ಬೆಂಗಳೂರು: ಇತಿಹಾಸ ಸೃಷ್ಟಿಸಲಿರುವ ಬೆಂಗಳೂರು ಕಂಬಳ -ನಮ್ಮ ಕಂಬಳದಲ್ಲಿ ಅಡ್ಡ ಹಲಗೆ ಹಾಗೂ ಕೆನೆ ಹಲಗೆ ವಿಭಾಗದಲ್ಲಿ ಬೋಲಾರದ ಕಾಟೆ-ಬಾರಕೂರಿನ ಕುಟ್ಟಿ ಸಿಲಿಕಾನ ಸಿಟಿಯಲ್ಲಿ ಗೆಲುವು ಸಾಧಿಸುವವರೇ? ಇವರನ್ನು ಬಿಟ್ಟು ಇನ್ಯಾರಾದರೂ ಗೆಲುವು ಸಾಧಿಸಬಹುದೇ ಎನ್ನುವ ಚರ್ಚೆಗಳು ಕಂಬಳದ ಮೈದಾನದಲ್ಲಿ ಪ್ರಾರಂಭವಾಗಿದೆ.
ಕರಾವಳಿಯಲ್ಲಿ ನಡೆಯುವ ಕಂಬಳದಲ್ಲಿ ಭಾಗವ ಹಿಸುವ ಕೋಣಗಳಲ್ಲಿ ಯಾರು ಗೆಲುವು ಸಾಧಿಸುವ ವರು, ಈ ಬಾರಿ ರೆಕಾರ್ಡ್ ಬ್ರೇಕ್ ಮಾಡುವವರು ಯಾರು ಎನ್ನುವ ಚರ್ಚೆಗಳು ಹುಟ್ಟಿಕೊಳ್ಳುವುದು ಸಾಮಾನ್ಯ. ಆದರೆ ಇತಿಹಾಸದಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳ ನಡೆಯುತ್ತಿದ್ದರೂ, ಗೆಲ್ಲುವ ಕೋಣ ಯಾವುದು ಎನ್ನುವ ಚರ್ಚೆ ಹಾಗೂ ಕುತೂಹಲ ಕರಾವಳಿ ಮೂಲದ ಬೆಂಗಳೂರಿಗರಲ್ಲಿ ಮೂಡಿದೆ. ಈ ಕ್ರೀಡಾಕೂಟದಲ್ಲಿ ಗೆಲುವು ಕೇವಲ ಅರ್ಧ ಅಥವಾ 1 ಸೆಕೆಂಡಿನಲ್ಲಿ ಗೆಲುವಿನ ವಿಜಯ ಲಕ್ಷ್ಮೀ ಬೇರೊಬ್ಬರಿಗೆ ಒಲಿದ ನಿರ್ದಶನಗಳಿವೆ.
ಬೋಲಾರ್ ಚಾಂಪಿಯನ್:
ಬೋಲಾರ್ ರಾಜ ಹಾಗೂ ಕಾಟಿ ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯ ಅಡ್ಡ ಹಲಗೆ ವಿಭಾಗದಲ್ಲಿ 2021-22ನೇ ವರ್ಷ ಕಾಟೆ ಕಳೆದ ಬಾರಿ ಭಾಗವಹಿಸಿದ 10 ಕಂಬಳದಲ್ಲಿಯೂ ಬಹುಮಾನ ಪಡೆದು ಚಾಂಪಿಯನ್ ಆಗಿ ಮೂಡಿ ಬಂದಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿರುವ ಕಂಬಳದಲ್ಲಿ ಕುಟ್ಟಿ ಹಾಗೂ ರಾಜೆ ಗೆಲುವು ಸಾಧಿಸಲು ಸಜ್ಜುಗೊಂಡಿದೆ. ಪ್ರಸ್ತುತ ಕುಟ್ಟಿಗೆ 17 ವರ್ಷ ಹಾಗೂ ರಾಜೆಗೆ 9 ವರ್ಷ ವಯಸ್ಸಾಗಿದೆ. ಒಮ್ಮೆ ಕಂಬಳದ ಕರೆಗೆ ಇಳಿದರೆ ಕಣ್ಣು ಮುಚ್ಚಿ ತೆರೆಯುವುದರೊಳಗೆ ಓಟವನ್ನು ಮುಗಿಸುವ ಕಲೆ ಈ ಜೋಡಿಗಿದೆ.
1 ಸೆಕೆಂಡಿನ ಗೆಲುವು:
2023-24ನೇ ಸಾಲಿನ ಮೊದಲ ಕಕ್ಕೆಪದವಿನಲ್ಲಿ ಕಂಬಳದ ಅಡ್ಡ ಹಲಗೆ ವಿಭಾಗದಲ್ಲಿ ನಾರಾವಿ ಕೋಣದ ತಂಡವನ್ನು ಕಾಟೆ ಜೋಡಿಯು ಕೇವಲ 1 ಸೆಕೆಂಡ್ ಅಂತರದಲ್ಲಿ ಸೋಲಿಸಿದೆ. 100 ಮೀಟರ್ ದೂರವನ್ನು ಕೇವಲ 11.082 ಸೆಕೆಂಡ್‌ನಲ್ಲಿ ಕ್ರಮಿಸಿದೆ. ಪ್ರಸ್ತುತ ಇದೇ ಎರಡು ತಂಡಗಳು ಕಂಬಳ ಸ್ಪರ್ಧೆಯಲ್ಲಿ ಮುಖಾಮುಖೀಯಾಗುವ ಸಾಧ್ಯತೆಗಳಿವೆ. ಈ ಜೋಡಿಗಳು ಸಿಲಿಕಾನ್ ಸಿಟಿ ನೆಲದಲ್ಲಿ ಹೇಗೆ ಓಡುತ್ತವೆ ಎನ್ನುವುದು ಇನ್ನಷ್ಟೇ ಕಾದು ನೋಡಬೇಕಿದೆ.
ಬಾರಕೂರು ಕುಟ್ಟಿ-ಪುಟ್ಟು ಜೋಡಿ:
ಬಾರಕೂರು ಕುಟ್ಟಿ-ಪುಡಿ ಜೋಡಿಯು ಕರಾವಳಿಯಲ್ಲಿ ನಡೆಯುವ ಕಂಬಳದಲ್ಲಿ ವಿಶೇಷ ಸಾಧನೆ ಮಾಡಿದೆ. ಕುಟ್ಟಿಯು ಕಳೆದ ಆರು ವರ್ಷದಿಂದ ಕೆನೆ ಹಲಗೆ ವಿಭಾಗದಲ್ಲಿ ಜೋಡುಕರೆ ಸುಮಾರು 75ಕ್ಕೂ ಅಧಿಕ ಮೆಡಲ್ ಹಾಗೂ ಬಡುಗು ಸಾಂಪ್ರಾದಾಯಿಕ ಕಂಬಳದಲ್ಲಿ 100ಕ್ಕೂ ಅಧಿಕ ಪದಕಗಳನ್ನು ಪಡೆದುಕೊಂಡಿದೆ. ಕುಟ್ಟಿ ಜೋಡಿಯು 2019-20 ಹಾಗೂ 2020-21ನೇ ಸಾಲಿನ ಚಾಂಪಿಯನ್ ಆಗಿದೆ.
ಕಾಟೆ-ರಾಜೆ ಕಿಲಾಡಿ ಜೋಡಿಗಳು ಕಳೆದ ಬಾರಿ ಅಡ್ಡ ಹಲಗೆ ವಿಭಾಗದಲ್ಲಿ ಭಾಗವಹಿಸಿದ 10 ಪಂದ್ಯದಲ್ಲೂ ಬಹುಮಾನ ಪಡೆದು ಚಾಂಪಿಯನ್ ಆಗಿದೆ. ಈ ಸಾಲಿನ ಮೊದಲ ಕಂಬಳದಲ್ಲಿಯೂ ಪದಕ ಪಡೆದುಕೊಂಡಿದ್ದು, ಬೆಂಗಳೂರು ಕಂಬಳದಲ್ಲಿಯೂ ಪದಕದ ನಿರೀಕ್ಷೆ ಇದೆ. ● ತ್ರಿಶಾಲ್ ಕೆ.ಪೂಜಾರಿ, ಬೋಲಾರ್ ಕೋಣಗಳ ತಂಡ ಮಾಲೀಕರು
ನಮ್ಮ ಕೋಣಗಳು ಸಂಪ್ರದಾಯಿಕ ಹಾಗೂ ಬಡಗು ಕಂಬಳದಲ್ಲಿ ಭಾಗವಹಿಸಿವೆ. ನೂರಾರು ಪದಕಗಳನ್ನು ಗಳಿಸಿದೆ. ಈ ಬಾರಿಯ ಬೆಂಗಳೂರು ಕಂಬಳದಲ್ಲಿ ಹೊಸ ರೆಕಾರ್ಡ್ ಮಾಡುವ ನಿರೀಕ್ಷೆ ಇದೆ. ● ಶಾಂತರಾಮಶೆಟ್ಟಿ, ಬಾರಕೂರು ಕಂಬಳ ಕೋಣದ ಮಾಲೀಕರು
ಶ್ರೀನಿವಾಸ ಗೌಡರ ಕೋಣದ ಮೇಲೆ ಎಲ್ಲರ ಚಿತ್ತ
ಕಂಬಳದ ಉಸೇನ್ ಬೋಲ್ಟ್ ಎಂದೇ ಖ್ಯಾತಿ ಪಡೆದಿರುವ ಶ್ರೀನಿವಾಸಗೌಡ ಓಡಿಸಲಿರುವ ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ ಅವರ ಮೂರು ಜೊತೆ ಕೋಣಗಳು ಓಟಕ್ಕೆ ಸಿದ್ಧಗೊಂಡಿವೆ. ಹಲವು ಕಂಬಳಗಳಲ್ಲಿ ಭಾಗವಹಿಸಿ 8 ಮೆಡಲ್ ಪಡೆದಿರುವ ಅಪ್ಪು-ಪಕ್ಕು ಜೋಡಿಯ ಮೇಲೆ ಕಂಬಳ ಪ್ರಿಯರಿಗೆ ಭಾರಿ ನಿರೀಕ್ಷೆ ಮೂಡಿದ್ದು, ಇವುಗಳ ಮೇಲಿನ ಬೆಟ್ಟಿಂಗ್ ಮೇನಿಯಾವೂ ಜೋರಾಗಿದೆ. ಕಳೆದ 2 ವರ್ಷದಿಂದ ಕಂಬಳ ಸ್ಫರ್ದೆಯಲ್ಲಿ ಪೈಪೋಟಿ ನೀಡುತ್ತಿರುವ ಕುದ್ರಿಪದವು ಭಂಡಾರ ಮನೆ ಪ್ರವೀಣ್ ಕುಮಾರ್‌ರ ಎರಡು ಜೊತೆ ಕೋಣಗಳೂ ನಿರೀಕ್ಷೆ ಹುಟ್ಟಿಸಿವೆ.
ಕೋಣಕ್ಕೂ ಇಸ್ಟ್ರಾ ಗ್ರಾಂ ಪೇಜ್!
ಬೋಲಾರ್‌ದ ಚಾಂಪಿಯನ್ ಕಾಟೆಗೂ ಇಸ್ಟಾಗ್ರಾಂನಲ್ಲಿ ವಿಶೇಷ ಪೇಜ್ ಇದೆ. ಟೀಮ್ ಬೋಲಾರ್ ಪೇಜ್‌ನಲ್ಲಿ 3,000 ಫಾಲೋವರ್ ಇದ್ದು, ಕಾಟೆಯ ಗೆಲುವಿನ ವಿವರ ಹಾಗೂ ಇತರೆ ಮಾಹಿತಿಗಳು ಇದರಲ್ಲಿ ಲಭ್ಯವಿದೆ ರಿಷಭ್ ಶೆಟ್ಟಿ ಗೆ ಟ್ರೈನಿಂಗ್ ನೀಡಿದ್ದ ಮಹೇಶ್ ಬೋಲಾರದ ಕಾಟೆ ಕೋಣವನ್ನು ಓಡಿಸುವವರು ಮಹೇಶ್ ಅವರು ಚಿತ್ರನಟ ರಿಷಭ್ ಶೆಟ್ಟಿ ಅವರಿಗೆ ಕಾಂತರ ಸಿನಿಮಾನದಲ್ಲಿ ಕಂಬಳದ ಕೋಣವನ್ನು ಓಡಿಸಲು ಟ್ರೈನಿಂಗ್ ನೀಡಿದವರು ಎನ್ನುವುದು ವಿಶೇಷ.
● ತೃಪ್ತಿ ಕುಮ್ರಗೋಡು