ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ಸಮಸ್ಯೆಗಳನ್ನು ನಿಯಂತ್ರಿಸಲು ಪ್ರಥಮ ಬಾರಿಗೆ ನಗರದ ಸಂಚಾರ ದಕ್ಷಿಣ ವಿಭಾಗದಲ್ಲಿ ಡಿಸಿಪಿ ಶಿವಪ್ರಕಾಶ್ ದೇವರಾಜು ನೇತೃತ್ವದಲ್ಲಿ “ಜಾಯಿನ್ ದಿ ಕಮ್ಯೂಟ್’ ಎಂಬ ಅಭಿಯಾನ ಆರಂಭಿಸಲಾಗಿದೆ.
ಈ ಮೂಲಕ ಸಾರ್ವಜನಿಕರನ್ನು ಸಂಚಾರ ಸಮಸ್ಯೆಗಳ ಪರಿಹಾರದಲ್ಲಿ ಭಾಗಿಯಾಗಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ನಗರ ಸಂಚಾರ ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ನೇತೃತ್ವದಲ್ಲಿ ಖುದ್ದು ನಾಗರಿಕರ ಜತೆಗೆ ಸಂಚಾರದಲ್ಲಿ ಭಾಗವಹಿಸಲಿದ್ದು, ನಾಗರಿಕರು ತಮ್ಮ ದೈನಂದಿನ ಪ್ರಯಾಣದ ಮಾರ್ಗಗಳು ಮತ್ತು ಪ್ರಯಾಣದ ವಿಧಾನಗಳನ್ನು ನೋಂದಣಿ ಮಾಡಿಕೊಳ್ಳಲು ಆಹ್ವಾನಿಸಲಾಗಿದೆ. ಈ ಜಾಯಿನ್ ದಿ ಕಮ್ಯೂಟ್ ಅಭಿಯಾನದಿಂದ ಸಾರ್ವಜನಿಕರು ಮತ್ತು ಪೊಲೀಸರ ನಡುವಿನ ಅಂತರ ತಗ್ಗಿಸುವ ಪ್ರಯತ್ನವಾಗಿದೆ.
ಈ ಬಗ್ಗೆ ಮಾತನಾಡಿರುವ ಡಿಸಿಪಿ ಶಿವಪ್ರಕಾಶ್ ದೇವರಾಜು, ನಗರ ಸಂಚಾರ ಸಮಸ್ಯೆಗಳು ಕೇವಲ ಪೊಲೀಸರು ನಿರ್ವಹಿಸಬೇಕಾದ ಸಮಸ್ಯೆಗಳಲ್ಲ. ನಾಗರಿಕರು ಮತ್ತು ಪೊಲೀಸರು ಒಟ್ಟಾಗಿ ಪರಿಹರಿಸಬೇಕಾಗುತ್ತದೆ. ನಮ್ಮ ನಾಗರಿಕರು ಎದುರಿಸುವ ದೈನಂದಿನ ಸವಾಲುಗಳನ್ನು ಅರ್ಥಮಾಡಿಕೊಂಡು ಪರಿಹಾರಗಳನ್ನು ಕಂಡುಕೊಳ್ಳುವ ಅಗತ್ಯವಿದೆ.
ಈ ಅಭಿಯಾನದಿಂದ ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ನೈಜ ಸಮಯದಲ್ಲಿ ಅರ್ಥ ಮಾಡಿಕೊಳ್ಳಲು ಮತ್ತು ಪರಿಹರಿಸಲು ಅನುವು ಮಾಡಿಕೊಡಲಿದೆ. ನಾನು ರಸ್ತೆಗಳಲ್ಲಿ ನಾಗರಿಕರೊಂದಿಗೆ ಸಾಗುತ್ತೇನೆ. ಅದರಿಂದ ರಸ್ತೆ ಸಂಚಾರದ ಸಮಸ್ಯೆಗಳ ಬಗ್ಗೆ ತಿಳಿಯಲಿದೆ ಎಂದು ಹೇಳಿದರು.
ಡಿಸಿಪಿ ಜತೆಗೆ ಸಂಚರಿಸಲು ನೋಂದಾಯಿಸಿಕೊಳ್ಳಿ ಪ್ರಯಾಣಿಕರು ತಮ್ಮ ಪ್ರತಿದಿನದ ಪ್ರಯಾಣದ ಮಾರ್ಗಗಳು ಮತ್ತು ಸಂಚಾರ ಮಾಧ್ಯಮದ ವಿವರಗಳನ್ನು ಆನ್‌ಲೈನ್ (https://jointhecommutebstp.in) ಮೂಲಕ ನೋಂದಾಯಿಸಬೇಕು. ಬಳಿಕ ಡಿಸಿಪಿ ಜತೆಗೆ ಪ್ರಯಾಣಿಸುವ ಪ್ರಯಾಣಿಕರನ್ನು ಆಯ್ಕೆ ಮಾಡಲಾಗುತ್ತದೆ. ಪ್ರಯಾಣದ ವೇಳೆ ಸಂಚಾರ ಕಿರಿಕಿರಿ, ವಿಳಂಬ ಮತ್ತು ಸುರಕ್ಷತಾ ಸಮಸ್ಯೆಗಳನ್ನು ಡಿಸಿಪಿ ಗಮನಿಸುವುದರ ಜತೆಗೆ ಪ್ರಯಾಣಿಕರ ಅನುಭವಗಳನ್ನು ಆಲಿಸಲಿದ್ದಾರೆ.