Advertisement

ಅಭಿವೃದಿಯಿಲ್ಲದೆ ಅಕ್ರಮ ಚಟುವಟಿಕೆ ತಾಣವಾಗುತ್ತಿದೆ ಬೆಂಗ್ರೆ 

09:56 AM Oct 07, 2018 | Team Udayavani |

ಮಹಾನಗರ: ಪ್ರವಾಸಿತಾಣವಾಗಿ ಜನಾಕರ್ಷಣೆ ಪಡೆಯಬೇಕಾದ ಕಡಲಕಿನಾರೆಯೊಂದು ಅಭಿವೃದ್ಧಿ ಕಾಣದೆ ಅಕ್ರಮ ಚಟುವಟಿಕೆಯ ತಾಣವಾಗಿ ಮಾರ್ಪಾಡಾಗಿದೆ. ಇದು ಮಂಗಳೂರಿನ ಹೊರ ವಲಯದಲ್ಲಿರುವ ಬೆಂಗ್ರೆ ಪರಿಸರದ ಕಡಲು. ಪ್ರವಾಸೋದ್ಯಮ ಇಲಾಖೆಯ ಬೀಚ್‌ಗಳ ಪಟ್ಟಿಯಲ್ಲಿ ಸೇರದಿದ್ದರೂ, ಪ್ರವಾಸಿತಾಣವಾಗಿಯೇ ಗುರುತಿಸಿಕೊಂಡಿದೆ. ಮಂಗಳೂರು ಮೀನುಗಾರಿಕಾ ಬಂದರಿನಿಂದ ಜಲಮಾರ್ಗದಲ್ಲಿ ಸುಮಾರು ಒಂದು ಕಿ.ಮೀ. ದೂರ ಹಾಗೂ ನವ ಮಂಗಳೂರು ಬಂದರಿನಿಂದ ಹತ್ತು ಕಿ.ಮೀ. ದೂರದಲ್ಲಿ ಈ ಕಡಲಕಿನಾರೆ ಇದೆ. ಆದರೆ ಅಭಿವೃದ್ಧಿ ಕಾಣದೆ ಇರುವುದರಿಂದ ಆಕರ್ಷಣೆಯಿಂದ ದೂರ ಉಳಿದಿದೆ.

Advertisement

ಒಡಲಲ್ಲಿ ರಾಶಿ ತ್ಯಾಜ್ಯ!
ಈ ಕಡಲಕಿನಾರೆಯ ಸದ್ಯದ ಸ್ಥಿತಿ ಬಗ್ಗೆ ತಿಳಿದುಕೊಳ್ಳಲು ತೆರಳಿದ ‘ಸುದಿನ’ ತಂಡಕ್ಕೆ ಕಂಡಿದ್ದು, ಬೀಚ್‌ನ ಒಡಲು ಮತ್ತು ದಡದಲ್ಲಿ ರಾಶಿ ರಾಶಿ ತ್ಯಾಜ್ಯಗಳು. ಅಲ್ಲಲ್ಲಿ ಬಿದ್ದಿರುವ ಬಿಯರ್‌ ಬಾಟಲ್‌, ಒಡೆದ ಬಾಟಲ್‌ ಗಳಿಂದಾಗಿ ಕಾಲಿಟ್ಟರೆ ಗಾಯವಾಗುವ ಅಪಾಯದ ಸ್ಥಿತಿ ಇದೆ.

ಸಿಗರೇಟ್‌ ಪ್ಯಾಕೆಟ್‌ಗಳೂ ಅಲ್ಲಲ್ಲಿ ಬಿದ್ದು ಕೊಂಡಿರುವುದರಿಂದ ಇದು ಪಡ್ಡೆ ಹುಡುಗರ ಅಕ್ರಮ ಚಟುವಟಿಕೆಯ ತಾಣವಾಗಿ ಮಾರ್ಪಾಡಾಗಿರುವುದಂತು ಸತ್ಯ. ಸಮುದ್ರದ ಅಲೆಯಲ್ಲಿ ತೇಲಿ ಬರುವ ತ್ಯಾಜ್ಯಗಳು ದಡ ಸೇರದೆ ಮತ್ತೆ ಸಮುದ್ರದ ಒಡಲಿಗೇ ಸೇರುತ್ತಿರುವುದರಿಂದ ನೀರೆಲ್ಲ ತ್ಯಾಜ್ಯ ತುಂಬಿಕೊಂಡು ಗಲೀಜಾಗಿದೆ.

ಸಂಗಮ ಸ್ಥಳವಿದು
ಪಶ್ಚಿಮಕ್ಕೆ ಚಾಚಿಕೊಂಡಿರುವ ಅರಬೀ ಸಮುದ್ರ ಒಂದೆಡೆಯಾದರೆ, ಮತ್ತೊಂದೆಡೆ ನೇತ್ರಾವತಿ, ಫಲ್ಗುಣಿ ಮತ್ತು ವೈಶಾಖ ನದಿಗಳ ಸಂಗಮ ಸ್ಥಳ ಇದಾಗಿದೆ. ಮೂರೂ ನದಿಗಳು ಸಂಗಮಿಸಿ ಸಮುದ್ರಕ್ಕೆ ಸೇರುವ ವಿಹಂಗಮ ದೃಶ್ಯವನ್ನು ನೋಡಲು ಸಂಜೆ ಹೊತ್ತಿಗೆ ಇಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಹೆಚ್ಚಿನ ಜನರನ್ನು ಆಕರ್ಷಿಸಲು ಈ ತಾಣ ವಿಫಲವಾಗಿದೆ ಎನ್ನುತ್ತಾರೆ ಸ್ಥಳೀಯರಾದ ಲೋಕೇಶ್‌ ಸುವರ್ಣ.

ಮೂಲಸೌಕರ್ಯ ಕಲ್ಪಿಸಿ
ಸ್ಥಳೀಯ ನಿವಾಸಿಗಳು ಹೇಳುವ ಪ್ರಕಾರ, ಸಮುದ್ರ ಕೊರೆತ ತಡೆಯಲು ಕಲ್ಲು ಹಾಕಲಾಗಿದೆ. ಅಲ್ಲದೆ ಕುಳಿತುಕೊಳ್ಳಲು ಆಸನ ವ್ಯವಸ್ಥೆಯನ್ನೂ ಮಾಡಲಾಗಿದೆ. ಆದರೆ ಕಡಲು ನೋಡಲು ಈ ಕಲ್ಲಿನಲ್ಲೇ ನಡೆದು ಹೋಗಬೇಕಿದ್ದು, ನಡೆದಾಡುವುದೂ ಕಷ್ಟವಿದೆ. ಸ್ವಲ್ಪ ಎಚ್ಚರ ತಪ್ಪಿದರೂ, ಕಲ್ಲಿನ ಮಧ್ಯೆ ಬೀಳುವ ಅಪಾಯವಿದೆ. ಸಾರ್ವಜನಿಕ ಶೌಚಾಲಯ, ರೆಸ್ಟ್‌ ರೂಂ ಸಹಿತ ಯಾವುದೇ ಮೂಲಸೌಕರ್ಯ ಇಲ್ಲ. ಈ ಸೌಂದರ್ಯ ಕಣ್ತುಂಬಿಕೊಳ್ಳಲು ವೀಕ್ಷಣಾಗೋಪುರ ಬೇಕು. ಅಲ್ಲದೆ ಸಾರ್ವಜನಿಕ ಶೌಚಾಲಯ ವ್ಯವಸ್ಥೆ, ಸೀವಾಕ್‌ ಇದ್ದರೆ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಕ್ಕಂತಾಗುತ್ತದೆ ಎನ್ನುತ್ತಾರೆ ಲೋಕೇಶ್‌ ಸುವರ್ಣ.

Advertisement

ವಾರಾಂತ್ಯದಲ್ಲಿ ಕನಿಷ್ಠ 300 ಮಂದಿ ಬರುತ್ತಾರೆ
ಅಭಿವೃದ್ಧಿಯಲ್ಲಿ ಹಿಂದುಳಿದಿದ್ದರೂ, ಇಲ್ಲಿನ ಪರಿಸರ ಸೌಂದರ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ಆಗಮಿಸುತ್ತಾರೆ. ಅಳಿವೆ ಬಾಗಿಲಿನ ಬ್ರೇಕ್‌ ವಾಟರ್‌ ಮೇಲೆಯೂ ಪ್ರವಾಸಿಗರು ಆಗಮಿಸಿ ಸಂಜೆಯ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ರವಿವಾರ ಸುಮಾರು 300ಕ್ಕೂ ಹೆಚ್ಚು ಮಂದಿ ಬೀಚ್‌ ವೀಕ್ಷಣೆಗೆ ಬರುತ್ತಾರೆ. ಇತರ ದಿನಗಳಂದು ಕಡಿಮೆ ಎಂದರೂ 30 ಜನ ಆಗಮಿಸುತ್ತಾರೆ. ನವ ಮಂಗಳೂರು ಬಂದರಿನಿಂದ ಹಡಗಿನಲ್ಲಿ ವಿದೇಶಿ ಪ್ರವಾಸಿಗರು ಈ ಬೀಚ್‌ ನೋಡಲು ಆಗಮಿಸುತ್ತಾರೆ. 

ಈವರೆಗೆ ಅಭಿವೃದ್ಧಿ ಕಾರ್ಯ ನಡೆದಿಲ್ಲ
ಬೆಂಗ್ರೆ ಕಡಲ ಕಿನಾರೆಯಲ್ಲಿ ಪ್ರವಾಸಿಗರಿಗೆ ಸುಲಭವಾಗಲೆಂದು ನನ್ನ ಅನುದಾನದಲ್ಲಿ ಬೆಂಚ್‌ಗಳನ್ನು ಅಳವಡಿಸಲಾಗಿದೆ. ಸಮುದ್ರ ಕೊರೆತ ಉಂಟಾಗದಂತೆ ಎಡಿಬಿ ಯೋಜನೆಯಡಿ ಕಲ್ಲಿನ ತಡೆ ನಿರ್ಮಿಸಲಾಗಿದೆ. ಕಸ ತ್ಯಾಜ್ಯಗಳನ್ನು ಕೆಲ ಸಮಯಗಳ ಹಿಂದೆಯಷ್ಟೇ ಸಂಪೂರ್ಣ ವಿಲೇವಾರಿ ಮಾಡಿ ಶುಚಿಗೊಳಿಸಲಾಗಿತ್ತು. ಆದರೆ ಮತ್ತೆ ಅಲ್ಲಿ ತ್ಯಾಜ್ಯ ಎಸೆಯಲಾಗುತ್ತಿದೆ. ಕಸ ಎಸೆಯಬಾರದು ಎಂಬುದಾಗಿ ಜನರಿಗೆ ಸ್ವಯಂ ಅರಿವು ಬರಬೇಕು. ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲಿ ಈವರೆಗೆ ಅಭಿವೃದ್ಧಿ ಸಂಬಂಧಿಸಿದ ಪ್ರಕ್ರಿಯೆಗಳು ನಡೆದಿಲ್ಲ.
– ಮೀರಾ ಕರ್ಕೇರ, ಕಾರ್ಪೊರೇಟರ್‌

 ಸ್ಥಳೀಯಾಡಳಿತಕ್ಕೆ ಸಂಬಂಧಿಸಿದ್ದು
ಸ್ವದೇಶಿ ದರ್ಶನ ಯೋಜನೆಯಡಿ ಬೆಂಗ್ರೆ, ಸುಲ್ತಾನ್‌ಬತ್ತೇರಿ, ಸಸಿಹಿತ್ಲು, ಕೂಳೂರು ಸೇತುವೆ ಬಳಿಯಲ್ಲಿ ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಲು ಈಗಾಗಲೇ ಯೋಜನಾ ವರದಿಯನ್ನು ಸರಕಾರಕ್ಕೆ ಕಳುಹಿಸಲಾಗಿದೆ. ಆದರೆ ಬೆಂಗ್ರೆ ಕಡಲಕಿನಾರೆ ಅಭಿವೃದ್ಧಿ ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಸ್ಥಳೀಯಾಡಳಿತಕ್ಕೆ ಸಂಬಂಧಿಸಿದ್ದಾಗಿದೆ.
ಡಾ| ಉದಯ್‌ಶೆಟ್ಟಿ,
  ಸಹಾಯಕ ನಿರ್ದೇಶಕರು,
  ಪ್ರವಾಸೋದ್ಯಮ ಇಲಾಖೆ 

ಧನ್ಯಾ ಬಾಳೆಕಜೆ 

Advertisement

Udayavani is now on Telegram. Click here to join our channel and stay updated with the latest news.

Next