ಬೆಟಗೇರಿ: ವಿದ್ಯಾರ್ಥಿ ಜೀವನ ಅಮೂಲ್ಯವಾದದು, ಶಾಲಾ ಮಕ್ಕಳು ಕಲಿಕಾ ಬದುಕು ಸದುಪಯೋಗ ಮಾಡಿಕೊಂಡು ಸಾಧನೆ ಮಾಡಬೇಕು. ಪಾಲಕರು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೂಡಿಸಲು ಮೊದಲು ಆದ್ಯತೆ ನೀಡಬೇಕು. ಬಾಲ್ಯ ವಿವಾಹ ಕಾನೂನಿನ ಪ್ರಕಾರ ಅಕ್ಷಮ್ಯ ಅಪರಾಧವಾಗಿದೆ ಎಂದು ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಪ್ರಾಧ್ಯಾಪಕಿ ಮತ್ತು ಸಾಹಿತಿ ಡಾ| ಮೈತ್ರೇಯಿಣಿ ಗದಿಗೆಪ್ಪಗೌಡರ ಹೇಳಿದರು.
ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ನ. 20ರಂದು ನಡೆದ ಮಾತೆಯರ ಸಮಾಗಮ ಹಾಗೂ ಬಾಲ್ಯ ವಿವಾಹ ಜಾಗೃತಿ ಅಭಿಯಾನದ “ಬೇಗ ಬೇಡ ಕೊರಳಿಗೆ ಉರುಳು’ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳಿಗೆ ಬೇಗ ವಿವಾಹ ಬೇಡ, ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೂಡಿಸಲು ಪ್ರತಿಯೊಬ್ಬ ತಂದೆ, ತಾಯಿ ಪ್ರಯತ್ನಿಸಬೇಕು.
ಇಂದಿನ ದಿನಮಾನಗಳಲ್ಲಿ ಬಾಲ್ಯ ವಿವಾಹ ನಿಯಂತ್ರಣಕ್ಕೆ ಪ್ರತಿಯೊಬ್ಬರು ಪ್ರಯತ್ನಿಸಬೇಕು ಎಂದರು. ಮುಖ್ಯಾಧ್ಯಾಪಕ ರಮೇಶ ಅಳಗುಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನೆಯಲ್ಲಿ ಮಕ್ಕಳ ಓದಿನ ಕಡೆ ತಂದೆ, ತಾಯಿ ವಿಶೇಷ ಗಮನ ಹರಿಸಿದರೆ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸುವುದರಲ್ಲಿ ಎರಡು ಮಾತಿಲ್ಲ ಎಂದರು.
ಸ್ಥಳೀಯ ಪಿಎಚ್‌ಸಿ ವೈದ್ಯಾಧಿಕಾರಿ ಎಸ್.ಪಿ.ತಂಬಾಕಿ ಮಾತನಾಡಿ, ಮಕ್ಕಳ ಸಮಗ್ರ ಬೆಳವಣಿಗೆ ಮತ್ತು ಒಳ್ಳೆಯ ಸಂಸ್ಕಾರ
ನೀಡುವಲ್ಲಿ ತಾಯಿಂದಿರ ಪಾತ್ರ ಮಹತ್ವದ್ದಾಗಿದೆ ಎಂದರು. ಬಾಲ್ಯ ವಿವಾಹ ನಿಯಂತ್ರಣ ಮಾಡುವುದಾಗಿ ಸ್ಥಳೀಯ ಆಶಾ-ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳ ತಾಯಂದಿರು, ಎಸ್‌ಡಿಎಮ್‌ಸಿ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಪ್ರತಿಜ್ಞೆ ಮಾಡಿದರು.
ತಾಪಂ ಮಾಜಿ ಸದಸ್ಯ ಲಕ್ಷ್ಮಣ ನೀಲಣ್ಣವರ, ಗ್ರಾಪಂ ಅಧ್ಯಕ್ಷೆ ತೇಜಸ್ವಿನಿ ನೀಲಣ್ಣವರ, ಬೆಟಗೇರಿ ವಲಯ ಸಿಆರ್‌ಪಿ ಮಲ್ಲನಗೌಡ ನಾಯ್ಕರ, ಲಲಿತಾ ಪಟಗಾರ, ರಾಮಣ್ಣ ನೀಲಣ್ಣವರ, ದುಂಡಪ್ಪ ದೇಯಣ್ಣವರ, ಹನುಮಂತ ಹಾಲಣ್ಣವರ ಇತರರಿದ್ದರು.