವೆ ಕನ್ನಡ ಮಾಧ್ಯಮದಲ್ಲಿ ಉತ್ಕೃಷ್ಟವಾದ ಶಿಕ್ಷಣವನ್ನು ದೀನಬಂಧು ಶಾಲೆ ನೀಡುತ್ತಿರುವುದು ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮೀಪತಿ ಹೇಳಿದರು.
ನಗರದ ದೀನಬಂಧು ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ 21ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಚಾಮರಾಜನಗರ ಶೈಕ್ಷಣಿಕ ವಲಯದಲ್ಲಿ ದೀನಬಂಧು ಶಾಲೆಯನ್ನು ವಿಶೇಷವಾಗಿ ಗುರುತಿಸಲಾಗುತ್ತಿದೆ. ಈ ಶಾಲೆಯಲ್ಲಿ ಕಲಿಕೆ ನೈಜ ಅನುಭವದಿಂದ ನಡೆಯುತ್ತದೆ. ಇಲ್ಲಿನ ಶಿಕ್ಷಕರು ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಶಿಕ್ಷಣ ನೀಡುತ್ತಿದ್ದಾರೆ ಎಂದರು.
ಮಕ್ಕಳಿಗೆ ಪೂರಕ ಪರಿಸರ: ಇಲ್ಲಿ ನ ಮಕ್ಕಳು, ಶಾಲೆಯಲ್ಲಿ ಯಾವುದೇ ರೀತಿಯ ಒತ್ತಡ ಇಲ್ಲದೇ ಅನುಭವ ಪೂರ್ವಕವಾಗಿ, ಸಹಜವಾಗಿ ಪಾಠಗಳನ್ನು ಕಲಿಯುತ್ತಿದ್ದಾರೆ. ಶಾಲೆಯಲ್ಲಿ ಯಾವುದೇ ಆಡಂಬರವಿಲ್ಲ. ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ಪರಿಸರ, ಕೊಠಡಿ, ಪಠ್ಯ ವಿಧಾನಗಳನ್ನು ಶಾಲೆ ಒಳಗೊಂಡಿದೆ. ದೀನಬಂಧು ಶಾಲೆ ವರ್ಷದಿಂದ ವರ್ಷಕ್ಕೆ ತನ್ನ ಪ್ರಭಾವಳಿ ವಿಸ್ತರಿಸಿಕೊಂಡು ಬೆಳೆಯುತ್ತಿದೆ. ಇದು ನಮ್ಮ ಶಿಕ್ಷಣ ಇಲಾಖೆಗೂ ಒಂದು ಹೆಮ್ಮೆಯ ವಿಚಾರ. ವಿದ್ಯಾರ್ಥಿಗಳಿಂದ ಇಲ್ಲಿ ಪಡೆಯುವ ಶುಲ್ಕ ಅತ್ಯಲ್ಪ. ಇಷ್ಟು ಕಡಿಮೆ ಶುಲ್ಕ ತೆಗೆದುಕೊಳ್ಳುತ್ತಾರೆಂದರೆ ನಂಬಲು ಕಷ್ಟವಾಗುತ್ತದೆ ಎಂದು ಹೇಳಿದರು.
ಅನುಭವದ ಕಲಿಕೆಯಾಗಲಿ: ದೀನಬಂಧು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಪ್ರೊ.ಜಿ.ಎಸ್. ಜಯದೇವ್ ಮಾತನಾಡಿ, ಶಿಕ್ಷಣ ನೆನಪಿನ ಆಟವಾಗಬಾರದು, ಅದು ಅನುಭವದ ಕಲಿಕೆಯಾಗಬೇಕು. ಜಾತಿ, ಧರ್ಮ, ಪಂಗಡಗಳನ್ನು ಮೀರಿ ಬೆಳೆಯಬೇಕು ಎಂಬ ಆಶಯದಿಂದ ದೀನಬಂಧು ಶಾಲೆ ಕೆಲಸ ಮಾಡುತ್ತಿದೆ. ಇಲ್ಲಿ ಜಾತಿ, ಧರ್ಮದ ಭೇದವಿಲ್ಲ. ಎಲ್ಲ ಮಕ್ಕಳೂ ಜಾತ್ಯತೀತೆಯ ಭಾವನೆಯಿಂದ ಬೆಳೆಯುತ್ತಿದ್ದಾರೆ.
ನಮ್ಮದು ಪರಿಸರ ಕಾಳಜಿಯುಳ್ಳ ಶಾಲೆ. ಇಲ್ಲಿನ ಮಕ್ಕಳೇ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕೆಂಬ ಉದ್ದೇಶದಿಂದ ಜಾಗೃತಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಶಾಲೆ ಕೇವಲ ಪಠ್ಯಕ್ಕೆ ಸೀಮಿತವಾಗದೇ, ಮಕ್ಕಳ ವ್ಯಕ್ತಿತ್ವ ನಿರ್ಮಿಸುವ ಕೆಲಸ ಮಾಡುತ್ತಿದೆ. ಶಾಲೆಯಿಂದ ಮುಂದಿನ ಹಂತದ ಶಿಕ್ಷಣಕ್ಕೆ ಹೋದ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯಿಂದ ಪ್ರತಿ ವರ್ಷ 8 ಲಕ್ಷ ರೂ.ಗಳಷ್ಟು ಸ್ಕಾಲರ್‌ಶಿಪ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಾಹಿತ್ಯ- ಸಂಸ್ಕೃತಿಯ ಸಂಗಮ: ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ನಡೆಯುವ ಮನರಂಜನಾ ಕಾರ್ಯಕ್ರಮಗಳು ಸಾಂಸ್ಕೃತಿಕ ಅಭಿರುಚಿಯನ್ನು ಬೆಳೆಸುವಂತಿರಬೇಕು. ನಮ್ಮ ದೇಶದ ಪರಂಪರೆ, ಸಾಹಿತ್ಯ, ಜಾನಪದವನ್ನು ಅಭಿವ್ಯಕ್ತಿಗೊಳಿಸಬೇಕು. ಹಾಗಾಗಿ ಶಾಲೆಯ ವಾರ್ಷಿಕೋತ್ಸವದ ಕಾರ್ಯಕ್ರಮಗಳು ಸಾಹಿತ್ಯ ಸಂಸ್ಕೃತಿಯ ಸಂಗಮವಾಗಿರುತ್ತವೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಅಕ್ಯೂರೆಕ್ಸ್ ಸಲ್ಯೂಶನ್ಸ್ ಕಂಪೆನಿಯ ನಿರ್ದೇಶಕರಾದ ಕೆ.ಎನ್. ರಾಮಮೋಹನ್ ಮತ್ತು ಜಿ.ಎಸ್. ಪದ್ಮಶ್ರೀ ಉದ್ಘಾಟಿಸಿದರು. ವಿಶೇಷ ಅಗತ್ಯವುಳ್ಳ ಮಕ್ಕಳ ಅಭಿವೃದ್ಧಿ ಮತ್ತು ಪುನರ್ವಸತಿ ಟ್ರಸ್ಟ್ ಕಾರ್ಯದರ್ಶಿ ದೀಪಕ್, ಅನುಕ್ತಾ ದೀಪಕ್, ನಿವೃತ್ತ ಶಿಕ್ಷಕ ಚನ್ನಂಜಯ್ಯ, ಗೌರವ ಶಿಕ್ಷಕ ವೇಣುಗೋಪಾಲ್, ಸಂಸ್ಥೆಯ ಆಡಳಿತಾಧಿಕಾರಿ ಪ್ರಜ್ಞಾ, ಮುಖ್ಯ ಶಿಕ್ಷಕ ಪ್ರಕಾಶ್ ಹಾಜರಿದ್ದರು. ದೀನಬಂಧು ಶಾಲೆಯ ಮಕ್ಕಳು ಕನ್ನಡ ಸಾಹಿತ್ಯವನ್ನಾಧರಿಸಿದ ಗೀತೆಗಳ ಸಂಗೀತ ನೃತ್ಯವನ್ನು ಪ್ರದರ್ಶಿಸಿದರು.