ಕಡಬ: ನಮ್ಮ ದೇಶೀಯ ಆಟವಾಗಿರುವ ಕಬಡ್ಡಿ ಇಂದು ಜನಪ್ರಿಯವಾಗುತ್ತಿರುವುದು ಸಂತಸದ ಸಂಗತಿ. ಯಾವುದೇ ಕ್ರೀಡಾಳು ನಿರಂತರ ಅಭ್ಯಾಸದಿಂದ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿಯ ಕೋಶಾಧಿಕಾರಿ ಯಜ್ನೇಶ್ ಆಚಾರ್ ಅಭಿಪ್ರಾಯಪಟ್ಟರು.
ಅವರು ಶನಿವಾರ ಮಂಗಳೂರು ವಿಶ್ವ ವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಸಹಕಾರದೊಂದಿಗೆ ಬಿಳಿ ನೆಲೆಯಲ್ಲಿ ಆಯೋಜಿಸಲಾಗಿರುವ 15 ದಿನಗಳ ಬಾಲಕ, ಬಾಲಕಿಯರ ಉಚಿತ ಕಬಡ್ಡಿ ತರಬೇತಿ ಶಿಬಿರ ಉದ್ಘಾಟಿಸಿದರು. ಬಿಳಿನೆಲೆ ನವನೀತ ಕ್ರೀಡಾ ಸಂಘದ ಕೋಶಾಧಿಕಾರಿ ಗಣಪಯ್ಯ ಗೌಡ ಪಿ. ಅಧ್ಯಕ್ಷತೆ ವಹಿಸಿದ್ದರು.
ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಸಂಚಾಲಕ ಜಯಸೀತಾರಾಮ ಎಂ., ಪ್ರಾಕ್ತನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯಕುಮಾರ್ ಬಿಳಿನೆಲೆ, ಮಂಗಳೂರು ವಿಶ್ವ ವಿದ್ಯಾ ನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಕಿರಣ ಆರಂಪಾಡಿ, ಕಬಡ್ಡಿ ತರಬೇತುದಾರ ಸಂದೀಪ್, ರಾಷ್ಟ್ರೀಯ ಕಬಡ್ಡಿ ಆಟಗಾರ ಸುಮಂತ್ ನೆಟ್ಟಣ, ಬಿಳಿನೆಲೆ ವೇದವ್ಯಾಸ ವಿದ್ಯಾಲಯದ ಮುಖ್ಯಶಿಕ್ಷಕ ಪ್ರಶಾಂತ್ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀಕೃಷ್ಣ ಶರ್ಮ ಸ್ವಾಗತಿಸಿದರು. ಶಿವರಾಮ ಗೌಡ ಏನೆಕಲ್ ಪ್ರಸ್ತಾವನೆಗೈದು, ವಂದಿಸಿದರು.
ಪ್ರೋತ್ಸಾಹ ಅಗತ್ಯ
ಗ್ರಾಮೀಣ ಪ್ರದೇಶದಲ್ಲಿ ಇರುವ ಕ್ರೀಡಾ ಪ್ರತಿಭೆಗಳಿಗೆ ತರಬೇತಿಯ ಕೊರತೆಯಿಂದಾಗಿ ಹೆಚ್ಚಿನ ಸಾಧನೆಯನ್ನು ತೋರ್ಪಡಿಸಲು ಅವಕಾಶಗಳು ಲಭಿಸುತ್ತಿಲ್ಲ. ಆದರೂ ಕ್ರೀಡೆಯಲ್ಲಿ ದೊಡ್ಡ ಸಾಧನೆಗಳನ್ನು ಮಾಡಿದವರು ಮೂಲತಃ ಗ್ರಾಮೀಣ ಪರಿಸರದ ಪ್ರತಿಭೆಗಳು. ಹಳ್ಳಿ ಪ್ರದೇಶದ ಕ್ರೀಡಾಪಟುಗಳು ಈ ರೀತಿಯ ಶಿಬಿರಗಳ ಪ್ರಯೋಜನವನ್ನು ಪಡೆದುಕೊಂಡು ಭವಿಷ್ಯದಲ್ಲಿ ಉತ್ತಮ ಸಾಧಕರಾಗಿ ಹೆಸರು ಪಡೆಯಬೇಕು ಎಂದು ಯಜ್ನೇಶ್ ಆಚಾರ್ ಆಶಿಸಿದರು.