ರಾಮನಗರ: ಇತ್ತೀಚಿಗೆ ಬಂಪರ್ ಬೆಲೆಯಿಂದ ಸಾಕಷ್ಟು ಖುಷಿಯಾಗಿದ್ದ ವೀಳ್ಯೆದೆಲೆ ಬೆಳೆಗಾರರಿಗೆ ಇದೀಗ ಹೊಸ ಆತಂಕ ಎದುರಾಗಿದೆ. ವೀಳ್ಯೆದೆಲೆ ಬಳ್ಳಿಗಳಿಗೆ ಹೊಸದಾದ ರೋಗ ಕಾಣಿಸಿಕೊಂಡಿದ್ದು, ದಿನೇ ದಿನೆ ವ್ಯಾಪಕವಾಗುತ್ತಿರುವ ರೋಗದಿಂದ ಇಡೀ ವೀಳ್ಯೆದೆಲೆ ತೋಟ ನಾಶವಾಗುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.
ಪ್ರಮುಖ ವಾಣಿಜ್ಯ ಬೆಳೆ ಎನಿಸಿರುವ ವೀಳ್ಯೆದೆಲೆಯನ್ನು ಜಿಲ್ಲೆಯಲ್ಲಿ 2,500 ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆಯಲಾಗುತ್ತಿದೆ. ಇದರಲ್ಲಿ ಚನ್ನಪಟ್ಟಣದಲ್ಲಿ ಅತಿಹೆಚ್ಚು ವೀಳ್ಯೆದೆಲೆಯನ್ನು ಬೆಳೆಯುತ್ತಿದ್ದು, ಇದೊಂದು ತಾಲೂಕಿನಲ್ಲೇ 1,200 ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆಯಲಾಗುತ್ತಿದೆ. ಇದೀಗ ಚನ್ನಪಟ್ಟಣ ತಾಲೂಕಿನ ಭೂಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ವೀಳ್ಯೆದೆಲೆಗೆ ಹೊಸರೋಗ ಕಾಣಿಸಿಕೊಂಡಿದೆ.
ಏನಿದು ಹೊಸ ರೋಗ: ವೀಳ್ಯೆದೆಲೆಯ ಕಾಂಡಗಳ ಮೇಲೆ ಬಿಳಿಯ ಬಣ್ಣದ ಬೂಸ್ಟು ಕಾಣಿಸಿಕೊಳ್ಳುತ್ತಿದ್ದು, ಕ್ರಮೇಣ ಇದು ಇಡೀ ಬಳ್ಳಿಗೆ ಆವರಿಸಿ ಇಡೀ ಬಳ್ಳಿ ಕೊಳೆತು ಹೋಗುತ್ತದೆ. ಕಾಂಡಗಳಲ್ಲಿ ಬಿಳಿಯ ಬೂಸ್ಟು ಕಾಣಿಸಿಕೊಳ್ಳುತ್ತಿದ್ದಂತೆ ಎಲೆಗಳು ಮುರುಟಿಕೊಂಡು ಹಾಳಾಗುತ್ತಿದ್ದು, ತೋಟದಲ್ಲಿ ಬಳ್ಳಿಯೊಂದರಲ್ಲಿ ಕಾಣಿಸಿ ಕೊಳ್ಳುವ ಈ ರೋಗ ಕ್ರಮೇಣ ಇಡೀ ತೋಟಕ್ಕೆ ಹಬ್ಬಿ ಬೆಳೆಯನ್ನು ಹಾನಿ ಮಾಡುತ್ತಿದೆ. ರೈತರು ವರ್ಷಗಳ ಕಾಲ ಬೆಳೆದ ವೀಳ್ಯೆದೆಲೆ ತೋಟ ಸಂಪೂರ್ಣ ಹಾಳಾಗುತ್ತಿದೆ.
ತೀವ್ರ ಉಷ್ಣಾಂಶ ಕಾರಣ: ತೋಟಗಾರಿಕಾ ಇಲಾಖೆ ಅಧಿಕಾರಿಗಳ ಪ್ರಕಾರ ಇದು ಕಾಂಡ ಕೊಳೆತ ರೋಗವಾಗಿದ್ದು, ವಾತಾವರಣದಲ್ಲಿ ತೀವ್ರ ಬಿಸಿಲು ರೋಗಕ್ಕೆ ಕಾರಣವಾಗಿದೆ. ಸೈರೋಡಿಯಮ್ ರೋಲ್ಟ್ಸ್ ಎಂಬ ಶಿಲೀಂಧ್ರ ಈ ರೋಗಕ್ಕೆ ಕಾರಣವಾಗಿದ್ದು, ವಾತಾವರಣದಲ್ಲಿ 35ರಿಂದ 38 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶವಿದ್ದಾಗ ಈ ಶಿಲೀಂಧ್ರ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಟ್ತ್ರೈಕೋಡರ್ಮಾ ಪುಡಿಯನ್ನು ಪ್ರತಿ ಗಿಡಕ್ಕೆ 5 ಗ್ರಾಂ ನಂತೆ ಹಾಕುವುದು, ರೋಗ ಕಾಣಿಸಿಕೊಂಡ ಗಿಡವನ್ನು ಬೇರು ಸಮೇತ ಕಿತ್ತು ಸುಟ್ಟು ಹಾಕುವುದು ಹಾಗೂ ರೋಗ ಕಾಣಿಸಿಕೊಂಡ ಗಿಡದ ಬುಡದಲ್ಲಿ ಬಾವಸ್ಟಿನ್ ಹಾಕುವುದು ಪರಿಹಾರವಾಗಿದ್ದು, ವೀಳ್ಯೆ ದೆಲೆ ಗಳನ್ನು ತಿನ್ನಲು ಬಳಸುವುದರಿಂದ ಯಾವುದೇ ಕೀಟನಾಶಕವನ್ನು ಬಳಸಬಾರದು ಎಂದು ತಿಳಿಸಿದ್ದಾರೆ.
ವೀಳ್ಯೆದೆಲೆಗೆ ತಪ್ಪದ ಗಂಡಾಂತರ: ವೀಳ್ಯೆದೆಲೆ ಬೆಳೆಗೆ ಒಂದಿಲ್ಲೊಂದು ಗಂಡಾಂತರ ಎದುರಾಗುತ್ತಲೇ ಇದೆ. ಕಳೆದ ಮುಂಗಾರು ಅವಧಿಯಲ್ಲಿ ಸುರಿದ ಬಾರಿ ಮಳೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ವೀಳ್ಯೆದೆಲೆ ತೋಟಗಳು ಹಾನಿಯಾಗಿದ್ದವು. ಇನ್ನು ನವೆಂಬರ್‌ನಿಂದ ಜನವರಿವರೆಗೆ ಮೋಡ ಹಾಗೂ ತುಂತುರು ಮಳೆ ಸುರಿದ ಪರಿಣಾಮ ವೀಳ್ಯೆದೆಲೆ ಬಳ್ಳಿಗಳು ಸರಿಯಾಗಿ ಬೆಳವಣಿಗೆ ಹೊಂದಲಿಲ್ಲ. ಇನ್ನು ಜನವರಿಯಿಂದ ಮಾರ್ಚ್ ಮೊದಲ ವಾರದವರೆಗೆ ಮಳೆ ಇದ್ದ ಕಾರಣ ವೀಳ್ಯೆದೆಲೆ ಸರಿಯಾಗಿ ಚಿಗುರಲು ಸಾಧ್ಯವಾಗಲಿಲ್ಲ. ಇದೀಗ ಬಿಸಿಲಿನ ತೀವ್ರತೆಯಿಂದ ಕಾಂಡ ಕೊಳೆತ ರೋಗ ಕಾಣಿಸಿಕೊಂಡಿದ್ದು ಬೆಳೆಗೆ ಒಂದಿಲ್ಲೊಂದು ಗಂಡಾಂತರ ಎದುರಾಗಿದೆ.
ಬೆಲೆ ಇದ್ದರೂ ಪ್ರಯೋಜನವಿಲ್ಲ ವೀಳ್ಯೆದೆಲೆಗೆ ಸಾರ್ವಕಾಲಿಕ ದಾಖಲೆ ಬೆಲೆ ದೊರೆಯುತ್ತಿದೆ. ಮಾರ್ಚ್ ತಿಂಗಳಲ್ಲಿ ವೀಳ್ಯೆದೆಲೆ ಪ್ರತಿ ಪಿಂಡಿಗೆ(100 ಕಟ್ಟುಗಳು) 22 ಸಾವಿರ ರೂ.ವರೆಗೆ ತಲುಪಿತ್ತು. ಈಗಲೂ ಪ್ರತಿ ಪಿಂಡಿ ಎಲೆಗೆ 6ರಿಂದ 8ಸಾವಿರ ರೂ.ವರೆಗೆ ಬೆಲೆ ಇದೆ. ವೀಳ್ಯೆದೆಲೆಗೆ ಬಂಪರ್ ಬೆಲೆ ಸಿಗುತ್ತಿದೆಯಾದರೂ, ರೋಗ ಹಾಗೂ ಉತ್ಪಾದನೆ ಕಡಿಮೆಯಾಗಿ ರುವ ಪರಿಣಾಮ ರೈತರಿಗೆ ಯಾವುದೇ ಪ್ರಯೋಜನ ವಿಲ್ಲದಂತಾಗಿದೆ.
ರೋಗದ ಬಗ್ಗೆ ಮಾಹಿತಿ ಪಡೆದಿದ್ದು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಿಗೆ ಮಾಹಿತಿ ನೀಡಲಾಗಿದೆ. ವೀಳ್ಯೆದೆಲೆಯನ್ನು ನೇರವಾಗಿ ತಿನ್ನಲು ಬಳಸುವ ಕಾರಣ ಇದಕ್ಕೆ ಯಾವುದೇ ರೀತಿಯ ಔಷಧ ಸಿಂಪಡಣೆ ಮಾಡಲು ಅವಕಾಶವಿಲ್ಲ. ವಿಜ್ಞಾನಿಗಳನ್ನು ರೈತರ ತೋಟಕ್ಕೆ ಭೇಟಿ ಮಾಡಿಸಿ ಸೂಕ್ತ ಪರಿಹಾರ ಕೊಡಿಸಲಾಗುವುದು. ●
ವಿವೇಕ್, ಹಿರಿಯ ತೋಟಗಾರಿಕಾ ನಿರ್ದೇಶಕ, ತೋಟಗಾರಿಕಾ ಇಲಾಖೆ
– ಸು.ನಾ.ನಂದಕುಮಾರ್