Advertisement

ಬೆಂಗಳೂರು ಚಿತ್ರೋತ್ಸವದ ಸಿದ್ಧತೆ ಜೋರು ; 60 ದೇಶಗಳ 200 ಚಿತ್ರಗಳ ಪ್ರದರ್ಶನ

05:16 PM Feb 25, 2020 | Hari Prasad |

ಬೆಂಗಳೂರು: 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಪೂರ್ವಸಿದ್ಧತೆಗಳು ಭರದಿಂದ ಸಾಗುತ್ತಿವೆ. ಫೆ.26 ರಿಂದ ಮಾ. 4ರವರೆಗೆ ನಡೆಯುವ ಚಿತ್ರೋತ್ಸವದ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾಡಲಿದ್ದಾರೆ. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಮಾರೋಪ ಮಾ. 4 ರಂದು ವಿಧಾನಸೌಧದ ಬ್ಯಾಂಕ್ವೇಟ್‌ ಹಾಲ್‌ನಲ್ಲಿ ನಡೆಯಲಿದ್ದು, ರಾಜ್ಯಪಾಲ ವಜೂಭಾಯ್‌ ವಾಲಾ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Advertisement

ಚಿತ್ರೋತ್ಸವದ ಪೂರ್ವತಯಾರಿ ಬಗ್ಗೆ ಮಾಹಿತಿ ನೀಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌, ’12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಆಸ್ಟ್ರೇಲಿಯಾ, ಇಂಡೋನೇಶ್ಯಾ, ರಷ್ಯಾ, ಸಿಂಗಾಪೂರ್‌, ಪಿಲಿಪೀನ್ಸ್‌, ಶ್ರೀಲಂಕಾ ಸೇರಿದಂತೆ ಬೇರೆ ಬೇರೆ ದೇಶಗಳ ಖ್ಯಾತ ಸಿನಿಮಾ ನಿರ್ಮಾಪಕು, ನಿರ್ದೇಶಕರು, ವಿಮರ್ಶಕರು, ಪತ್ರಕರ್ತರು ಭಾಗವಹಿಸಲಿದ್ದಾರೆ.

ಒಟ್ಟು 60 ದೇಶಗಳ 200 ಚಿತ್ರಗಳ ಪ್ರದರ್ಶನ ಈ ಚಿತ್ರೋತ್ಸವದಲ್ಲಿ ಆಗಲಿದೆ. ಬೆಂಗಳೂರಿನ ಒರಾಯನ್‌ ಮಾಲ್‌ನ 11 ಪರದೆಗಳು, ನವರಂಗ್‌ ಚಿತ್ರಮಂದಿರ, ಕಲಾವಿದರ ಸಂಘದ ರಾಜ್‌ ಭವನ, ಬನಶಂಕರಿಯ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಫೆ.27 ರಿಂದ ಪ್ರದರ್ಶನ ಆರಂಭವಾಗಲಿದೆ’ ಎಂದು ಮಾಹಿತಿ ನೀಡಿದರು.


ಹಲವು ವಿಭಾಗಗಳಲ್ಲಿ ನಡೆಯಲಿದೆ ಚಿತ್ರೋತ್ಸವ
ಏಷ್ಯಾ ಚಿತ್ರಗಳ ಸ್ಪರ್ಧೆ, ಭಾರತೀಯ ಚಿತ್ರಗಳ ಸ್ಪರ್ಧೆ, ಕನ್ನಡ ಚಿತ್ರಗಳ ಸ್ಪರ್ಧೆ, ಕನ್ನಡ ಜನಪ್ರಿಯ ಮನರಂಜನಾ ಚಿತ್ರಗಳ ಸ್ಪರ್ಧೆ ನಡೆಯಲಿದೆ. ಜೊತೆಗೆ ಸಮಕಾಲೀನ ವಿಶ್ವಸಿನಿಮಾ, ದೇಶಕೇಂದ್ರಿತ ಸಿನಿಮಾ ಹಾಗೂ ಪುನರಾವಲೋಕನ ವಿಭಾಗಗಳಲ್ಲೂ ಚಿತ್ರ ಪ್ರದರ್ಶನ ನಡೆಯಲಿದೆ.

ಪುನರಾವಲೋಕನ ವಿಭಾಗದಲ್ಲಿ ರಷ್ಯಾದ ಖ್ಯಾತ ನಿರ್ದೇಶಕ ಆಂದ್ರೆ ತಾರ್ಕೊವ್‌ಸ್ಕಿ ಅವರ ಚಿತ್ರಗಳು ಹಾಗೂ ಬಹುಭಾಷಾ ನಟ ಅನಂತ್‌ನಾಗ್‌ ಅವರ ಚಿತ್ರಗಳ ಪ್ರದರ್ಶನಗಳು ನಡೆಯಲಿದೆ. ಇನ್ನು, ಸಿನಿಮಾದ 125ನೇ ವರ್ಷದ ನೆನಪಿಗೆ ವಿಶ್ವ ಸಿನಿಮಾದ ದಿಗ್ಗಜರಾದ ಚಾರ್ಲಿ ಚಾಪ್ಲಿನ್‌, ಬಸ್ಟರ್‌ ಕೀಟನ್‌, ಅಕಿರಾ ಕುರಸೋವಾ, ಜೀನ್‌ಲುಕ್‌ ಗೋಡಾರ್ಡ್‌, ಸತ್ಯಜಿತ್‌ ರೇ ಸೇರಿದಂತೆ ಹಲವು ಸಿನಿ ದಿಗ್ಗಜರ ಚಿತ್ರಗಳ ಪ್ರದರ್ಶನವೂ ನಡೆಯಲಿದೆ.

Advertisement

ಪ್ರಾದೇಶಿಕ ಭಾಷೆಗಳಾದ ತುಳು, ಕೊಂಕಣಿ, ಬಂಜಾರ, ಕೊಡವ ಸೇರಿದಂತೆ ಬೇರೆ ಬೇರೆ ಪ್ರಾದೇಶಿಕ ಭಾಷೆಗಳ ಚಿತ್ರ ಪ್ರದರ್ಶನವೂ ಆಗಲಿದೆ. ಭಾರತೀಯ ಸಂಗೀತ ಪರಂಪರೆ ಮತ್ತು ಸಿನಿಮಾ ವಿಷಯಾಧರಿತ ವಿಭಾಗದಲ್ಲಿ ಸಂಗೀತ ಪ್ರಧಾನ ಚಿತ್ರಗಳ ಪ್ರದರ್ಶನ ನಡೆಯಲಿದೆ. ಜೊತೆಗೆ ಆತ್ಮಕಥೆ-ವ್ಯಕ್ತಿಚಿತ್ರಗಳು ಎಂಬ ವಿಭಾಗವಿದ್ದು, ಇಲ್ಲಿ ಚಲನಚಿತ್ರ ನಿರ್ಮಾಪಕರ, ಸಾಹಿತಿಗಳ, ಕಲಾವಿದರ ಚಿತ್ರಪ್ರದರ್ಶನವಿರುತ್ತದೆ.

ಪ್ರತಿ ವರ್ಷದಂತೆ ಈ ವರ್ಷವೂ ಚಿತ್ರರಂಗಕ್ಕೆ ಸಂಬಂಧಪಟ್ಟ ವಿವಿಧ ವಿಷಯಗಳ ಕುರಿತಾದ ಕಾರ್ಯಾಗಾರ, ಸಂವಾದ ಕಾರ್ಯಕ್ರಮವಿದ್ದು, ದೇಶ-ವಿದೇಶದ ಸಿನಿಮಾ ನಿರ್ದೇಶಕರು, ನಿರ್ಮಾಪಕರು ಭಾಗಿಯಾಗಲಿದ್ದಾರೆ. ಚಿತ್ರೋತ್ಸವದಲ್ಲಿ ಸಿನಿಮಾ, ನೋಂದಣಿ ಕುರಿತ ಮಾಹಿತಿ www.biffes.inನಲ್ಲಿ ಲಭ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next