Advertisement

ನೀರಾವರಿಗೆ ಉತ್ತಮ ಬಜೆಟ್‌

07:46 PM Feb 17, 2023 | Team Udayavani |

ಪ್ರೊಫೆಸರ್‌ ನರಸಿಂಹಪ್ಪ, ನೀರಾವರಿ ತಜ್ಞ
ಭದ್ರಾ ಮೇಲ್ದಂಡೆ ಯೋಜನೆಯಲ್ಲಿನ ಆಂತರಿಕ ಸಮಸ್ಯೆಗಳನ್ನು ಸುಲಲಿತವಾಗಿ ಸರ್ಕಾರ ಪರಿಹರಿಸಬಹುದೆಂಬ ವಿಶ್ವಾಸವನ್ನಿಟ್ಟುಕೊಂಡು ಈ ಬಜೆಟ್‌ ಉತ್ತಮವಾಗಿದೆ ಎಂದು ನಾನು ಬಣ್ಣಿಸುತ್ತೇನೆ.

Advertisement

ತುಂಗಾ ನದಿಯಿಂದ ಭದ್ರಾ ಯೋಜನೆಗೆ ನೀರು ಹರಿಸುವುದು ಅತಿ ಮುಖ್ಯ. ತುಂಗಾ ನದಿಯಿಂದ ನೀರು ಹರಿಸದೇ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಳಿಸುತ್ತೇವೆಂದು ಸರ್ಕಾರ ಭಾವಿಸಿದರೆ ಈ ಯೋಜನೆ ವಿಫ‌ಲಗೊಳ್ಳುತ್ತದೆ. ಆದ್ದರಿಂದ ತುಂಗಾ ನದಿಯಿಂದ ಭದ್ರಾ ನದಿಗೆ ನೀರು ಹರಿಸಲು ಸರ್ಕಾರ ಯಾವ ರೀತಿ ಆದ್ಯತೆ ನೀಡುತ್ತದೆ ಎಂಬುದು ಗಮನಾರ್ಹ.

ಉಳಿದಂತೆ ಈ ಯೋಜನೆಗೆ ಕೇಂದ್ರ ಸರ್ಕಾರ 5,300 ಕೋಟಿ ರೂ. ನೀಡುವುದಾಗಿ ಪ್ರಕಟಿಸಿದ್ದು ರಾಜ್ಯ ಸರ್ಕಾರ ಸುಮಾರು 2,000 ಕೋಟಿ ರೂ. ಖರ್ಚು ಮಾಡಬಹುದೆಂಬ ನಿರೀಕ್ಷೆಯಿದೆ. ಯೋಜನೆಗೆ ವೇಗ ನೀಡಲು ಈ ವರ್ಷ ಇಷ್ಟು ಹಣ ಸಾಕಾಗಬಹುದು.

ಉಳಿದಂತೆ ಕಳಸಾ-ಬಂಡೂರಿ ಯೋಜನೆಗೆ ಒಂದು ಸಾವಿರ ಕೋಟಿ ರೂ. ಮೀಸಲಿಟ್ಟಿರುವ ಸರ್ಕಾರದ ಕ್ರಮವ ಸ್ವಾಗತಾರ್ಹ. ಕಳಸಾ ಬಂಡೂರಿ ನಾಲಾ ಯೋಜನೆಯಿಂದ ಹುಬ್ಬಳ್ಳಿ-ಧಾರವಾಡ ನಗರ ಮತ್ತದರ ಸುತ್ತಲಿನ ಭಾಗಕ್ಕೆ ಕುಡಿಯುವ ನೀರು ನೀಡುವುದರ ಜತೆಗೆ ಗದಗ ಜಿಲ್ಲೆಯ ಭಾಗಕ್ಕೂ ಯೋಜನೆ ವಿಸ್ತರಿಸಲು ಈ ಮೊತ್ತವನ್ನು ವಿನಿಯೋಗಿಸಬೇಕು.

ಇನ್ನು ಸರ್ಕಾರ ಸುಮಾರು ಒಂದೂವರೆ ಲಕ್ಷ ಎಕರೆ ಪ್ರದೇಶಕ್ಕೆ ನೀರುಣಿಸುವ ಯೋಜನೆ ಹೊಂದಿರುವುದಾಗಿ ಹೇಳಿದೆ. ಆದರೆ ಸರ್ಕಾರ ತನ್ನ ಯೋಜನೆಯನ್ನು ಸಮರ್ಪಕವಾಗಿ ಮತ್ತು ತ್ವರಿತವಾಗಿ ಜಾರಿಗೊಳಿಸಿದರೆ ಈ ವರ್ಷದಲ್ಲೇ ಸುಮಾರು ಆರು ಲಕ್ಷ ಎಕರೆ ಪ್ರದೇಶವನ್ನು ನೀರಾವರಿ ವ್ಯಾಪ್ತಿಗೆ ತರಬಹುದು. ಈ ನಿಟ್ಟಿನಲ್ಲಿ ಸರ್ಕಾರ ತನ್ನ ಇಚ್ಚಾಶಕ್ತಿ ಪ್ರದರ್ಶಿಸಬೇಕು.

Advertisement

ಉಳಿದಂತೆ ಕೆ.ಸಿ.ವ್ಯಾಲಿ ನೀರಿನ ಶುದ್ಧೀಕರಣ, ಎತ್ತಿನಹೊಳೆ ಯೋಜನೆಯ ಬಗ್ಗೆಯೂ ಉಲ್ಲೇಖವಿದೆ. ಹನಿ ನೀರಾವರಿಗೆ ಒತ್ತು ನೀಡಲಾಗಿದೆ. ಒಟ್ಟಾರೆಯಾಗಿ ಇದೊಂದು ಜನಸ್ನೇಹಿ ಬಜೆಟ್‌.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಜೆಟ್‌ನ ಮೂಲಕ ಉತ್ಪಾದನೆ ಹೆಚ್ಚಿಸುವ, ಸಂಪತ್ತು ಸೃಷ್ಟಿಸುವ, ಉದ್ಯೋಗ ಸೃಜಿಸುವ ಪ್ರಯತ್ನ ನಡೆಸಿದ್ದಾರೆ. ಮೀನುಗಾರರು, ನೇಕಾರರು ಮತ್ತು ಕರಕುಶಲ ಕರ್ಮಿಗಳಿಗೆ ಒತ್ತು ನೀಡಿದ್ದಾರೆ. ಆದರೆ ಗ್ರಾಮೀಣ, ಸಣ್ಣ ಮತ್ತು ದೊಡ್ಡ ಉದ್ದಿಮೆಗಳತ್ತ ಹೆಚ್ಚು ಗಮನಹರಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next