Advertisement

ಬೆಂಗಳೂರು: 1,443 ಕಟ್ಟಡಗಳಲ್ಲಿ ಲೌಡ್‌ ಸ್ಪೀಕರ್‌ಗೆ ಅನುಮತಿ

05:41 PM Jul 29, 2022 | Team Udayavani |

ಬೆಂಗಳೂರು: ನಗರದಲ್ಲಿ ಲೌಡ್‌ ಸ್ಪೀಕರ್‌ ಅಳವಡಿಕೆ ಸಂಬಂಧಿಸಿದಂತೆ ಪೊಲೀಸ್‌ ಇಲಾಖೆ 1,443 ಕಟ್ಟಡಗಳಿಗೆ ಅನುಮತಿ ನೀಡಿದೆ. ಧಾರ್ಮಿಕ ಕೇಂದ್ರಗಳಿಂದಾಗುತ್ತಿರುವ ಶಬ್ದ ಮಾಲಿನ್ಯ ನಿಯಂತ್ರಣಕ್ಕಾಗಿ ಎಲ್ಲರೂ ಪೊಲೀಸರಿಂದ ಶಬ್ದ ಮಾಲಿನ್ಯ ಮಾಡುತ್ತಿಲ್ಲ ಎಂದು ದೃಢಪಡಿಸಿ ಪರವಾನಗಿ ಪಡೆಯುವಂತೆ ರಾಜ್ಯ ಸರ್ಕಾರ ಈ ಹಿಂದೆ ಸೂಚಿಸಿತ್ತು. ಅಲ್ಲದೆ ಬಿಬಿಎಂಪಿ, ಪೊಲೀಸ್‌ ಇಲಾಖೆ ಕೂಡ ಈ ಕುರಿತು ಅರ್ಜಿ ಸಲ್ಲಿಸುವಂತೆ ತಿಳಿಸಿತ್ತು.

Advertisement

ಅದರಂತೆ ಕಳೆದೆರಡು ತಿಂಗಳಲ್ಲಿ ನಗರ ಪೊಲೀಸ್‌ ಇಲಾಖೆಗೆ ಅನುಮತಿ ಕೋರಿ 1,532 ಅರ್ಜಿ ಸಲ್ಲಿಕೆಯಾಗಿದ್ದವು. ಅವುಗಳನ್ನು ಪರಿಶೀಲನೆ ನಡೆಸಿದ್ದ ಪೊಲೀಸರು ಸುಪ್ರೀಂಕೋರ್ಟ್‌ ಆದೇಶ ಹಾಗೂ ಶಬ್ದ ಮಾಲಿನ್ಯ (ರೆಗ್ಯುಲೇಷನ್‌ ಆ್ಯಂಡ್‌ ಕಂಟ್ರೋಲ್‌) ನಿಯಮ 2000 ಅಡಿಯಲ್ಲಿ ಷರತ್ತು ವಿಧಿಸಿ 1,443 ಕಟ್ಟಡಗಳಲ್ಲಿ ಲೌಡ್‌ ಸ್ಪೀಕರ್‌ ಅಳವಡಿಕೆಗೆ ಪರವಾನಗಿ ವಿತರಿಸಿದ್ದಾರೆ.

ಮಸೀದಿಗಳಿಂದಲೇ ಹೆಚ್ಚಿನ ಅರ್ಜಿ, ಪರವಾನಗಿ: ಅರ್ಜಿ ಸಲ್ಲಿಕೆಯಾದ ಪೈಕಿ ಮಸೀದಿಗಳಿಂದಲೇ ಅತಿ ಹೆಚ್ಚಿನ ಅರ್ಜಿ ಸಲ್ಲಿಕೆಯಾಗಿವೆ. ಅದರಂತೆ 797 ಮಸೀದಿಗಳಿಂದ ಲೌಡ್‌ ಸ್ಪೀಕರ್‌ ಅಳವಡಿಕೆ ಪರವಾನಗಿ ಕೋರಿ ಅರ್ಜಿ ಸಲ್ಲಿಸಲಾಗಿದೆ. ಉಳಿದಂತೆ 358 ಚರ್ಚ್ ಗಳಿಂದ, 308 ದೇವಸ್ಥಾನಗಳಿಂದ ಹಾಗೂ ಇತರ 69 ಕಟ್ಟಡಗಳಿಂದ ಅರ್ಜಿ ಸಲ್ಲಿಸಲಾಗಿದೆ. ಆ ಪೈಕಿ 762 ಮಸೀದಿಗಳಿಗೆ ಲೌಡ್‌ ಸ್ಪೀಕರ್‌ ಅಳವಡಿಕೆಗೆ ಅನುಮತಿಸಲಾಗಿದೆ. ಹಾಗೆಯೇ, 320 ಚರ್ಚ್‌ ಹಾಗೂ 295 ದೇವಸ್ಥಾನ ಹಗೂ 66 ಇತರ ಕಟ್ಟಡಗಳಲ್ಲಿ ಲೌಡ್‌ ಸ್ಪೀಕರ್‌ ಅಳವಡಿಸುವುದಕ್ಕೆ ಅನುಮತಿಸಲಾಗಿದೆ.

ಪೂರ್ವ ವಿಭಾಗದಲ್ಲಿ ಹೆಚ್ಚು: ನಗರ ಪೊಲೀಸರಲ್ಲಿರುವ 8 ವಿಭಾಗಗಳ ಪೈಕಿ ಪೂರ್ವ ವಿಭಾಗದಲ್ಲಿಯೇ ಅತಿ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ. ಅದರ ಪ್ರಕಾರ ಒಟ್ಟು 394 ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ 363 ಅರ್ಜಿಗಳನ್ನು ಪುರಸ್ಕರಿಸಿ ಲೌಡ್‌ ಸ್ಪೀಕರ್‌ ಅಳವಡಿಕೆಗೆ ಅನುಮತಿಸಲಾಗಿದೆ. ಹಾಗೆಯೇ ಎರಡು ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, 29 ಅರ್ಜಿಗಳ ಪರಿಶೀಲನಾ ಕಾರ್ಯ ನಡೆಸಲಾಗುತ್ತಿದೆ.

29 ಅರ್ಜಿಗಳು ತಿರಸ್ಕೃತ: ಶಬ್ದ ಮಾಲಿನ್ಯ ಮಾಡುವುದಿಲ್ಲ ಎಂಬ ಕುರಿತಂತೆ ಸಲ್ಲಿಸಲಾಗುವ ಪ್ರಮಾಣ ಪತ್ರದಲ್ಲಿನ ದೋಷ ಹಾಗೂ ಇನ್ನಿತರ ಕಾರಣಗಳಿಂದಾಗಿ 29 ಅರ್ಜಿಗಳನ್ನು ಪೊಲೀಸರು ತಿರಸ್ಕರಿಸಿದ್ದಾರೆ. ಅದರಲ್ಲಿ 6 ಮಸೀದಿಗಳು, 2 ದೇವಸ್ಥಾನ ಹಾಗೂ ಇತರ ಕಟ್ಟಡಗಳ 2 ಅರ್ಜಿಗಳಿಗೆ ಪರವಾನಗಿ ನೀಡಲು ಸಾಧ್ಯವಿಲ್ಲ ಎಂದು ಅರ್ಜಿ ತಿರಸ್ಕರಿಸಲಾಗಿದೆ. ಅದರ ಜತೆಗೆ 29 ಮಸೀದಿ, 11 ದೇವಸ್ಥಾನ, 38 ಚರ್ಚ್‌ ಹಾಗೂ ಇತರ ಕಟ್ಟಡದ ಒಂದು ಅರ್ಜಿಯ ಪರಿಶೀಲನಾ ಕಾರ್ಯ ನಡೆಸಲಾಗುತ್ತಿದೆ. ಅರ್ಜಿ ಜತೆ ಸಲ್ಲಿಸಿರುವ ದಾಖಲೆ ಹಾಗೂ ಸ್ಥಳ ಪರಿಶೀಲನೆಯ ನಂತರ ಅರ್ಜಿಯನ್ನು ಪುರಸ್ಕರಿಸಿ ಪರವಾನಗಿ ನೀಡಲಾಗುತ್ತದೆ. ಒಂದು ವೇಳೆ ನಿಯಮಕ್ಕೆ ವಿರುದ್ಧವಾದ ಅಂಶಗಳು ಪತ್ತೆಯಾದರೆ ಅರ್ಜಿ ತಿರಸ್ಕರಿಸಲಾಗುತ್ತದೆ.

Advertisement

ಸುಪೀಂಕೋರ್ಟ್‌ ಆದೇಶ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗಳ ನಿಯಮಗಳನ್ನಾಧರಿಸಿ ಧಾರ್ಮಿಕ ಕಟ್ಟಡಗಳಲ್ಲಿ ಧ್ವನಿವರ್ಧಕ ಅಳವಡಿಕೆಗೆ ಅನುಮತಿ ನೀಡಲಾಗಿದೆ. ಅದನ್ನು ಉಲ್ಲಂಘಿ ಸಿದರೆ ಅನುಮತಿ ರದ್ದುಪಡಿ ಸಿ ಧ್ವನಿವರ್ಧಕ ಅಳವಡಿಕೆ ನಿಷೇಧಿಸಲಾಗುವುದು.
● ಸುಬ್ರಹ್ಮಣ್ಯೇಶ್ವರ ರಾವ್‌, ಪೂರ್ವ
ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ

ಗಿರೀಶ್‌ ಗರಗ

Advertisement

Udayavani is now on Telegram. Click here to join our channel and stay updated with the latest news.

Next