Advertisement

Bengaluru: ಡೆಂಘೀ ತಡೆಗೆ ಮನೆ ಮನೆ ಸಮೀಕ್ಷೆ- ಮುಖ್ಯ ಆಯುಕ್ತ

11:27 AM Jun 27, 2024 | Team Udayavani |

ಬೆಂಗಳೂರು: ನಗರದಲ್ಲಿ ಡೆಂಘೀ (Dengue) ಹರಡುವಿಕೆ ತಡೆಯುವ ಸಲುವಾಗಿ ಮನೆ-ಮನೆ ಸಮೀಕ್ಷೆ ನಡೆಸಿ ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೀ ಪ್ರಕರಣ ನಿಯಂತ್ರಿಸುವ ಸಂಬಂಧ ಪಾಲಿಕೆ ಕೇಂದ್ರ ಕಚೇರಿ ಸಭಾಂಗಣ-1ರಲ್ಲಿ ಬುಧವಾರ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಆಯಾ ವಲಯ ವ್ಯಾಪ್ತಿಯಲ್ಲಿ ಆರೋಗ್ಯ ಪರಿವೀಕ್ಷರು, ಆಶಾ ಕಾರ್ಯಕರ್ತೆಯರು, ಎ.ಎನ್‌. ಎಂ ಗಳು ಹಾಗೂ ಲಿಂಕ್‌ ವರ್ಕರ್ಸ್‌ಗಳು ಸೇರಿದಂತೆ ಸಾವಿರ ಮನೆಗಳಿಗೊಂದು ಬ್ಲಾಕ್‌ ಅನ್ನು ರಚಿಸಿಕೊಳ್ಳಬೇಕು. ನಂತರ ಲಾರ್ವಾ ಇರುವ ತಾಣಗಳನ್ನು ಗುರುತಿಸುವುದು, ನಾಗರಿಕರಲ್ಲಿ ಅರಿವು ಮೂಡಿಸುವುದು ಹಾಗೂ ಯಾರಿಗಾದರು ಜ್ವರ ಬಂದಿದ್ದಲ್ಲಿ ಅಂತಹವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಮಾಡಿಸಕೊಳ್ಳಲು ತಿಳಿಸುವುದು ಸೇರಿದಂತೆ ಸಮಗ್ರವಾಗಿ ಮನೆ-ಮನೆ ಸಮೀಕ್ಷೆ ನಡೆಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ನಗರದಲ್ಲಿ ಈ ವರ್ಷ ಜನವರಿಯಿಂದ ಜೂನ್‌ ವರೆಗೆ 1,230 ಪ್ರಕರಣಗಳು ಕಂಡು ಬಂದಿದ್ದು, ವಲಯವಾರು ಮೈಕ್ರೋ ಪ್ಲ್ರಾನ್‌ ಮಾಡಿಕೊಂಡು ಡೆಂಘೀ ಹರಡುವಿಕೆಯನ್ನು ನಿಯಂತ್ರಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ನಗರದಲ್ಲಿ ಮಳೆ ಬಿಟ್ಟು ಬಿಟ್ಟು ಬರುತ್ತಿರುವ ಹಿನ್ನೆಲೆಯಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಜಾಗೃತಿ ಚಟುವಟಿಕೆಗಳನ್ನು ಹೆಚ್ಚಾಗಿ ನಡೆಸಲಾಗುತ್ತಿದೆ. ಇದನ್ನು ಸರ್ಕಾರದ ಮಟ್ಟದಲ್ಲೂ ಮಾಡಲಾಗುತ್ತಿದ್ದು, ಪಾಲಿಕೆಯಿಂದಲೂ ಆಯಾ ವಲಯಗಳಲ್ಲಿ ಹಲವಾರು ಚಟುವಟಿಕೆಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಎನ್‌.ಎಸ್‌ 1 ಟೆಸ್ಟ್‌ ಕಿಟ್‌ ಮೂಲಕ ಡೆಂಘೀ ಪರೀಕ್ಷೆ

Advertisement

ನಗರದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗು ತ್ತಿರುವ ಹಿನ್ನೆಲೆಯಲ್ಲಿ ಜ್ವರ ಪ್ರಕರಣಗಳು ಕಂಡು ಬಂದರೆ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎನ್‌.ಎಸ್‌ 1 ಟೆಸ್ಟ್‌ ಕಿಟ್‌ ಮೂಲಕ ಪರೀಕ್ಷೆ ಮಾಡಿ ಖಚಿತವಾದ ಬಳಿಕ ರಕ್ತದ ಮಾದರಿ ಸಂಗ್ರಹಿಸಿಕೊಂಡು ಪ್ರಯೋಗಾಲಯಗಳಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.

15 ದಿನಕ್ಕೊಮ್ಮೆ ಮನೆ-ಮನೆ ಭೇಟಿ

ಪಾಲಿಕೆ ವ್ಯಾಪ್ತಿಯಲ್ಲಿ ಬರುವ 28 ಲಕ್ಷ ಮನೆಗಳ ಪೈಕಿ, 14 ಲಕ್ಷ ಮನೆಗಳು ಬಡ ವರ್ಗವಿರುವ ಪ್ರದೇಶ, ಜನ ಸಂಖ್ಯೆ ಹೆಚ್ಚಿರುವ ಪ್ರದೇಶ ಹಾಗೂ ತಗ್ಗು ಪ್ರದೇಶಗಳಲ್ಲಿರುವ 14 ಲಕ್ಷ ಮನೆಗಳಿಗೆ 15 ದಿನಕ್ಕೊಮ್ಮೆ ಭೇಟಿ ನೀಡಿ ಲಾರ್ವಾ ಉತ್ಪತ್ತಿ ತಾಣಗಳು ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡಲಾಗುವುದು. ಮನೆ-ಮನೆ ಸಮೀಕ್ಷೆ ಮಾಡುವ ಸಲುವಾಗಿ ನರ್ಸಿಂಗ್‌ ಕಾಲೇಜು ವಿದ್ಯಾರ್ಥಿಗಳು ಹಾಗೂ ಎನ್‌ಎಸ್‌ಎಸ್‌ ಸ್ವಯಂ ಸೇವಕರನ್ನು ನಿಯೋ ಜಿಸಿಕೊಳ್ಳಲು ಕ್ರಮವಹಿಸಲಾಗುತ್ತಿದೆ ಎಂದರು.

ಇಲಾಖೆಗಳ ಜೊತೆ ಸಮನ್ವಯ

ಡೆಂಘೀ ಪ್ರಕರಣಗಳನ್ನು ನಿಯಂತ್ರಿಸಲು ಮನೆ-ಮನೆಗಳಿಗೆ ಭೇಟಿ ನೀಡುವ ಜೊತೆಗೆ ತೋಟಗಾರಿಕಾ ಇಲಾಖೆ, ಅರಣ್ಯ ಇಲಾಖೆ, ಘನತ್ಯಾಜ್ಯ, ಬೃಹತ್‌ ನೀರುಗಾಲುವೆ, ರಸ್ತೆ ಮೂಲಭೂತ ಸೌಕರ್ಯ ವಿಭಾಗ ಸೇರಿದಂತೆ ಇನ್ನಿತರ ಇಲಾಖೆಗಳ ಜೊತೆ ವಲಯವಾರು ಸಮನ್ವಯ ಸಾಧಿಸಿ ನೀರು ನಿಲ್ಲುವ ಪ್ರದೇಶಗಳನ್ನು ಗುರುತಿಸಿ ನೀರು ನಿಲ್ಲದಂತೆ ಕ್ರಮವಹಿಸಲಾಗುವುದು ಎಂದು ಹೇಳಿದರು.

ಹೆಚ್ಚು ಪ್ರಕರಣಗಳಿರುವ ಪ್ರದೇಶಗಳಲ್ಲಿ ಸೂಕ್ತ ಕ್ರಮ

ಮಹದೇವಪುರ, ದಕ್ಷಿಣ ವಲಯ ಹಾಗೂ ಪೂರ್ವ ವಲಯಗಳಲ್ಲಿ ಹೆಚ್ಚು ಪ್ರಕರಣಗಳು ಕಂಡು ಬಂದಿದ್ದು, ಎಲ್ಲೆಲ್ಲಿ ಹೆಚ್ಚು ಪ್ರಕರಣಗಳು ಕಂಡು ಬಂದಿದೆಯೋ ಅಲ್ಲೆಲ್ಲಾ ಸೂಕ್ತ ಕ್ರಮಗಳನ್ನು ಕೈ ಗೊ ಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಈ ವೇಳೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸೂರಳ್ಕರ್‌ ವಿಕಾಸ್‌ ಕಿಶೋರ್‌, ಯೋಜನಾ ವಿಭಾಗದ ವಿಶೇಷ ಆಯುಕ್ತ ಡಾ. ಕೆ. ಹರೀಶ್‌ ಕುಮಾರ್‌, ವಲಯ ಆಯುಕ್ತರಾದ ಆರ್‌.ಎಲ್‌ ದೀಪಕ್‌, ರಮೇಶ್‌, ವಿನೋತ್‌ ಪ್ರಿಯಾ, ರಮ್ಯಾ, ಕರೀಗೌಡ, ರಮ್ಯಾ, ಎÇÉಾ ವಲಯ ಜಂಟಿ ಆಯುಕ್ತರು, ಆರೋಗ್ಯ ವೈದ್ಯಾಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next