Advertisement

ಬೆಂಗ್ಳೂರು-ಮೈಸೂರು ರಸ್ತೆ ವಿಶ್ವದರ್ಜೆಗೆ

12:23 PM Sep 18, 2018 | |

ಬೆಂಗಳೂರು: ಸಾಂಸ್ಕೃತಿಕನಗರಿ ಮೈಸೂರು ಹಾಗೂ ರಾಜಧಾನಿ ಬೆಂಗಳೂರು ನಡುವೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ರಾಜ್ಯ ಹೆದ್ದಾರಿಯನ್ನು ವಿಶ್ವದರ್ಜೆ ರಸ್ತೆಯನ್ನಾಗಿ ಪರಿವರ್ತಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ತಿಳಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು-ಬೆಂಗಳೂರು ನಡುವಿನ  ಪಟ್ಟಣಗಳಲ್ಲಿ ಪ್ರತ್ಯೇಕ ಎಲಿವೇಟೆಡ್‌ ರಸ್ತೆಗಳನ್ನು ನಿರ್ಮಿಸಲಾಗುವುದು. 800 ಕೋಟಿ ರೂ. ವೆಚ್ಚದಲ್ಲಿ ಮೈಸೂರಿನ ಹೊರವಲಯದ ಕೊಲಂಬಿಯಾ ಆಸ್ಪತ್ರೆ ಜಂಕ್ಷನ್‌, ರಾಮನಗರ, ಚನ್ನಪಟ್ಟಣ ಹಾಗೂ ಮಂಡ್ಯ ನಗರಗಳಲ್ಲಿ ಎಲಿವೇಟೆಡ್‌ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಈ ನಗರಗಳ ಹೊರವಲಯದಲ್ಲಿ ಹಾದು ಹೋಗುತ್ತದೆ. ಆದರೆ, ಈ ನಗರಗಳ ಕೇಂದ್ರ ಬಿಂದುವಿನಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವುದರಿಂದ ಈ ರಸ್ತೆ ನಿರ್ಮಾಣಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಇತ್ತೀಚೆಗೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಹೊಸ ರಸ್ತೆಯ ಅವಶ್ಯಕತೆ ಬಗ್ಗೆ ಮುಖ್ಯಮಂತ್ರಿಯವರು ಪ್ರಸ್ತಾಪ ಇಟ್ಟಾಗ ಸ್ಥಳದಲ್ಲೇ ಸಮ್ಮತಿ ನೀಡಿ ಪೂರ್ಣ ಪ್ರಸ್ತಾವನೆ ಕಳಿಸುವಂತೆ ಸೂಚಿಸಿದ್ದರು. ಕೇಂದ್ರದ ಸಲಹೆಯಂತೆ ಪೂರ್ಣ ಪ್ರಸ್ತಾವನೆಯನ್ನು ಈಗಾಗಲೇ ಕಳುಹಿಸಲಾಗಿದೆ ಎಂದರು.

ಪ್ರಸ್ತಾವನೆ ಪ್ರಕಾರ ನಗರ ಪ್ರದೇಶದ ವ್ಯಾಪ್ತಿಯಲ್ಲೂ 10 ಪಥದ ರಸ್ತೆ ಇರುತ್ತದೆ, ಈ ನಗರಗಳ ಕೇಂದ್ರ ಬಿಂದುವಿನಲ್ಲಿ ನಾಲ್ಕು ಪಥಗಳ ಎಲಿವೇಟೆಡ್‌ ರಸ್ತೆ ಕೂಡಿರುತ್ತದೆ ಎಂದು ಹೇಳಿದರು. ಈಗಾಗಲೇ ಈ ರಾಜ್ಯ ಹೆದ್ದಾರಿಯನ್ನು ವಿಶ್ವ ದರ್ಜೆಗೆ ಪರಿವರ್ತಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ.

Advertisement

ಪ್ರಯಾಣಿಕರು ಮತ್ತು ಸಾರ್ವಜನಿಕರಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಬಿಡದಿ (11 ಕಿ.ಮೀ), ರಾಮನಗರ-ಚನ್ನಪಟ್ಟಣ (23 ಕಿ.ಮೀ), ಮದ್ದೂರು ಹಾಗೂ ಮಂಡ್ಯ (ತಲಾ 11 ಕಿ.ಮೀ) ಹೊರವಲಯದಲ್ಲಿ ಬೈಪಾಸ್‌ ರಸ್ತೆ ಕಾಮಗಾರಿ ಆರಂಭಗೊಂಡಿದೆ. ರಾಷ್ಟ್ರದಲ್ಲೇ ಪ್ರಥಮ ಸ್ಥಾನದಲ್ಲಿರುವ ಗುತ್ತಿಗೆದಾರರೊಬ್ಬರಿಗೆ ಈ ರಸ್ತೆ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ವಹಿಸಿದೆ.

 ಕಾಮಗಾರಿ ಪೂರ್ಣಗೊಳಿಸಲು ಎರಡೂವರೆ ವರ್ಷಗಳ ಗಡುವು ನೀಡಲಾಗಿದೆ. ಆದರೆ ಒಂದೂವರೆ ವರ್ಷದಲ್ಲೇ ಮುಗಿಸಿಕೊಡುವುದಾಗಿ ಭ‌ರವಸೆ ನೀಡಿದ್ದಾರೆ ಎಂದು ರೇವಣ್ಣ ಮಾಹಿತಿ ನೀಡಿದರು.ಈ ನಡುವೆ ಕೇಂದ್ರ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಮೈಸೂರು-ಬೆಂಗಳೂರು ದಶಪಥ ರಸ್ತೆ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ಬೈಪಾಸ್‌ ಇರುವ ಕಡೆಗಳಲ್ಲಿ ಭೂಸ್ವಾಧೀನ ಕಾರ್ಯ ಪೂರ್ಣವಾಗಿದೆ. ಉಳಿದ ಭೂ ಸ್ವಾಧೀನ ಕಾರ್ಯ ಸದ್ಯದಲ್ಲೇ ಪೂರ್ಣಗೊಳ್ಳಲಿದೆ ಎಂದರು.

ಲೋಕೋಪಯೋಗಿ ಇಲಾಖೆ 2017-18ರಲ್ಲಿ 1764.32 ಕೋಟಿ ರೂ. ವೆಚ್ಚದಲ್ಲಿ ವಿವಿಧ ರಸ್ತೆ, ಸೇತುವೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿತ್ತು. ಆದರೆ, ವಿಧಾನಸಭೆ ಚುನಾವಣೆ ಎದುರಾಗಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾಮಗಾರಿ ನಿಲ್ಲಿಸಲಾಗಿತ್ತು. ಈಗ ಅದನ್ನು ಮುಂದುವರಿಸುವ ಸಂಬಂಧ ಮುಖ್ಯಮಂತ್ರಿಗಳು ಉನ್ನತಮಟ್ಟದ ಸಭೆ ನಡೆಸಿದ್ದು, ಸದರಿ ಯೋಜನೆಗಳಿಗೆ ಆರ್ಥಿಕ ಇಲಾಖೆ ಸಹಾ ಅನುಮತಿ ನೀಡಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next