Advertisement

ತಡವಾದರೂ ಮಳೆಯಿಂದಾಗುವ ವಿಪತ್ತು ನಿರ್ವಹಣೆಗೆ ಎಚ್ಚೆತ್ತ ಬೆಸ್ಕಾಂ

01:31 PM Jun 07, 2017 | |

ಬೆಂಗಳೂರು: ಮುಂಗಾರು ಪೂರ್ವ ಮಳೆಯಿಂದಾದ ಹಾನಿಯ ನಂತರ ಎಚ್ಚೆತ್ತ ಬೆಸ್ಕಾಂ, ಈ ಬಾರಿಯ ಮುಂಗಾರಿಗೆ ಎದುರಾಗಬಹುದಾದ ಅವಾಂತರಗಳ ತ್ವರಿತ ಪರಿಹಾರಕ್ಕಾಗಿ “ವಿಪತ್ತು ನಿರ್ವಹಣಾ ತಂಡ’ ರಚನೆಗೆ ಮುಂದಾಗಿದೆ.

Advertisement

ಇದರಡಿ ಮೂರು ತಿಂಗಳ ಮಟ್ಟಿಗೆ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ, ಪ್ರತಿ ವಿಭಾಗದಲ್ಲಿ ವಿದ್ಯುತ್‌ ಉಪಕರಣಗಳ ಹೆಚ್ಚುವರಿ ದಾಸ್ತಾನು, ತ್ವರಿತ ಕಾಮಗಾರಿ ಕೈಗೆತ್ತಿಕೊಳ್ಳಲು ಪ್ರತಿ ವಿಭಾಗಗಳಿಗೆ ತಲಾ ಐದು ಲಕ್ಷ ರೂ. “ವಿಪತ್ತು ನಿರ್ವಹಣಾ ನಿಧಿ’, ಉಪ ವಿಭಾಗಗಳಲ್ಲಿ ಸಹಾಯವಾಣಿ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ.

ಈಚೆಗೆ ನಡೆದ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮೇ ಅಂತ್ಯದಲ್ಲಿ ಭಾರೀ ಗಾಳಿ ಸಹಿತ ಮಳೆಯಿಂದಾದ ಸಾಕಷ್ಟು ಹಾನಿ ಹಾಗೂ ಅದರಿಂದ ನಗರದ ಗ್ರಾಹಕರಿಗೆ ತೊಂದರೆ ಉಂಟಾಯಿತು. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ವಿಪತ್ತು ನಿರ್ವಹಣಾ ತಂಡ ರಚನೆಗೆ ತೀರ್ಮಾನಿಸಲಾಗಿದೆ.

ಸಾಮಾನ್ಯವಾಗಿ ಮಹಾನಗರ ವ್ಯಾಪ್ತಿಯಲ್ಲಿ ದೂರು ಬಂದ ಅರ್ಧಗಂಟೆಯಲ್ಲಿ ಸಮಸ್ಯೆ ಪರಿಹರಿಸಲಾಗುತ್ತಿದೆ. ಆದರೆ, ಮಳೆಗಾಲದಲ್ಲಿ ಒಂದೊಂದು ದಿನಕ್ಕೆ ಸಾವಿರಾರು ದೂರುಗಳು ಬರುತ್ತಿವೆ. ಈಗಿರುವ ಸಿಬ್ಬಂದಿ ಮತ್ತು ಇತರೆ ಸೌಲಭ್ಯಗಳಲ್ಲಿ ಇದು ಅಸಾಧ್ಯದ ಮಾತು. ಈಚೆಗೆ ಮಳೆಯಿಂದಾದ ಅವಾಂತರವೇ ಇದಕ್ಕೆ ಸಾಕ್ಷಿ ಎಂದು ಬೆಸ್ಕಾಂ ಮಂಡಳಿ ಸಭೆಯಲ್ಲಿ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು ಎನ್ನಲಾಗಿದೆ.

ಮರುಕಳಿಸದಿರಲು ಕ್ರಮ: ಏಪ್ರಿಲ್‌ ಮತ್ತು ಮೇನಲ್ಲಿ ಸುರಿದ ಗಾಳಿಸಹಿತ ಮಳೆಗೆ ನಗರ ವ್ಯಾಪ್ತಿಯಲ್ಲಿ ಒಟ್ಟಾರೆ 717 ವಿದ್ಯುತ್‌ ಕಂಬಗಳು ಬಿದ್ದಿವೆ. ಈ ಪೈಕಿ ಮೇ ತಿಂಗಳಲ್ಲೇ 646 ವಿದ್ಯುತ್‌ ಕಂಬಗಳು ನೆಲಕಚ್ಚಿದ್ದು, 36.41 ಕಿ.ಮೀ.ನಷ್ಟು ವಿದ್ಯುತ್‌ ಲೈನ್‌ ಹಾನಿಯಾಗಿದೆ. ಇದರಿಂದ 1.83 ಕೋಟಿ ರೂ. ನಷ್ಟವಾಗಿದೆ. ಅದರಲ್ಲೂ ಮೇ ತಿಂಗಳ ಕೊನೆಯ ಹತ್ತು ದಿನಗಳಲ್ಲೇ ಇಷ್ಟೊಂದು ಹಾನಿಯಾಗಿದೆ ಎಂದು ಬೆಸ್ಕಾಂ ಅಂದಾಜಿಸಿದೆ. ನಷ್ಟದ ಜತೆಗೆ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಎರಡು ದಿನಗಳಾದರೂ ವಿದ್ಯುತ್‌ ಸಂಪರ್ಕ ಇರಲಿಲ್ಲ. ಇದು ಮರುಕಳಿಸಬಾರದು ಎಂಬ ಕಾರಣಕ್ಕಾಗಿ ಈ ಬಾರಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬೆಸ್ಕಾಂ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಸಿಬ್ಬಂದಿ ರಜೆಗೂ ಕತ್ತರಿ: ಹೊರಗುತ್ತಿಗೆ ಆಧಾರದಲ್ಲಿ 500 ಮಂದಿ ಕೌಶಲ್ಯಯುತ “ಮುಂಗಾರು ಗ್ಯಾಂಗ್‌ಮೆನ್‌’ಗಳನ್ನು ನೇಮಿಸಲು ಆದೇಶ ಹೊರಡಿಸಲು ಸಿದ್ಧತೆ ನಡೆದಿದೆ. ಪ್ರತಿ ಉಪ ವಿಭಾಗಕ್ಕೆ ತಲಾ ಹತ್ತು ಮಂದಿ, ಜತೆಗೆ 200 ಟೆಲಿಫೋನ್‌ ಆಪರೇಟರ್‌ಗಳನ್ನೂ ನಿಯೋಜಿಸಲು ಉದ್ದೇಶಿಸಲಾಗಿದೆ. ಹಾಗೂ 500 ಕಿ.ವ್ಯಾ. ಸಾಮರ್ಥ್ಯದ 50 ಟ್ರಾನ್ಸ್‌ಫಾರ್ಮರ್‌ಗಳು ಸೇರಿದಂತೆ 700 ಟ್ರಾನ್ಸ್‌ಫಾರ್ಮರ್‌ಗಳನ್ನು ಮುಂಚಿತವಾಗಿ ದಾಸ್ತಾನು ಮಾಡಲು ಆದೇಶಿಸಲಾಗಿದೆ.

ಇದರೊಂದಿಗೆ ಮುಂಗಾರು ಮುಗಿಯುವವರೆಗೆ ಕ್ಷೇತ್ರಾಧಿಕಾರಿಗಳಿಗೆ ರಜೆ ಕೂಡ ನಿರ್ಬಂಧಿಸಲಾಗಿದ್ದು, ಅತ್ಯಂತ ತುರ್ತು ಇದ್ದರೆ ಮಾತ್ರ ರಜೆ ನೀಡತಕ್ಕದ್ದು ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಸೂಚಿಸಿದ್ದಾರೆ.
ಅಷ್ಟೇ ಅಲ್ಲ, ಬೆಸ್ಕಾಂ ವ್ಯಾಪ್ತಿಯಲ್ಲಿ 49 ಉಪ ವಿಭಾಗಗಳಿದ್ದು, ಅಲ್ಲಿರುವ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಎಇಇ) ಅಥವಾ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ಒಂದು ಲಕ್ಷ ನೀಡಿ, ಸಂದರ್ಭಕ್ಕೆ ಅನುಗುಣವಾಗಿ ಅಗತ್ಯಬಿದ್ದಲ್ಲಿ ಉಪಕರಣಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.

ಮೇ ತಿಂಗಳಲ್ಲಾದ ಹಾನಿ
* 646- ಗಾಳಿಸಹಿತ ಮಳೆಗೆ ಬಿದ್ದ ಕಂಬಗಳು
* 262- ಹಾನಿಯಾದ ಟ್ರಾನ್ಸ್‌ಫಾರ್ಮರ್‌ಗಳು
* 36.41 ಕಿ.ಮೀ- ಹಾನಿಯಾದ ವಿದ್ಯುತ್‌ ಮಾರ್ಗ
* 1.83 ಕೋಟಿ ರೂ.- ಬೆಸ್ಕಾಂಗೆ ಆದ ನಷ್ಟ

ಸಾಮಾನ್ಯವಾಗಿ ಪೂರ್ವ ಮುಂಗಾರಿನಲ್ಲಿ ವಿದ್ಯುತ್‌ ಕಂಬಗಳು, ಟ್ರಾನ್ಸ್‌ಫಾರ್ಮರ್‌ಗಳು ಹಾನಿಯಾಗುತ್ತವೆ. ಆದರೆ, ಈ ಬಾರಿ ಅಲ್ಪಾವಧಿಯಲ್ಲೇ ಹೆಚ್ಚು ಹಾನಿಯಾಗಿದೆ. ಈಗಿರುವ ವ್ಯವಸ್ಥೆಯಲ್ಲಿ ಇದರ ನಿರ್ವಹಣೆ ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಸೇರಿ ಹಲವು ಕ್ರಮ ಕೈಗೊಳ್ಳಲಾಗಿದೆ. 
-ಬಿ.ಕೆ.ಉದಯಕುಮಾರ್‌, ಮುಖ್ಯ ಎಂಜಿನಿಯರ್‌ (ಎಲೆಕ್ಟ್ರಿಕಲ್‌), ಬೆಸ್ಕಾಂ

* ವಿಜಯಕುಮಾರ್‌ ಚಂದರಗಿ 

Advertisement

Udayavani is now on Telegram. Click here to join our channel and stay updated with the latest news.

Next