Advertisement

ರವಿವಾರ ಬೆಂಗಳೂರು ಚಿತ್ರೋತ್ಸವದಲ್ಲಿ ನೋಡಬಹುದಾದ ಸಿನಿಮಾಗಳು

04:22 PM Mar 07, 2022 | Team Udayavani |

ರವಿವಾರವೂ ಬೆಂಗಳೂರು ಚಿತ್ರೋತ್ಸವದಲ್ಲಿ ನೋಡಲಿಕ್ಕೆ ಒಂದಿಷ್ಟು ಚಿತ್ರಗಳಿವೆ. ಇದು ವಿಶ್ವ ಸಿನಿಮಾದ ಪಟ್ಟಿ. ಇದಲ್ಲದೇ ಭಾರತೀಯ ಸಿನಿಮಾಗಳಲ್ಲೂ ಒಂದಿಷ್ಟು ನೋಡಬಹುದಾದ ಸಿನಿಮಾಗಳಿವೆ.

Advertisement

ಚಾರ್ಲೋಟೆ- ಪರುಗ್ವೆ-2021- Simon Franco

ಈ ಸಿನಿಮಾ ಪರುಗ್ವೆ ದೇಶದ್ದು. ಸ್ಪ್ಯಾನಿಷ್‌ ನಲ್ಲಿದೆ. ಬಹಳ ಆಸಕ್ತಿಕರವಾದ ಸಿನಿಮಾ. ಅದರಲ್ಲೂ ಈ ಕಥಾನಾಯಕಿಯ ನಟನೆಯನ್ನು ನೋಡಲು ಈ ಸಿನಿಮಾ ನೋಡಬೇಕು. ಕಥೆಯ ಎಳೆ ಸಾಮಾನ್ಯ ಎನಿಸಬಹುದು. ಆದರೆ ಅದನ್ನು ತೆರೆಯ ಮೇಲೆ ತಂದಿರುವ ಬಗೆ ಚೆನ್ನಾಗಿದೆ. ಖ್ಯಾತ ನಟಿಯೊಬ್ಬಳು ತನ್ನ ಗತ ವೈಭವವನ್ನು ನೆನಪಿಸಿಕೊಳ್ಳುತ್ತಾ, ಮತ್ತೆ ವೈಭವವನ್ನು ಪಡೆಯಲು ಪ್ರಯತ್ನ ಪಡುವ ಬಗೆ.  ನಾನು ಹೇಗಿದ್ದೆ, ಹೇಗಿರಬೇಕಿತ್ತು, ಹೇಗಿದ್ದೇನೆ ಎನ್ನುವುದರ ಕುರಿತಾಗಿ ಪ್ರಶ್ನೆಯೊಂದು ಮನಸ್ಸಿನಲ್ಲಿ ಏಳುತ್ತದೆ. ಆಗ ಆರಂಭವಾಗುವ ಪಯಣವೇ ಈ ಸಿನಿಮಾ. ತನ್ನ ಭೂತ, ವರ್ತಮಾನದ ಜತೆಗೆ ಭವಿಷ್ಯದ ನೆಲೆ ಕಡೆಗೂ ಸಾಗುವ ಸಿನಿಮಾ. ಇದೊಂದು ಅಂತರಂಗದ ಪಯಣವೂ ಹೌದು. ಇದರಲ್ಲಿನ ನಟನೆಗೆ [ಆ್ಯಂಜೆಲಾ ಮೊಲಿನ] 52  ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿತ್ತು.

ಅನದರ್ ರೌಂಡ್-ಸ್ವೀಡನ್‌-2020- Thomas vinterberg

ಇದು ಡ್ಯಾನಿಷ್‌ ಭಾಷೆಯ ಸಿನಿಮಾ. ಲಘು ಹಾಸ್ಯದ ಧಾಟಿಯಲ್ಲಿರುವ ಸಿನಿಮಾ. ನಾಲ್ಕು ಮಂದಿ ಶಿಕ್ಷಕರು, ಮದ್ಯ ಸೇವನೆಯಿಂದ ಹೇಗೆ ನಮ್ಮ ಬದುಕು ಮತ್ತು ವೃತ್ತಿಯ ಮೇಲೆ ಪರಿಣಾಮ ಬೀರೀತೆಂಬುದನ್ನು ಪ್ರಯೋಗಕ್ಕೆ ಒಡ್ಡುವ ಕಥೆಯೇ ಇದರದ್ದು. ಕಥಾನಾಯಕನ ನಟನೆ ಬಹಳ ಚೆನ್ನಾಗಿದೆ. ಈ ಸಿನಿಮಾ ಕಳೆದ ವರ್ಷ ಅಂತಾರಾಷ್ಟ್ರೀಯ ಸಿನಿಮಾ ವಿಭಾಗದಲ್ಲಿ ಆಸ್ಕರ್‌ ಪ್ರಶಸ್ತಿ ಪಡೆದಿತ್ತು. ಜತೆಗೆ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಯನ್ನೂ ಪಡೆದಿತ್ತು.

Advertisement

ವ್ಹೀಲ್‌ ಆಫ್‌ ಫಾರ್ಚುನ್‌ ಆ್ಯಂಡ್‌ ಫ್ಯಾಂಟಸಿ- ಜಪಾನ್‌- 2021-Rysuke Hamaguchi

ಈ ಸಿನಿಮಾ ಜಪಾನಿನದ್ದು. ನಿರ್ದೇಶಕ ಮೂರು ಮಂದಿ ಮಹಿಳೆಯರ ಆಯ್ಕೆ ಮತ್ತು ವಿಷಾದಗಳನ್ನು ಹೇಳುವ ಕಥೆಯಿದು. ಆಯ್ಕೆ, ವಿಷಾದ, ವಿಧಿ ಎಲ್ಲದರ ಕುರಿತಾಗಿಯೂ ಇಲ್ಲಿ ಚಿತ್ರಿಸಲಾಗುತ್ತದೆ. ಮೂರು ಭಿನ್ನ ದಾರಿಗಳಲ್ಲಿ ಸಾಗುವ ಬದುಕಿನ ಪಥವನ್ನು ಆಯ್ಕೆ ಮತ್ತು ವಿಷಾದದ ಕೋನದಿಂದ ಗಮನಿಸಲು ಪ್ರಯತ್ನಿಸಿದೆ ಈ ಚಿತ್ರ. ಸಿನಿಮಾ ಕಟ್ಟಿಕೊಟ್ಟ ರೀತಿಗೆ ಬಹಳಷ್ಟು ಪ್ರಶಂಸೆ ವ್ಯಕ್ತವಾಗಿದೆ. ಕಾನ್‌ ಚಿತ್ರೋತ್ಸವದಲ್ಲೂ ಇದು ಪ್ರದರ್ಶನಗೊಂಡಿತ್ತು. ಡ್ರೈವ್‌ ಮೈ ಕಾರ್‌ ಚಿತ್ರದ ಜತೆಗೆ ಪ್ರಶಸ್ತಿಗೂ ಸೆಣಸಿತ್ತು. ಬರ್ಲಿನ್‌ ಚಿತ್ರೋತ್ಸವದಲ್ಲಿ ನಿರ್ದೇಶನಕ್ಕೆ ಗ್ರ್ಯಾಂಡ್‌ ಜೂರಿ ಪ್ರಶಸ್ತಿ ಪಡೆದಿದೆ.

ಪಾಯೆರ್ ತೋಲೆ ಮತಿ ನಾಹಿ- ಬಾಂಗ್ಲಾದೇಶ-2021- Mohammad Rabby Mridha

ಬಾಂಗ್ಲಾದೇಶದ ಸಿನಿಮಾ. ಒಬ್ಬ ಟ್ಯಾಕ್ಷಿ ಡ್ರೈವರ್ ದುಡಿಮೆಗಾಗಿ ಢಾಕಾ ನಗರಕ್ಕೆ ಬಂದು ಬದುಕನ್ನು ದಕ್ಕಿಸಿಕೊಳ್ಳಲು ನಡೆಸುವ ಪ್ರಯತ್ನ. ಅದರ ಮಧ್ಯೆಯೇ ತನ್ನೂರಿನಲ್ಲಿ ನದಿ ತೀರದಲ್ಲಿ ಇದ್ದ ಕುಟುಂಬ ಹಾಗೂ ನಗರದಲ್ಲಿ ಕಟ್ಟಿಕೊಂಡ ಪತ್ನಿಯೊಂದಿಗಿನ ಬದುಕು- ಎರಡನ್ನೂ ತೂಗಿಸಲು ಹೋಗಿ ಸೋಲುವವನ ಕಥೆ. ಇದು ಕಣ್ಣಿಗೆ ಕಾಣುವ ಕಥೆಯ ಸ್ಥೂಲ ರೂಪವಾದರೂ, ನಗರದ ಬದುಕಿನ ಒತ್ತಡ, ಅಸಹಾಯಕತೆ, ಹವಾಮಾನ ವೈಪರೀತ್ಯ, ಪ್ರವಾಹ, ಬಡತನ -ಹೀಗೆ ವಾಸ್ತವದ ಹಲವು ರೂಪಗಳನ್ನು ಹೇಳಲು ಪ್ರಯತ್ನಿಸುತ್ತದೆ.

ವೆದರ್‌ ದಿ ವೆದರ್‌ ಈಸ್ ಫೈನ್‌ – ಫಿಲಿಫೈನ್ಸ್‌- 2021- Carlo Francisco Manatad

ಈ ಸಿನಿಮಾ ಲೊಕೊರ್ನೊ, ಚಿಕಾಗೋ, ಟೊರೊಂಟೋ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. 2013 ರಲ್ಲಿ ಫಿಲಿಫೈನ್ಸ್ ಗೆ ಅಪ್ಪಳಿಸಿದ ಮಹಾ ಚಂಡ ಮಾರುತ [ಹಯಾನ್‌]ಕ್ಕೆ ಸಿಕ್ಕ ಅಮ್ಮ ಮತ್ತು ಮಗಳು ತಮ್ಮವರನ್ನು ಹುಡುಕಿಕೊಂಡು ಸೇರಲು ಪಡುವ ಹರಸಾಹಸವೇ ಸಿನಿಮಾದ ಕಥೆ. ಮೆಟ್ರೋ ಮನಿಲಾ ಸಿನಿಮೋತ್ಸವದಲ್ಲಿ ಎರಡನೇ ಅತ್ಯುತ್ತಮ ಚಿತ್ರದ ಪ್ರಶಸ್ತಿ ಇದಕ್ಕೆ ಲಭಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next