Advertisement

Bengaluru City: ಬೆಂಗಳೂರು ವಿಭಜನೆ ಅಲ್ಲ, ವಿಸ್ತಾರಕ್ಕೆ ಶಿಫಾರಸು

12:58 PM Jun 16, 2024 | Team Udayavani |

ಬೆಂಗಳೂರು: ಟೈರ್‌-1, ಟೈರ್‌-2 ಮತ್ತು ಟೈರ್‌-3 ಹಂತಗಳ ಪರಿಕಲ್ಪನೆ ಒಳಗೊಂಡ “ಗ್ರೇಟರ್‌ ಬೆಂಗಳೂರು’ ರಚಿಸಬೇಕು. ಅಲ್ಲದೆ, ಒಂದೇ ಸೂರಿನಡಿ “ಬೆಂಗಳೂರು ನಗರದ ಸಮಗ್ರ ಆಡಳಿತ ವ್ಯವಸ್ಥೆ’ಯನ್ನು ತರಬೇಕು.

Advertisement

-ಹೀಗಂತ ಬಿಬಿಎಂಪಿ ಪುನಾರಚನೆಗೆ ಸಂಬಂಧಿಸಿದಂತೆ ರಚಿಸಲಾಗಿದ್ದ ತಜ್ಞರ ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಆಡಳಿತಾತ್ಮಕ ಹಿತದೃಷ್ಟಿಯಿಂದ ಬಿಬಿಎಂಪಿ ಪುನರ್‌ ರಚಿಸಲು ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್‌. ಪಾಟೀಲ್‌ ನೇತೃತ್ವದಲ್ಲಿ ಸರ್ಕಾರ “ತಜ್ಞರ ಸಮಿತಿ’ಯನ್ನು ಸರ್ಕಾರ ರಚಿಸಿದ್ದು, ಈ ಸಮಿತಿ ಒಂದೇ ಸೂರಿನಡಿ ಇಡೀ ಆಡಳಿತ ವ್ಯವಸ್ಥೆ ಒಳಗೊಂಡ “ಗ್ರೇಟರ್‌ ಬೆಂಗಳೂರು’ ಸ್ಥಾಪನೆಗೆ ಸಲಹೆ ನೀಡಿದೆ. ಜತೆಗೆ ಮೊದಲ ಹಂತದ ನಗರಗಳು (ಟೈರ್‌-1), ಎರಡನೇ ಹಂತದ ನಗರಗಳು (ಟೈರ್‌-2), ಮೂರನೇ ಹಂತದ ನಗರ (ಟೈರ್‌-3)ಗಳಂತೆಯೇ ಬೆಂಗಳೂರು ಪುನಾರಚನೆ ಆಗಬೇಕಿದೆ ಎಂದು ಹೇಳಿದೆ.

2014ರಲ್ಲಿ ಬಿಬಿಎಂಪಿ ವಿಭಜಿಸಲು ವರದಿ ನೀಡಲು ರಚಿಸಲಾಗಿದ್ದ “ತಜ್ಞರ ಸಮಿತಿ’ಯನ್ನೇ ಸರ್ಕಾರ ಪುನರ್‌ ರಚಿಸಿದ್ದು, ಬಿ.ಎಸ್‌. ಪಾಟೀಲ್‌ ಅಧ್ಯಕ್ಷರಾ ಗಿರುವ ಸಮಿತಿಯಲ್ಲಿ, ಬಿಬಿಎಂಪಿ  ಮತ್ತು ಬಿಡಿಎ ಆಯುಕ್ತರಾಗಿದ್ದ ಸಿದ್ದಯ್ಯ ಮತ್ತು ಹಿಂದಿನ ಬೆಂಗಳೂರು ಅಜೆಂಡಾ ಕಾರ್ಯಪಡೆಯ ಸದಸ್ಯ ರವಿಚಂದರ್‌ ಅವರು ಕೂಡ ಸದಸ್ಯರಾಗಿದ್ದಾರೆ. ಈ ಬಗ್ಗೆ ಸಮಗ್ರ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ.

ಏನಿದು ಟೈರ್‌-1,ಟೈರ್‌ 2 ಹಂತದ ಪರಿಕಲ್ಪನೆ?: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಪುನರ್‌ ರಚನೆ ಸಮಿತಿ ಟೈರ್‌-1,ಟೈರ್‌-2, ಟೈರ್‌-3 ಹಂತಗಳ ಅಳವಡಿಕೆಗೆ ಸಲಹೆ ಮಾಡಿದೆ. ಮೊದಲ ಹಂತದಲ್ಲಿ ವಾರ್ಡ್‌, 2ನೇ ಹಂತದಲ್ಲಿ ಪಾಲಿಕೆ ಮತ್ತು ಮೂರನೇ ಹಂತದಲ್ಲಿ  “ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’  ರಚನೆ ಆಗಲಿ ಎಂಬುವುದು ತಜ್ಞರ ಅಭಿಪ್ರಾಯ ವಾಗಿದೆ. ಸರ್ಕಾರ ಎಷ್ಟು ವಾರ್ಡ್‌ಗಳನ್ನಾದರೂ ಮಾಡಲಿ, ಎರಡೂ¾ರು ಪಾಲಿಕೆಗಳನ್ನಾದರೂ ಮಾಡಲಿ. ಆದರೆ ಇಡೀ ಆಡಳಿತ ವ್ಯವಸ್ಥೆ ಮಾತ್ರ ಒಂದೇ ಸೂರಿನಡಿ ಬರಬೇಕು. ಆಗ ಬೆಂಗಳೂರು ಅಭಿವೃದ್ದಿಗೆ ಮತ್ತಷ್ಟು ಆದ್ಯತೆ ಸಿಗಲಿದೆ. ಇಡೀ ಆಡಳಿತ ವ್ಯವಸ್ಥೆ ಕೂಡ ಹಿಡಿತಕ್ಕೆ ಬರಲಿದೆ ಎಂಬುವುದು ತಜ್ಞರ ಮಾತಾಗಿದೆ. ಬಿಬಿಎಂಪಿ, ನಗರಾಭಿವೃದ್ಧಿ ಇಲಾಖೆ, ಬಿಡಿಎ, ಜಲಮಂಡಳಿ, ನಗರ ಭೂಸಾರಿಗೆ ನಿರ್ದೇಶ ನಾಲಯ (ಡಲ್ಟ್), ಬೆಂಗಳೂರು ಮೆಟ್ರೊಪಾಲಿಟನ್‌ ಭೂಸಾರಿಗೆ ಪ್ರಾಧಿಕಾರ (ಬಿಎಂಎಲ್‌ಟಿಎ), ನಗರ ಪೊಲೀಸ್‌,ಅಗ್ನಿಶಾಮಕ ಸೇವೆಗಳು, ಕೊಳಗೇರಿ ಮಂಡಳಿ, ಬಿಎಂಟಿಸಿ, ಬೆಸ್ಕಾಂ, ಬಿಎಂಆರ್‌ಸಿಎಲ್‌ ಮತ್ತು ಉಪ ನಗರ ರೈಲು ಮಂಡಳಿಗಳು ಸಮನ್ವಯದೊಂದಿಗೆ ಒಂದೇ ವೇದಿಕೆಯಡಿ ಕಾರ್ಯನಿರ್ವಹಿಸುವ ಬಗ್ಗೆ ವರದಿ ಬೆಳಕು ಚೆಲ್ಲಿದೆ.

Advertisement

ಬೆಂಗಳೂರಿನ ಹೊರವಲಯದಲ್ಲಿರುವ ಹಲವು ಪ್ರದೇಶಗಳು ವೇಗವಾಗಿ ಬೆಳೆಯುತ್ತಿವೆ. ಅವುಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸುವ ಆಲೋಚನೆಯನ್ನು ಸರ್ಕಾರ  ಹೊಂದಿದೆ. ಆ ನಿಟ್ಟಿನಲ್ಲೇ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜಿಸಿ ಲಂಡನ್‌ನಲ್ಲಿರುವಂತೆ ಗ್ರೇಟರ್‌ ಬೆಂಗಳೂರು ರಚನೆ ಬಗ್ಗೆ ಒಲವು ಹೊಂದಿದೆ. ಆದರೆ, ಪಾಲಿಕೆ ವಿಭಜನೆ ವಿಚಾರದಲ್ಲಿ ಸರ್ಕಾರ ಇನ್ನೂ ಗೊಂದಲದಲ್ಲೇ ಇದೆ.

ಬಿಬಿಎಂಪಿ ವಿಭಜಿಸುವ ಯಾವುದೇ ಶಿಫಾರಸು ಮಾಡಿಲ್ಲ :

ಬಿಬಿಎಂಪಿಯನ್ನು ಎರಡು ಅಥವಾ ಮೂರು ಭಾಗವನ್ನಾಗಿ ವಿಭಜಿಸುವ ಸಂಬಂಧ ಯಾವುದೇ ರೀತಿಯ ಸಲಹೆ ಅಥವಾ ಶಿಫಾರಸನ್ನು ಸಮಿತಿ ಸರ್ಕಾರಕ್ಕೆ ನೀಡಿಲ್ಲ. ಕೆಲವು ಮಾಧ್ಯಮಗಳಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು ನಾಲ್ಕೈದು ಭಾಗ ಮಾಡುವಂತೆ ತಜ್ಞರ ಸಮಿತಿ  ಶಿಫಾರಸು ಮಾಡಿದೆ ಎಂದು ವರದಿ ಮಾಡುತ್ತಿವೆ. ಆದರೆ ಅದೆ ಲ್ಲವೂ ಸತ್ಯಕ್ಕೆ ದೂರವಾಗಿದೆ. ಬಿಬಿಎಂಪಿಯನ್ನು ಇಂತಿಷ್ಟೇ ಭಾಗ ಮಾಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ ವಾಗಿದೆ ಎಂದು ತಜ್ಞರ ಸಮಿತಿಯಲ್ಲಿದ್ದ ಹಿರಿಯ ಸದಸ್ಯರೊಬ್ಬರು ಮಾಹಿತಿ ನೀಡಿದರು. ಈಗಾಗಲೇ ಬಿಬಿಎಂಪಿಯ ಘನತಾಜ್ಯ ಸಂಗ್ರಹಣೆ ಕೂಡ ಪ್ರತ್ಯೇಕ ಮಾಡಲಾಗಿದೆ. ಜಲಮಂಡಳಿ, ಬೆಸ್ಕಾಂ, ಮೆಟ್ರೋ, ಬಿಡಿಎ, ನಗರ ಪೊಲೀಸ್‌ ಸೇರಿದಂತೆ ಹಲವು ಇಲಾಖೆ ಗಳು ಬೇರೆ ಬೇರೆಯಡಿಯಲ್ಲಿ ಕಾರ್ಯ ನಿರ್ವಹಿ ಸುತ್ತಿವೆ. ಒಟ್ಟಾರೆ ಬೆಂಗಳೂರು ನಗರದ ಸಮಗ್ರ ಆಡಳಿತ ವ್ಯವಸ್ಥೆ ಒಂದೇ ವೇದಿಕೆಯಲ್ಲಿ ಬರಬೇಕು ಎಂಬುದು ನಮ್ಮ ಶಿಫಾರಸಿನ ಭಾಗವಾಗಿದೆ ಎಂದು ತಿಳಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಗ್ರೇಟರ್‌ ಬೆಂಗಳೂರು ರಚನೆಗಾಗಿ ಸಲಹೆಯನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

ಸರ್ಕಾರಕ್ಕೆ ಈಗಾಗಲೇ ವರದಿ ಸಲ್ಲಿಸಲಾಗಿದೆ. ಗ್ರೇಟರ್‌ ಬೆಂಗಳೂರು ರಚನೆಗಾಗಿ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಸರ್ಕಾರ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ನಮ್ಮ ಕೆಲಸವನ್ನು ನಾವು ಮಾಡಿ, ಈ ಸಂಬಂಧ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಕೆ ಮಾಡಿದ್ದೇವೆ.-ಸಮಿತಿ ಸದಸ್ಯ(ಹೆಸರು ಹೇಳಲು ಇಚ್ಛಿಸದ ಸದಸ್ಯ)

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next