ಬೆಂಗಳೂರು: ಈ ಬಾರಿಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಸಿನೇಮಾಗಳ ವಿಭಾಗದಲ್ಲಿನ ಸ್ಪರ್ಧೆಗಳಿಗೆ ದೇಶದ ವಿವಿಧ ಭಾಗಗಳಿಂದ ಬಂದ ವೈವಿಧ್ಯಮಯ 13 ಚಿತ್ರಗಳು ನಾಮಿನೇಟ್ ಆಗಿವೆ. ಇವುಗಳಲ್ಲಿ ಎರಡು ಕನ್ನಡ ಚಿತ್ರಗಳು, ಒಂದು ಕೊಂಕಣಿ ಭಾಷೆಯ ಚಿತ್ರ ಹಾಗೂ ಒಂದು ತುಳು ಭಾಷಾ ಚಿತ್ರ ಸ್ಪರ್ಧಿಸುತ್ತಿರುವುದು ಕರ್ನಾಟಕದ ಭಾಷಾ ವೈವಿಧ್ಯತೆಗೆ ಸಾಕ್ಷಿಯಾಗಿದೆ.
ಹಾಗಾದರೆ ಭಾರತೀಯ ಭಾಷೆಗಳ ಸಿನೇಮಾ ಸ್ಪರ್ಧಾ ವಿಭಾಗವಾಗಿರುವ ‘ಚಿತ್ರ ಭಾರತಿ’ಯಲ್ಲಿ ಯಾವೆಲ್ಲಾ ಚಿತ್ರಗಳು ಸ್ಪರ್ಧಿಸುತ್ತಿವೆ ಎಂಬುದನ್ನು ನೋಡೋಣ ಬನ್ನಿ…
ದಯಾಳ್ ಪದ್ಮನಾಭನ್ ನಿರ್ದೇಶನದ ‘ರಂಗನಾಯಕಿ’ ಮತ್ತು ಸಚಿನ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿರುವ ‘ಒಂದು ಶಿಕಾರಿಯ ಕಥೆ’ ಕನ್ನಡ ಭಾಷೆಯನ್ನು ಪ್ರತಿನಿಧಿಸುವ ಚಿತ್ರಗಳಾದರೆ, ಆರ್. ಪ್ರೀತಂ ಶೆಟ್ಟಿ ನಿರ್ದೇಶನದ ‘ಪಿಂಗಾರ’ ತುಳು ಭಾಷೆಯನ್ನು ಈ ವಿಭಾಗದಲ್ಲಿ ಪ್ರತಿನಿಧಿಸುತ್ತಿದೆ. ಇನ್ನು ನಿತಿನ್ ಭಾಸ್ಕರ್ ನಿರ್ದೇಶನದ ಕೊಂಕಣಿ ಚಿತ್ರ ‘ಕಾಜ್ರೊ’ ಸಹ ಭಾರತೀಯ ಚಿತ್ರಗಳ ಸ್ಪರ್ಧೆಯಲ್ಲಿ ಪ್ರದರ್ಶನಗೊಳ್ಳಲಿದೆ.
ಇನ್ನುಳಿದಂತೆ ಈ ವಿಭಾಗದಲ್ಲಿ ಸ್ಪರ್ಧೆಗೆ ನಾಮಿನೇಟ್ ಆಗಿರುವ ಚಿತ್ರಗಳೆಂದರೆ: ಸಿದ್ಧಾರ್ಥ್ ತ್ರಿಪಾಠಿ ನಿರ್ದೇಶನದ ಛತ್ತೀಸ್ ಗಢ ಭಾಷೆಯ ಚಿತ್ರ ‘ಎ ಡಾಗ್ ಆಂಡ್ ಹಿಸ್ ಮ್ಯಾನ್’, ಸಮೀರ್ ಸಂಜಯ್ ವಿದ್ವಾನ್ಸ್ ನಿರ್ದೇಶನದ ಮರಾಠಿ ಚಿತ್ರ ‘ಆನಂದಿ ಗೋಪಾಲ್’, ಸಜಿನ್ ಬಾಬು ನಿರ್ದೇಶನದ ಮಲಯಾಳೀ ಚಿತ್ರ ‘ಬಿರಿಯಾನಿ’, ರಜನಿ ಬಸುಮತಾರಿ ನಿರ್ದೇಶನದ ಬೋಡೋ ಭಾಷಾ ಚಿತ್ರ ‘ಜ್ವಲ್ವಿ – ದಿ ಸೀಡ್’, ಅನಂತ್ ನಾರಾಯಣ್ ಮಹಾದೇವನ್ ನಿರ್ದೇಶನದ ಮರಾಠಿ ಚಿತ್ರ ‘ಮಾಯಿ ಘಾಟ್ – ಕ್ರೈಂ ನಂ. 103/2005’, ರಾಧಾಕೃಷ್ಣನ್ ಪಾರ್ತಿಬನ್ ನಿರ್ದೇಶನದ ತಮಿಳು ಚಿತ್ರ ‘ಒತ್ತ್ ತ್ತಾ ಸೆರುಪ್ಪು ಸೈಝ್ 7’, ಮಹೇಶ್ ವಾಮನ್ ಮಾಂಜ್ರೇಕರ್ ನಿರ್ದೇಶನದ ಮರಾಠಿ ಚಿತ್ರ ‘ಪಂಘ್ರುನಾ’, ಗೀತಾ ಜೆ ನಿರ್ದೇಶನದ ಮಲಯಾಳಂ ಚಿತ್ರ ‘ರನ್ ಕಲ್ಯಾಣಿ’ ಹಾಗೂ ಹಲಿತಾ ಶಮೀಮ್ ನಿರ್ದೇಶನದ ತಮಿಳು ಚಿತ್ರ ‘ಸಿಲ್ಲು ಕರುಪ್ಪಟ್ಟಿ’.