ರಾಮನಗರ: ಬೆಂಗಳೂರಿಗರ ಪಾಲಿನ ಅಚ್ಚುಮೆಚ್ಚಿನ ಪ್ರವಾಸಿ ತಾಣ ಎನಿಸಿರುವ ಕನಕಪುರ ತಾಲೂಕಿನ ಸಂಗಮ ಇದೀಗ ಡೆತ್‌ಸ್ಪಾಟ್ ಆಗಿ ಪರಿಣಮಿಸಿದೆ.
ಹೌದು…ಪದೇ ಪದೆ ಸಂಗಮದ ಬಳಿ ಕಾವೇರಿ ನದಿಯಲ್ಲಿ ನೀರಿನಲ್ಲಿ ಮುಳುಗಿ ಸಾವಿಗೀಡಾಗುತ್ತಿರುವ ಪ್ರಕರಣಗಳೇ ಇದಕ್ಕೆ ಸಾಕ್ಷಿಯಾಗಿದ್ದು, ಪ್ರತಿ ವರ್ಷ ಸರಾಸರಿ 10ಕ್ಕೂ ಹೆಚ್ಚು ಮಂದಿ ಕಾವೇರಿ ನದಿಯಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಸೋಮವಾರ ಬೆಂಗಳೂ ರಿನ ಐವರು ವಿದ್ಯಾರ್ಥಿಗಳು ಹೀಗೆ ನದಿಯಲ್ಲಿ ಜೀವ ಕಳೆದುಕೊಂಡ ಅಸಂಖ್ಯಾತರ ಪಟ್ಟಿಗೆ ಸೇರಿದ್ದಾರೆ.
ಕನಕಪುರ ತಾಲೂಕಿನ ಗಡಿಭಾಗದಲ್ಲಿರುವ ಕಾವೇರಿ ಮತ್ತು ಅರ್ಕಾವತಿ ನದಿಗಳು ಸೇರುವ ಸಂಗಮ ರಾಜಧಾನಿ ನಿವಾಸಿಗಳ ಹಾಟ್‌ಫೇವರಿಟ್ ಸ್ಥಳವಾಗಿದೆ. ಬೆಂಗಳೂರಿನಿಂದ 94 ಕಿ.ಮೀ. ದೂರದಲ್ಲಿರುವ ಈ ಸ್ಥಳ ವಾರಪೂರ್ತಿ ಕೆಲಸದ ಜಂಜಾಟದಲ್ಲಿ ಕಳೆಯುವ ಮಂದಿ, ವಾರಾಂತ್ಯದಲ್ಲಿ ಒಂದು ದಿನದಲ್ಲಿ ಹೋಗಿ ಬರಬಹುದಾದ ಪ್ರವಾಸಿತಾಣ ಇದಾಗಿದ್ದು, ಕಾವೇರಿ ನದಿಯಲ್ಲಿ ಆಟವಾಡಿ, ತೆಪ್ಪದ ಮೂಲಕ ನದಿಯ ಮತ್ತೂಂದು ದಡಕ್ಕೆ ಹೋಗಿ ಅಲ್ಲಿಂದ ಕಾವೇರಿ ನದಿ ಬಂಡೆಗಳ ನಡುವೆ ಕಿರಿದಾಗಿ ಹರಿಯುವ ಮೇಕೆದಾಟು ನೋಡಿ ಬರುವುದು ಪ್ರವಾಸಿಗರಿಗೆ ಅತ್ಯಂತ ಸಂತಸದ ಕ್ಷಣವಾಗಿದ್ದು, ಈ ಕಾರಣಕ್ಕಾಗಿ ಬೆಂಗಳೂರಿಗರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ವಾರದ ದಿನಗಳಲ್ಲಿ ಇಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಇದ್ದರೂ, ಶನಿವಾರ ಮತ್ತು ಭಾನುವಾರ ದಂತಹ ವಾರಾಂತ್ಯದ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಸಾವಿರಾರು ಸಂಖ್ಯೆಯಲ್ಲಿರುತ್ತದೆ. ಸಂಗಮ-ಮೇಕೆ ದಾಟು ಜೊತೆಗೆ ಚುಂಚಿಪಾಲ್ಸ್, ಗಾಳಿಬೋರೆ, ಮೊದಲಾದ ಸ್ಥಳಗಳನ್ನು ನೋಡಬಹುದಾದ ಕಾರಣ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಾರೆ. ನದಿ ಸುಮಾರು 500 ಮೀಟರ್‌ಗೂ ಹೆಚ್ಚು ವಿಸ್ತಾರವಾಗಿ ಸಂಗಮದ ಬಳಿ ಹರಿಯುತ್ತದೆ. ಈ ಜಾಗದಲ್ಲಿ ತಣ್ಣಗೆ ಹರಿಯುವ ನದಿ ಎಚ್ಚರ ತಪ್ಪಿದರೆ ಪ್ರವಾಸಿಗರ ಪ್ರಾಣವನ್ನು ಸದ್ದಿಲ್ಲದೆ ಕಸಿದು ಹೋಗುವಷ್ಟು ಅಪಾಯಕಾರಿ ಎನಿಸಿದೆ.
ಎಚ್ಚರಿಸಿದರೂ ಎಚ್ಚೆತ್ತುಕೊಳ್ಳದ ಪ್ರವಾಸಿಗರು: ಸಂಗಮದಲ್ಲಿ ನದಿ ಅಪಾಯಕಾರಿ ಸ್ಥಳವನ್ನು ಗುರುತಿಸಿರುವ ಅರಣ್ಯ ಇಲಾಖೆ ಅಲ್ಲಿಗೆ ಪ್ರವಾಸಿಗರು ಹೋಗಬಾರದು ಎಂದು ಹಗ್ಗಕಟ್ಟಿ ಗಡಿಯನ್ನು ಗುರುತಿಸಿದ್ದಾರೆ. ಇದರೊಂದಿಗೆ ಅರಣ್ಯ ಇಲಾಖೆ ವತಿಯಿಂದ ಸೂಚನಾ ಫಲಕವನ್ನು ಅಳವಡಿಸಲಾಗಿದೆ. ಆದರೂ, ನದಿಗಿಳಿಯುವ ಪ್ರವಾಸಿಗರು ಇವರ್ಯಾರ ಮಾತನ್ನು ಕೇಳದೆ ಮನಸೋಇಚ್ಛೆ ನದಿಯಲ್ಲಿ ಈಜಾಲು ಹೋಗಿ ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ. ಸಂಗಮದಲ್ಲಿ ಪ್ರವಾಸಿಗರು ಸಾಯುವುದಕ್ಕೆ ಮುಖ್ಯ ಕಾರಣ ನದಿಯಲ್ಲಿ ಯಾರಿಗೂ ತಿಳಿಯದಂತೆ ಇರುವ ಸುಳಿಗಳು. ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದಾಗ ಮರಳು ಹಾಗೂ ಬಂಡೆಗಳು ಕೊಚ್ಚಿ ಹೋಗಿ ಅಲ್ಲಲ್ಲಿ ಹಳ್ಳ, ಗುಂಡಿಗಳು ನಿರ್ಮಾಣಗೊಂಡಿರುತ್ತವೆ. ಈ ಜಾಗದಲ್ಲಿ ಸುಳಿಗಳು ನಿರ್ಮಾಣಗೊಂಡಿದ್ದು ಕೆಲವೆಡೆ 10 ಅಡಿಗಳಿಗಿಂತ ಆಳವಾದ ಸುಳಿಗಳಿವೆ. ನದಿಯ ಒಳಗೆ ಇರುವ ಈ ಸುಳಿಗಳನ್ನು ಸ್ಥಳೀಯರನ್ನು ಹೊರತು ಪಡಿಸಿದರೆ ಹೊರಗಿನವರು ಗುರುತಿಸುವುದು ಕಷ್ಟಸಾಧ್ಯ.
ನದಿಗೆ ಇಳಿಯುವ ಪ್ರವಾಸಿಗರು ಆಕಸ್ಮಾತ್ ಸುಳಿಗೆ ಕಾಲಿರಿಸಿದರೆ ಮೇಲೆದ್ದು ಬರುವುದು ಅಸಾಧ್ಯ. ಒಂದು ವೇಳೆ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರೆ ಶವವನ್ನು ಹುಡುಕುವುದು ಕಷ್ಟ ಸಾಧ್ಯ. ಸೋಮವಾರ ಐವರು ವಿದ್ಯಾರ್ಥಿಗಳು ಸಾವಿಗೀಡಾಗಿದ್ದಕ್ಕೆ ಸುಳಿಗೆ ಸಿಲುಕಿದ್ದೇ ಕಾರಣ.
ಈ ಸ್ಥಳದ ಸಂಪೂರ್ಣ ಜವಾಬ್ದಾರಿ ಪ್ರವಾಸೋದ್ಯಮ ಮತ್ತು ಅರಣ್ಯ ಇಲಾಖೆಗೆ ಸೇರಿದ್ದರೂ ನಾವು ಪ್ರಯಾಣಿಕರ ಸುರಕ್ಷತೆಗಾಗಿ ರಜಾದಿನ ಗಳಲ್ಲಿ ಸಿಬ್ಬಂದಿ ನಿಯೋಜಿಸುತ್ತೇವೆ. ವಾರದ ದಿನಗಳಲ್ಲಿ ನಿಯೋಜಿಸಲು ಸಿಬ್ಬಂದಿ ಕೊರತೆ ಇದೆ. ಈ ಬಗ್ಗೆ ಇಲಾಖೆ ಜತೆ ಚರ್ಚಿಸಿ ಪ್ರವಾಸಿಗರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು.
– ಕೃಷ್ಣ ಲಮಾಣಿ, ಪೊಲೀಸ್ ವೃತ್ತ ನಿರೀಕ್ಷಕ
– ಸು.ನಾ.ನಂದಕುಮಾರ್