Advertisement
ಮೇಲ್ನೋಟಕ್ಕೆ ಹೇಳುವುದಿದ್ದರೆ ಇದೊಂದು ಉತ್ತಮ ಬಜೆಟ್ ಎಂದು ಖಂಡಿತವಾಗಿಯೂ ಹೇಳಬಹುದು. ಮೂಲ ಸೌಕರ್ಯ, ಆರೋಗ್ಯ, ಕೃಷಿ ಕ್ಷೇತ್ರಕ್ಕೆ ಉತ್ತಮ ರೀತಿಯಲ್ಲಿ ಮುಂಗಡಪತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೊತ್ತ ಮೀಸಲು ಇರಿಸಿದ್ದಾರೆ.
ಚಿನ್ನ ಮತ್ತು ಬೆಳ್ಳಿ ಆಮದು ಸುಂಕ ಪ್ರಮಾಣವನ್ನು ಶೇ.12.5ರಿಂದ ಶೇ.10ಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದಾಗಿ ಹಳದಿ ಲೋಹದ ಬೆಲೆ ಇಳಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಅದಕ್ಕೆ ಪೂರಕವಾಗಿಯೇ ಸೋಮವಾರ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. ಸೋಂಕಿನ ಪ್ರಭಾವದಿಂದಾಗಿ ಆದಾಯ ಕೊರತೆಯಾದದ್ದನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಕೋವಿಡ್ ಸೆಸ್ ಅಥವಾ ಇತರ ಮಾರ್ಗಗಳ ಮೂಲಕ ದಾರಿ ಕಂಡುಕೊಳ್ಳಲಿದೆ ಕೇಂದ್ರ ಸರ್ಕಾರ ಎಂಬ ಹಲವು ಊಹೆಗಳು ವ್ಯಕ್ತವಾಗಿದ್ದವು. ದೇಶವಾಸಿಗಳ ಸಂಕಷ್ಟ ಅರ್ಥ ಮಾಡಿಕೊಂಡ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಂಥ ಯಾವುದೇ ಚಿಂತನೆ ಮಾಡಿಲ್ಲ. ಗೃಹ ಸಾಲಗಳ ಮೇಲೆ ಸದ್ಯ ನೀಡಲಾಗಿರುವ ತೆರಿಗೆ ವಿನಾಯಿತಿಯನ್ನು 2022ರ ಮಾ.31ರ ವರೆಗೆ ವಿಸ್ತರಿಸಲಾಗಿದೆ. ಇದು ಕೈಗೆಟಕುವ ಗೃಹ ಯೋಜನೆಯು ಮತ್ತಷ್ಟು ಹೆಚ್ಚಿನ ಜನರಿಗೆ ಲಭ್ಯವಾಗುವಂತೆ ಮಾಡಲು ಅನುಕೂಲವಾಗಲಿದೆ. ಇದರ ಜತೆಗೆ ಡಿಜಿಟಲ್ ವಹಿವಾಟು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು ಎನ್ನುವ ಉದ್ದೇಶದಿಂದ 10 ಕೋಟಿ ರೂ. ವರೆಗೆ ವಹಿವಾಟು ಹೊಂದಿರುವ ಕಂಪನಿಗಳಿಗೆ ಅಡಿಟ್ ನಡೆಸುವ ಪ್ರಕ್ರಿಯೆಯಿಂದ ವಿನಾಯಿತಿ ನೀಡಿರುವುದು ಸ್ತುತ್ಯರ್ಹವಾಗಿಯೇ ಇದೆ.